
17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಬಂಧನ
ನೈಋತ್ಯ ದೆಹಲಿಯ ಖಾಸಗಿ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಜಿ ಅಧ್ಯಕ್ಷನಾಗಿದ್ದ ಚೈತನ್ಯಾನಂದ, ವಿದ್ಯಾರ್ಥಿನಿಯರನ್ನು ತಡರಾತ್ರಿ ತನ್ನ ಕೋಣೆಗೆ ಬರುವಂತೆ ಒತ್ತಾಯಿಸುತ್ತಿದ್ದ ಮತ್ತು ಅವರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಎಫ್‌ಐಆರ್‌ನಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿದೆ.
ದೆಹಲಿಯ ಖಾಸಗಿ ಸಂಸ್ಥೆಯೊಂದರಲ್ಲಿ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಬಂದ ಬಳಿಕ ತಲೆಮರೆಸಿಕೊಂಡಿದ್ದ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿಯನ್ನು (62) ದೆಹಲಿ ಪೊಲೀಸರು ಭಾನುವಾರ ಮುಂಜಾನೆ ಆಗ್ರಾದಲ್ಲಿ ಬಂಧಿಸಿದ್ದಾರೆ. ಆಗಸ್ಟ್ 4 ರಂದು ಎಫ್‌ಐಆರ್ ದಾಖಲಾದಾಗಿನಿಂದ ತಪ್ಪಿಸಿಕೊಂಡಿದ್ದ ಈತನನ್ನು, ಖಚಿತ ಸುಳಿವಿನ ಮೇರೆಗೆ ಆಗ್ರಾದ ತಾಜ್ ಗಂಜ್ ಪ್ರದೇಶದ ಹೋಟೆಲ್ ಒಂದರಲ್ಲಿ ಬಂಧಿಸಲಾಯಿತು.
ನೈಋತ್ಯ ದೆಹಲಿಯ ಖಾಸಗಿ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಜಿ ಅಧ್ಯಕ್ಷನಾಗಿದ್ದ ಚೈತನ್ಯಾನಂದ, ವಿದ್ಯಾರ್ಥಿನಿಯರನ್ನು ತಡರಾತ್ರಿ ತನ್ನ ಕೋಣೆಗೆ ಬರುವಂತೆ ಒತ್ತಾಯಿಸುತ್ತಿದ್ದ ಮತ್ತು ಅವರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಎಫ್‌ಐಆರ್‌ನಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿದೆ. ತನಿಖೆಯ ವೇಳೆ, ಚೈತನ್ಯಾನಂದನಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿಗಳಲ್ಲಿದ್ದ 8 ಕೋಟಿ ರೂಪಾಯಿಯನ್ನು ಪೊಲೀಸರು ಜಪ್ತಿ ಮಾಡಿದ್ದರು. ಎಫ್‌ಐಆರ್ ದಾಖಲಾದ ನಂತರವೂ, ಆರೋಪಿಯು ಬೇರೆ ಬೇರೆ ಹೆಸರುಗಳನ್ನು ಬಳಸಿ 50 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ.
ಈತನಿಂದ ವಿಶ್ವಸಂಸ್ಥೆ ಮತ್ತು ಬ್ರಿಕ್ಸ್‌ನೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಳ್ಳುವ ನಕಲಿ ವಿಸಿಟಿಂಗ್ ಕಾರ್ಡ್‌ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣವು ಕೇವಲ ಲೈಂಗಿಕ ಕಿರುಕುಳ ಮಾತ್ರವಲ್ಲದೆ, ಗಂಭೀರ ಹಣಕಾಸು ಅಕ್ರಮಗಳು ಮತ್ತು ವಂಚನೆಯ ಜಾಲವನ್ನು ಒಳಗೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಯನ್ನು ದೆಹಲಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.