ಹಾವನ್ನು ನಂಬಬಹುದು; ಬಿಜೆಪಿಯನ್ನಲ್ಲ- ಮಮತಾ

ಕೇಂದ್ರೀಯ ತನಿಖಾ ಸಂಸ್ಥೆಗಳು, ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಬಿಜೆಪಿ ಆದೇಶದಂತೆ ಕೆಲಸ ಮಾಡುತ್ತಿವೆ: ಆರೋಪ;

Update: 2024-04-04 10:11 GMT

ಕೂಚ್‌ ಬೆಹಾರ್ (ಪಶ್ಚಿಮ ಬಂಗಾಳ), ಅ. 4- ಲೋಕಸಭೆ ಚುನಾವಣೆಗೆ ಬಿಜೆಪಿ ಮಾದರಿ ನೀತಿ ಸಂಹಿತೆಯನ್ನುಅನುಸರಿಸುತ್ತಿಲ್ಲ. ವಿಷದ ಹಾವನ್ನು ನಂಬಬಹುದು. ಆದರೆ, ಕೇಸರಿ ಪಕ್ಷವನ್ನು ನಂಬಬಾರದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ.

ಕೂಚ್ ಬೆಹಾರ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕೇಂದ್ರೀಯ ತನಿಖಾ ಸಂಸ್ಥೆಗಳು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಿಜೆಪಿಯ ಆದೇಶದಂತೆ ಕೆಲಸ ಮಾಡುತ್ತಿವೆ. ಚುನಾವಣೆ ಆಯೋಗ ಇದನ್ನು ಪರಿಶೀಲಿಸಬೇಕು ಮತ್ತು ಎಲ್ಲ ಪಕ್ಷಗಳಿಗೂ ಸಮಮಟ್ಟದ ಮೈದಾನವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. 

ʼಬಿಜೆಪಿ ಆವಾಸ್ ಯೋಜನೆಗೆ ಮತ್ತೆ ಹೆಸರು ನೋಂದಾಯಿಸಲು ಹೇಳುತ್ತಿದೆ. ಹೆಸರು ಮತ್ತೆ ಏಕೆ ನೋಂದಾಯಿಸಬೇಕು? ಅವರಿಗೆ ಹೆಚ್ಚು ದಾಖಲಾತಿ ಬೇಕಿದೆ. ನೀವು ವಿಷದ ಹಾವನ್ನು ನಂಬಬಹುದು; ಅದನ್ನು ಸಾಕಬಹುದು. ಆದರೆ, ಬಿಜೆಪಿಯನ್ನು ಎಂದಿಗೂ ನಂಬಬೇಡಿ... ಬಿಜೆಪಿ ದೇಶವನ್ನು ನಾಶ ಮಾಡುತ್ತಿದೆʼ ಎಂದು ಹೇಳಿದರು. 

ʻಕೇಂದ್ರ ಏಜೆನ್ಸಿಗಳ ಬೆದರಿಕೆಗೆ ಟಿಎಂಸಿ ತಲೆಬಾಗುವುದಿಲ್ಲ. ಬಿಎಸ್‌ಎಫ್ ಸ್ಥಳೀಯರನ್ನು ಹಿಂಸಿಸುತ್ತಿರುವ ನಿದರ್ಶನಗಳಿದ್ದರೆ, ಪೊಲೀಸರಿಗೆ ದೂರು ಸಲ್ಲಿಸಬೇಕುʼ ಎಂದು ಮಹಿಳೆಯರಿಗೆ ಹೇಳಿದರು. 

ʻಬಿಜೆಪಿ ಕೇವಲ ಒಂದು ರಾಷ್ಟ್ರ, ಒಂದು ಪಕ್ಷ ಎಂಬ ತತ್ವವನ್ನು ಅನುಸರಿಸುತ್ತದೆ. ಹಲವು ಪ್ರಕರಣಗಳಿರುವ ವ್ಯಕ್ತಿಯೊಬ್ಬರನ್ನು ಗೃಹ ಖಾತೆಯ ರಾಜ್ಯ ಸಚಿವರನ್ನಾಗಿ ನೇಮಿಸಿರುವುದು ನಾಚಿಕೆಗೇಡಿನ ಸಂಗತಿ. ಅವರನ್ನು ಟಿಎಂಸಿಯಿಂದ ವಜಾಗೊಳಿಸಲಾಗಿದೆ. ಈಗ ಅವರು ಬಿಜೆಪಿಯ ಆಸ್ತಿಯಾಗಿದ್ದಾರೆ' ಎಂದು ನಿಶಿತ್ ಪ್ರಮಾಣಿಕ್‌ ಅವರ ಹೆಸರು ಉಲ್ಲೇಖಿಸದೆ ಹೇಳಿದರು. ಯುವ ಟಿಎಂಸಿ ನಾಯಕ ಪ್ರಮಾಣಿಕ್ ಅವರನ್ನು 2018 ರಲ್ಲಿ ಪಕ್ಷದಿಂದ ಹೊರಹಾಕಲಾಯಿತು. ಆನಂತರ ಅವರು ಬಿಜೆಪಿ ಸೇರಿದರು. 

ಕೂಚ್‌ಬೆಹಾರಿನ ಮಾಜಿ ಎಸ್‌ಪಿ ದೇಬಶಿಸ್ ಧರ್ ಅವರನ್ನು ಬಿರ್‌ಭೂಮ್‌ನ ಅಭ್ಯರ್ಥಿಯಾಗಿ ಆಯ್ಕೆಮಾಡಿರುವುದನ್ನು ಖಂಡಿಸಿದ ಬ್ಯಾನರ್ಜಿ, ʻ2021ರಲ್ಲಿ ಸಿತಾಲ್ಕುಚಿಯಲ್ಲಿ ಐದು ಜನರ ಹತ್ಯೆಗೆ ಕಾರಣವಾದ ವ್ಯಕ್ತಿಯನ್ನು ಬಿಜೆಪಿ ವಿಧಾನಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಧರ್ ಅವರನ್ನು ಅಮಾನತುಗೊಳಿಸಲಾಯಿತು ಮತ್ತು ಟಿಎಂಸಿ ಮೂರನೇ ಬಾರಿ ಅಧಿಕಾರಕ್ಕೆ ಮರಳಿದ ನಂತರ ಕಡ್ಡಾಯ ಕಾಯುವಿಕೆಗೆ ಕಳುಹಿಸಲಾಯಿತುʼ ಎಂದು ಹೇಳಿದರು. 

ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ನಿರಾಕರಿಸಿದ ಅವರು, ಸಿಎಎಗೆ ಅರ್ಜಿ ಸಲ್ಲಿಸುವುದರಿಂದ ವಿದೇಶಿಯ ರಾಗುತ್ತೀರಿ. ಅರ್ಜಿ ಸಲ್ಲಿಸದಿರಿ. ಬಿಜೆಪಿ ಜುಮ್ಲಾ ಪಕ್ಷ. ಅದು ಸಿಎಎಗೆ ಸಂಬಂಧಿಸಿದಂತೆ ಸುಳ್ಳುಗಳನ್ನು ಹರಡುತ್ತಿದೆ. ಸಿಎಎ ಸಮಿತಿಯಲ್ಲಿ ಜನಗಣತಿ ವಿಭಾಗದ ಸದಸ್ಯರನ್ನು ಏಕೆ ಸೇರಿಸಿಕೊಳ್ಳಲಾಗುತ್ತಿದೆ. ಸಿಎಎ ತಲೆ ಮತ್ತು ಎನ್‌ಆರ್‌ಸಿ ಬಾಲʼ ಎಂದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದ ಸಿಪಿಐ (ಎಂ) ಮತ್ತು ಕಾಂಗ್ರೆಸ್ ನ್ನು ಟೀಕಿಸಿದ ಅವರು,ʻಪಶ್ಚಿಮ ಬಂಗಾಳದಲ್ಲಿ ಇಂಡಿಯ ಒಕ್ಕೂಟ ಇಲ್ಲ. ಒಕ್ಕೂಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ ಮತ್ತು ಹೆಸರು ಕೂಡ ಇಟ್ಟಿದ್ದೇನೆ. ಆದರೆ, ಬಂಗಾಳದಲ್ಲಿ ಸಿಪಿಐ (ಎಂ) ಮತ್ತು ಕಾಂಗ್ರೆಸ್ ಬಿಜೆಪಿಗಾಗಿ ಕೆಲಸ ಮಾಡುತ್ತಿವೆʼ ಎಂದು ಆರೋಪಿಸಿದರು.

ʻಬಿಜೆಪಿಯನ್ನು ಸೋಲಿಸಬೇಕಿದ್ದರೆ, ಕಾಂಗ್ರೆಸ್, ಸಿಪಿಐ (ಎಂ) ಮತ್ತು ಮಿತ್ರಪಕ್ಷವಾದ ಅಲ್ಪಸಂಖ್ಯಾತ ಪಕ್ಷ (ಐಎಸ್‌ಎಫ್)ಕ್ಕೆ ಮತ ನೀಡಬೇಡಿ. ಐಎಸ್‌ಎಫ್, ಎಐಎಂಐಎಂನಂತೆ ಅಲ್ಪಸಂಖ್ಯಾತರ ಮತಗಳನ್ನುಒಡೆದು, ಬಿಜೆಪಿಗೆ ಸಹಾಯ ಮಾಡುತ್ತದೆʼ ಎಂದು ಹೇಳಿದರು.

ಭಾನುವಾರ ಜಲ್ಪೈಗುರಿಯಲ್ಲಿ ಐದು ಜೀವಗಳನ್ನು ಬಲಿ ಪಡೆದ ಚಂಡಮಾರುತದ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಆಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳು ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

Tags:    

Similar News