ಸಂಸತ್ತಿನ ಈ ಅವಧಿಯಲ್ಲೇ 'ಒಂದು ರಾಷ್ಟ್ರ, ಒಂದು ಚುನಾವಣೆ' ಜಾರಿ ಸಾಧ್ಯತೆ

ಪ್ರತಿಪಕ್ಷಗಳ ವಿರೋಧದ ನಡುವೆಯೂ ಪ್ರಧಾನಿ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದರು. ಜಾರಿಗೊಂಡಲ್ಲಿ ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಏಕಕಾಲಕ್ಕೆ ನಡೆಯಲಿದೆ.;

Update: 2024-09-16 06:06 GMT

ನರೇಂದ್ರ ಮೋದಿ ಸರ್ಕಾರ ಇದೇ ಅವಧಿಯಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ' ನೀತಿಯನ್ನು ಜಾರಿಗೆ ತರಲು ಸಜ್ಜಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಕ್ರಮಕ್ಕೆ ಪಕ್ಷಾತೀತವಾಗಿ ಬೆಂಬಲ ಸಿಗಲಿದೆ. ಖಂಡಿತವಾಗಿಯೂ ಈ ಅಧಿಕಾರಾವಧಿಯಲ್ಲೇ ಜಾರಿಗೊಳಿಸಲಾಗುತ್ತದೆ ಎಂದು ಮೂಲವೊಂದು ತಿಳಿಸಿದೆ. 

ಮಾಜಿ ರಾಷ್ಟ್ರಪತಿ ಕೋವಿಂದ್ ಸಮಿತಿ ಶಿಫಾರಸು

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಹಾಗೂ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿದೆ. 

ಏಕಕಾಲಿಕ ಚುನಾವಣೆಗಳಿಂದ ಸಂಪನ್ಮೂಲ ಉಳಿತಾಯ, ಅಭಿವೃದ್ಧಿ ಮತ್ತು ಸಾಮಾಜಿಕ ಒಗ್ಗಟ್ಟು ಹೆಚ್ಚಲಿದೆ, ಪ್ರಜಾಪ್ರಭುತ್ವದ ಅಡಿಪಾಯ ಭದ್ರಗೊಳ್ಳಲಿದೆ ಮತ್ತು ಇಂಡಿಯಾ ಎಂದರೆ ಭಾರತ ಎಂಬ ಆಶಯವನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂದು ಸಮಿತಿ ವರದಿಯಲ್ಲಿ ಹೇಳಿದೆ. 

ಸಮಿತಿಯ ಶಿಫಾರಸುಗಳ ಕಾರ್ಯಗತಗೊಳಿಸುವುವಿಕೆಯನ್ನು ಪರಿಶೀಲಿಸಲು 'ಅನುಷ್ಠಾನ ಗುಂಪು' ರಚನೆಯನ್ನು ಪ್ರಸ್ತಾಪಿಸಿದೆ. ಸಮಿತಿ 18 ಸಾಂವಿಧಾನಿಕ ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ; ಅವುಗಳಲ್ಲಿ ಹೆಚ್ಚಿನವಕ್ಕೆ ವಿಧಾನಸಭೆಗಳ ಅನುಮೋದನೆ ಅಗತ್ಯವಿರುವುದಿಲ್ಲ. ಆದರೆ, ಕೆಲವು ಸಂಸತ್ತಿನಲ್ಲಿ ಅಂಗೀಕಾರಗೊಳ್ಳಬೇಕಿದೆ. 

ವರದಿ ಶೀಘ್ರದಲ್ಲೇ ಕಾನೂನು ಆಯೋಗದ ಒಪ್ಪಿಗೆ ಪಡೆಯಬಹುದು. 2029 ರಿಂದ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ, ಯುದ್ಧ ಇಲ್ಲವೇ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದೆ ಇರುವಾಗ ಎಲ್ಲ ಪ್ರಮುಖ ಪಕ್ಷಗಳ ಸಮ್ಮಿಶ್ರ ಸರ್ಕಾರ ರಚನೆಗೆ ಶಿಫಾರಸು ಮಾಡಬಹುದು. 

ಪ್ರಧಾನಿ ಭಾಷಣದಲ್ಲಿ ಉಲ್ಲೇಖ

ಬಿಜೆಪಿ ನೇತೃತ್ವದ ಸರ್ಕಾರ ಸಾಕಷ್ಟು ಕಾಲದಿಂದ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಚಿಂತನೆ ನಡೆಸುತ್ತಿದೆ. ಪ್ರಧಾನಿ ಮೋದಿ ಅವರು ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಇದನ್ನು ಉಲ್ಲೇಖಿಸಿದ್ದರು.ʻಈ ಕುರಿತು ದೇಶಾದ್ಯಂತ ವ್ಯಾಪಕ ಸಮಾಲೋಚನೆ ನಡೆಸಿದ್ದು, ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿವೆ. ಸಮಿತಿ ಅತ್ಯುತ್ತಮ ವರದಿ ಸಲ್ಲಿಸಿದೆ,ʼ ಎಂದು ಹೇಳಿದರು. 

ಕೆಂಪು ಕೋಟೆಯಲ್ಲಿ ಮಾತನಾಡಿ,ʼ ಪದೇಪದೇ ಚುನಾವಣೆಗಳು ರಾಷ್ಟ್ರದ ಪ್ರಗತಿಗೆ ಅಡೆತಡೆ ಒಡ್ಡುತ್ತಿವೆ. ಮೂರರಿಂದ ಆರು ತಿಂಗಳಿಗೊಮ್ಮೆ ಎಲ್ಲೋ ಒಂದೆಡೆ ಚುನಾವಣೆ ನಡೆಯುತ್ತದೆ. ಪ್ರತಿಯೊಂದು ಕೆಲಸವೂ ಚುನಾವಣೆಯೊಂದಿಗೆ ಸಂಬಂಧ ಹೊಂದಿದೆ. ಒಂದು ರಾಷ್ಟ್ರ, ಒಂದು ಚುನಾವಣೆ ಕನಸು ನನಸಾಗಲು ಎಲ್ಲರೂ ಮುಂದೆ ಬರಬೇಕಿದೆ,ʼ ಎಂದು ಹೇಳಿದ್ದರು. 

ಪ್ರತಿಪಕ್ಷಗಳಿಂದ ವಿರೋಧ

ಒಂದು ರಾಷ್ಟ್ರ, ಒಂದು ಚುನಾವಣೆ ಎಂಬುದು ಬಿಜೆಪಿಯ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳಲ್ಲಿ ಒಂದು. ಈ ಕಲ್ಪನೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿವೆ. 

ʻವಿವಿಧ ಸಮಯಗಳಲ್ಲಿ ಚುನಾವಣೆ ನಡೆದಿರುವ ವಿವಿಧ ರಾಜ್ಯಗಳ ಆಡಳಿತಾರೂಢ ಸರ್ಕಾರದ ಉಳಿದ ಅವಧಿಗೆ ಪರಿಣಾಮ ಬೀರದಂತೆ ಒಂದೇ ಟೈಮ್‌ಲೈನ್‌ಗೆ ಹೇಗೆ ತರಲಾಗುತ್ತದೆ ಎಂಬ ಕುರಿತು ಹಾಗೂ ಸರ್ಕಾರ ಅಥವಾ ಸಂಸತ್ತಿನ ವಿಸರ್ಜನೆ, ರಾಷ್ಟ್ರಪತಿ ಆಳ್ವಿಕೆ ಅಥವಾ ಅತಂತ್ರ ಶಾಸನಸಭೆ ವೇಳೆ ಏನು ಮಾಡಬೇಕು ಎಂಬ ಸ್ಪಷ್ಟತೆಯ ಕೊರತೆಯಿದೆ ಎಂದು ಹೇಳುತ್ತವೆ. 

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆದರೆ, ಕೇಂದ್ರದ ಸಮಸ್ಯೆಗಳು ಎಲ್ಲರ ಗಮನ ಸೆಳೆದು, ಸ್ಥಳೀಯ ಸಮಸ್ಯೆಗಳು ನಗಣ್ಯವಾಗುತ್ತವೆ ಎಂದು ಪ್ರಾದೇಶಿಕ ಪಕ್ಷಗಳು ಹೇಳಿವೆ.

Tags:    

Similar News