Telangana floods| ಬುಲ್ಡೋಜರ್ ಬಳಸಿ 9 ಜನರನ್ನು ರಕ್ಷಿಸಿದ ಹೀರೋ

Update: 2024-09-03 10:38 GMT

ಮಹಾವೀರರು ವಿಶೇಷ ಶಕ್ತಿ ಹೊಂದಿರಬೇಕೆಂದಿಲ್ಲ. ಸೀಮಿತ ಶಕ್ತಿಯನ್ನು ಹೇಗೆ ಬಳಸುತ್ತಾರೆ ಎನ್ನುವುದು ಜನಸಾಮಾನ್ಯನೊಬ್ಬನನ್ನು ಸೂಪರ್‌ ಹೀರೋ ಆಗಿ ಮಾಡುತ್ತದೆ. ಅಂಥವರಲ್ಲಿ ಸುಭಾನ್ ಖಾನ್ ಒಬ್ಬರು. 

ಹರಿಯಾಣ ಮೂಲದ ಖಾನ್‌, ಬುಲ್ಡೋಜರ್ ಚಾಲಕ. ಪ್ರವಾಹದಿಂದ ನಲುಗಿರುವ ತೆಲಂಗಾಣದಲ್ಲಿ ಅವರು ತಮ್ಮ ವಾಹನ ಬಳಸಿಕೊಂಡು, ಪ್ರಾಣವನ್ನು ಒತ್ತೆಯಿಟ್ಟು ಒಂಬತ್ತು ಜನರನ್ನು ಉಳಿಸಿದ್ದಾರೆ. 

ನೀರಿನಲ್ಲಿ ಸಿಲುಕಿದ್ದು ಹೇಗೆ?: ತೆಲಂಗಾಣದಲ್ಲಿ ಪ್ರವಾಹದಿಂದ ಮುನ್ನೇರು ನದಿ ನೀರಿನ ಮಟ್ಟ ಹೆಚ್ಚಾದ ಕಾರಣ, ಖಮ್ಮಂ ಜಿಲ್ಲೆಯ ಪ್ರಕಾಶ್ ನಗರ ಸೇತುವೆ ಮೇಲೆ ಮಹಿಳೆ, ಮಗು ಹಾಗೂ ಹಿರಿಯ ನಾಗರಿಕರೊಬ್ಬರು ಸೇರಿದಂತೆ 9 ಮಂದಿ ಸಿಲುಕಿಕೊಂಡಿದ್ದರು. ಸೇತುವೆ ಮೇಲಿನ ಒಣ ಪ್ರದೇಶದಲ್ಲಿ ನಿಂತು ವಿಡಿಯೋ ರೆಕಾರ್ಡ್ ಮಾಡಿ, ತಮ್ಮನ್ನು ರಕ್ಷಿಸಬೇಕೆಂದು ಸರ್ಕಾರವನ್ನು ವಿನಂತಿಸಿಕೊಂಡರು. ಸರ್ಕಾರ ಹೆಲಿಕಾಪ್ಟರ್ ಕಳುಹಿಸಿದ್ದರೂ, ಪ್ರತಿಕೂಲ ಹವಾಮಾನದಿಂದಾಗಿ ಸೇತುವೆಯನ್ನು ತಲುಪಲು ಸಾಧ್ಯವಾಗಿಲ್ಲ. 

ಒಂಬತ್ತು ಜೀವ ರಕ್ಷಣೆ: 9 ಮಂದಿಗೆ ಯಾವುದೇ ನೆರವು ಸಿಕ್ಕಿಲ್ಲ ಎಂದು ಅರಿತ ಖಾನ್‌, ಬುಲ್ಡೋಜರ್ ಬಳಸಿಕೊಂಡು ರಕ್ಷಿಸಲು ನಿರ್ಧರಿಸಿ ದರು. ಅವರ ಕುಟುಂಬ ಮತ್ತು ಹಿತೈಷಿಗಳು ಅಪಾಯದ ಬಗ್ಗೆ ಎಚ್ಚರಿಸಿ, ಹೋಗದಂತೆ ತಡೆಯಲು ಪ್ರಯತ್ನಿಸಿದರು. ಆದರೆ, ಅವರು ಮನಸ್ಸು ಮಾಡಿದ್ದರು. ʻನಾನು ಸತ್ತರೆ, ಒಂದು ಜೀವ ಹೋಗುತ್ತದೆ; ಹಿಂತಿರುಗಿದರೆ ಒಂಬತ್ತು ಜನರು ಉಳಿಯುತ್ತಾರೆ,ʼ ಎಂದ ಖಾನ್, ಒಂಬ ತ್ತು ಜನರೊಂದಿಗೆ ಕತ್ತಲೆಯಲ್ಲಿಯೂ ಸುರಕ್ಷಿತವಾಗಿ ಮರಳಿದರು. ಬುಲ್ಡೋಜರ್ ವಾಪಸಾಗುತ್ತಿದ್ದಂತೆ, ನೆರದಿದ್ದ ಜನಸಮೂಹ ಅವರನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಿತು. 

ಮಗಳ ಹೆಮ್ಮೆ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಖಾನ್ ಅವರ ಮಗಳು,ʼ ನಾನು ಹೆದರಿ ನಡುಗುತ್ತಿದ್ದೆ. ನನ್ನ ತಂದೆ ಏನು ಮಾಡಬೇಕಿತ್ತೋ ಅದನ್ನು ಮಾಡಿದರು,ʼ ಎಂದು ಹೇಳಿದ್ದಾಳೆ. ತೆಲಂಗಾಣದ ಜನ ಅವರನ್ನು ಪ್ರಶಂಶಿಸಿದ್ದಾರೆ. ಮಾಜಿ ಸಚಿವ ಕೆ.ಟಿ. ರಾಮರಾವ್ ಕೂಡ ಕರೆ ಮಾಡಿ ಅವರನ್ನು ಶ್ಲಾಘಿಸಿದ್ದಾರೆ. 

ಬಿಆರ್‌ಎಸ್‌ ನಾಯಕ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿ,ʼಇದು ಕೇವಲ ಧೈರ್ಯ ಮಾತ್ರವಲ್ಲ.ನಿಜವಾದ ನಾಯಕನಾಗಲು ಹೃದಯ ಬೇಕು. ನೀವು ಒಂಬತ್ತು ಜನರಿಗೆ ಸಹಾಯ ಮಾಡುವ ಮೂಲಕ ಕುಟುಂಬಗಳನ್ನು ಜೀವಮಾನದ ನೋವಿನಿಂದ ಉಳಿಸಿದ್ದೀರಿ,ʼ ಎಂದು ಪ್ರಸ್ತುತ ಅಮೆರಿಕದಲ್ಲಿರುವ ಅವರು ಬರೆದಿದ್ದಾರೆ. 

Tags:    

Similar News