ಪಶ್ಚಿಮ ಬಂಗಾಳದಲ್ಲಿ ಕಾಲೇಜು ಬಳಿಯೇ ಒಡಿಶಾ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್
ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಊಟಕ್ಕೆ ಹೊರಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಆಕೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ ಮತ್ತೊಮ್ಮೆ ಕ್ಯಾಂಪಸ್ ಅತ್ಯಾಚಾರ ಪ್ರಕರಣದಿಂದ ಬೆಚ್ಚಿಬಿದ್ದಿದೆ. ಒಡಿಶಾ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿರುವ ತಮ್ಮ ಖಾಸಗಿ ಕಾಲೇಜಿನ ಕ್ಯಾಂಪಸ್ ಹೊರಗಡೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರು ಶನಿವಾರ (ಅಕ್ಟೋಬರ್ 11) ತಿಳಿಸಿದ್ದಾರೆ
ಈ ಘಟನೆ ಶುಕ್ರವಾರ (ಅಕ್ಟೋಬರ್ 10) ರಾತ್ರಿ ನಡೆದಿದ್ದು, ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಊಟಕ್ಕೆ ಹೊರಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಆಕೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ, ತನಿಖೆ ಆರಂಭ
ಒಡಿಶಾದ ಜಲೇಶ್ವರ ಮೂಲದ ವಿದ್ಯಾರ್ಥಿನಿ ಸದ್ಯ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ವಿದ್ಯಾರ್ಥಿನಿಯ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.
"ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಮಗಳು ತನ್ನ ಸ್ನೇಹಿತನೊಂದಿಗೆ ಊಟಕ್ಕಾಗಿ ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ" ಎಂದು ವಿದ್ಯಾರ್ಥಿನಿಯ ತಾಯಿ ಆರೋಪಿಸಿದ್ದಾರೆ. "ಈ ಕಾಲೇಜು ಶೈಕ್ಷಣಿಕವಾಗಿ ಉತ್ತಮವಾಗಿದೆ ಎಂದು ಕೇಳಿ ನನ್ನ ಮಗಳನ್ನು ಇಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸೇರಿಸಿದ್ದೆವು" ಎಂದು ವಿದ್ಯಾರ್ಥಿನಿಯ ತಂದೆ ನೋವು ತೋಡಿಕೊಂಡಿದ್ದಾರೆ.
ಆಘಾತಕಾರಿ ವಿವರಗಳು ಬಯಲು
ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯಾರ್ಥಿನಿ ಶುಕ್ರವಾರ ರಾತ್ರಿ 8ರಿಂದ8:30 ರ ಸುಮಾರಿಗೆ ತನ್ನ ಸ್ನೇಹಿತನೊಂದಿಗೆ ಕ್ಯಾಂಪಸ್‌ನಿಂದ ಹೊರಗೆ ಹೋದಾಗ, ಕೆಲವು ಯುವಕರು ಅವರನ್ನು ಹಿಂಬಾಲಿಸಿ ಅಸಭ್ಯವಾಗಿ ಕಾಮೆಂಟ್ ಮಾಡಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
"ಮೂವರು ಅಪರಿಚಿತ ವ್ಯಕ್ತಿಗಳು ಅಲ್ಲಿಗೆ ಬಂದಾಗ, ಆಕೆಯ ಸ್ನೇಹಿತ ಆಕೆಯನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾನೆ. ದುಷ್ಕರ್ಮಿಗಳು ಆಕೆಯ ಫೋನ್ ಕಸಿದುಕೊಂಡು, ಕ್ಯಾಂಪಸ್‌ನ ಹೊರಗಿನ ಕಾಡಿಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ನಂತರ, ಆಕೆಯ ಸ್ನೇಹಿತ ಹಾಸ್ಟೆಲ್‌ನಿಂದ ಕೆಲವು ಜನರೊಂದಿಗೆ ಹಿಂತಿರುಗಿ, ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಿದ್ದಾರೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಬೈಲ್ ಫೋನ್ ಹಿಂದಿರುಗಿಸಲು ಆರೋಪಿಗಳು ವಿದ್ಯಾರ್ಥಿನಿಯಿಂದ ಹಣವನ್ನೂ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. "ನಾವು ಸಂತ್ರಸ್ತೆಯ ಸ್ನೇಹಿತನೊಂದಿಗೆ ಮಾತನಾಡಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಹುಡುಕುತ್ತಿದ್ದೇವೆ. ವಿಧಿವಿಜ್ಞಾನ ತಂಡವು ಸಾಕ್ಷ್ಯ ಸಂಗ್ರಹಿಸಲು ಸ್ಥಳಕ್ಕೆ ಭೇಟಿ ನೀಡಲಿದೆ," ಎಂದು ಅವರು ಹೇಳಿದರು.
ತೀವ್ರಗೊಂಡ ರಾಜಕೀಯ ಚರ್ಚೆ
ಈ ಘಟನೆ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. "ಪಶ್ಚಿಮ ಬಂಗಾಳ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಟಿಎಂಸಿ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವವರೆಗೂ ರಾಜ್ಯದಾದ್ಯಂತ ಮಹಿಳೆಯರು ಭಯದಲ್ಲಿ ಬದುಕಬೇಕಾಗುತ್ತದೆ," ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಬರೆದಿದ್ದಾರೆ.
ಈ ಮಧ್ಯೆ, ರಾಷ್ಟ್ರೀಯ ಮಹಿಳಾ ಆಯೋಗದ (NCW) ತಂಡವು ಸಂತ್ರಸ್ತೆ ಮತ್ತು ಆಕೆಯ ಪೋಷಕರನ್ನು ಭೇಟಿ ಮಾಡಲು ದುರ್ಗಾಪುರದತ್ತ ತೆರಳಿದೆ. "ಬಂಗಾಳದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ. ಪೊಲೀಸರು ಇಂತಹ ಪ್ರಕರಣಗಳಲ್ಲಿ ಯಾವುದೇ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದು ದುರದೃಷ್ಟಕರ," ಎಂದು ಎನ್‌ಸಿಡಬ್ಲ್ಯೂ ಸದಸ್ಯೆ ಅರ್ಚನಾ ಮಜುಂದಾರ್ ಹೇಳಿದ್ದಾರೆ.