ಊಟವಿಲ್ಲ, ನಿದ್ದೆಯಿಲ್ಲ, ತೀಜ್ ಹಬ್ಬವಿಲ್ಲ; ವಿನೇಶ್ ಫೋಗಟ್ ಅವರ ಪುಟ್ಟ ಗ್ರಾಮದಲ್ಲಿ ಕವಿದಿದೆ ನಿರಾಶೆಯ ಕಾರ್ಮೋಡ
ವಿನೇಶ್ ಫೋಗಟ್ ಅನರ್ಹಗೊಂಡು, ನಿವೃತ್ತಿ ಘೋಷಿಸಿದ ಬಳಿಕ ಬಲಾಲಿ ಗ್ರಾಮಸ್ಥರು ತೀವ್ರ ದುಃಖಪೀಡಿತರಾಗಿದ್ದಾರೆ. ವಿನೇಶ್ ಚಿನ್ನದ ಪದಕ ಕಳೆದುಕೊಂಡ ದುಃಖದಲ್ಲಿ ನಿವಾಸಿಗಳು ತೀಜ್ ಹಬ್ಬವನ್ನೂ ಆಚರಿಸಿಲ್ಲ.;
ಐಫೆಲ್ ಟವರ್‌ನಿಂದ 6,500 ಕಿ.ಮೀ ದೂರದಲ್ಲಿರುವ ಬಲಾಲಿ ಎಂಬ ಗ್ರಾಮ ತೀವ್ರ ಶೋಕದಲ್ಲಿದೆ.
ಇದು ಫ್ರೀಸ್ಟೈಲ್ ಕುಸ್ತಿಪಟು ವಿನೇಶ್ ಫೋಗಟ್ ಅವರ ತವರೂರು. ವಿನೇಶ್ 100 ಗ್ರಾಂ ಅಧಿಕ ತೂಕವನ್ನು ಹೊಂದಿದ್ದರಿಂದ, 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡರು. ಅನರ್ಹತೆ ವಿರುದ್ಧ ಫೋಗಟ್ ಮಾಡಿದ ಮನವಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ಅಂಗೀಕರಿಸಿದೆ ಮತ್ತು ನಿರ್ಧಾರವನ್ನು ಕ್ರೀಡಾಕೂಟದ ಅಂತ್ಯದ ಮೊದಲು ಪ್ರಕಟಿಸಲಿದೆ.
ಆದರೆ, ಇದ್ಯಾವುದೂ ಆಕೆಯ ಊರಿನವರಿಗೆ ಸಾಂತ್ವನ ನೀಡುತ್ತಿಲ್ಲ. ಆಕೆ ಚಿನ್ನದ ಪದಕ ಕಳೆದುಕೊಂಡ ದುಃಖದಲ್ಲಿ ನಿವಾಸಿಗಳು ಆಹಾರ ಸೇವನೆ, ಕುಡಿಯುವುದು ಮತ್ತು ತೀಜ್ ಹಬ್ಬ ಆಚರಿಸುವುದನ್ನು ಸಹ ತ್ಯಜಿಸಿದ್ದಾರೆ.
ಪಿತೂರಿ ಸಿದ್ಧಾಂತಗಳು: ಬಲಾಲಿ ಮಹಿಳಾ ಕುಸ್ತಿಪಟುಗಳಿಗೆ ಹೆಸರುವಾಸಿಯಾದ ಗ್ರಾಮವಾಗಿದ್ದು, ಇಲ್ಲಿನ ಪ್ರತಿ ಮೂಲೆಯಿಂದಲೂ ಅಂತಾರಾಷ್ಟ್ರೀಯ ಪದಕ ವಿಜೇತರು ಹೊರಹೊಮ್ಮುತ್ತಿದ್ದಾರೆ.
ಕರ್ತಾರ್ ಸಿಂಗ್(65) ಹಳ್ಳಿಯ ಚೌಕದಲ್ಲಿ ಕುಳಿತು, ವಿನೇಶ್ ಫೋಗಟ್ ಅವರ ಪೂರ್ವಜರ ಮನೆ ಬಳಿ ಹುಕ್ಕಾ ಸೇದುತ್ತಿದ್ದರು. ʻವಿನೇಶ್ ಅವರು ಚಿನ್ನಕ್ಕೆ ಅರ್ಹರಾಗಿದ್ದರು. ಆದರೆ, ಭಾರತೀಯ ಸಿಬ್ಬಂದಿಯಿಂದ ಆಕೆಗೆ ಅಗತ್ಯ ಬೆಂಬಲ ಸಿಗಲಿಲ್ಲ,ʼ ಎಂದು ಅವರು ಭಾರವಾದ ಹೃದಯದಿಂದ ಹೇಳಿದರು.
ʻವಿನೇಶ್ ಚಿನ್ನದ ಪದಕವನ್ನು ಕಳೆದುಕೊಳ್ಳಲಿಲ್ಲ. ಪಿತೂರಿಯಿಂದ ಬಲವಂತವಾಗಿ ಹೊರಹಾಕಲ್ಪಟ್ಟಳು. ಕೇವಲ 100 ಗ್ರಾಂ ಅಧಿಕ ತೂಕ ದ ಕಾರಣಕ್ಕಾಗಿ ಅವಳನ್ನು ಅನರ್ಹಗೊಳಿಸಲಾಗಿದೆ ಎಂದು ನಾವು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಆಹಾರ ತಜ್ಞರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಏನು ಮಾಡುತ್ತಿದ್ದರು?ʼ ಎಂದು ಹತಾಶೆ ಮತ್ತು ಅಸಮಾಧಾನಗೊಂಡಿದ್ದ ಕರ್ತಾರ್ ಅವರು ಕೇಳಿದರು.
ಮಹಿಳಾ ಕುಸ್ತಿಪಟುಗಳ ತವರು: ʻವಿನೇಶ್ ಹಿಂತಿರುಗಿ ತನ್ನ ಕಥೆಯನ್ನು ಹಂಚಿಕೊಳ್ಳುವವರೆಗೆ ನಾವು ಏನನ್ನೂ ನಂಬುವುದಿಲ್ಲ,ʼ ಎಂದು ಕಾರ್ತಾರ್ ದ ಫೆಡರಲ್‌ಗೆ ತಿಳಿಸಿದರು. ʻಅವರು ಇಡೀ ಮಹಿಳಾ ಕುಸ್ತಿ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದಾರೆ. ಕುಸ್ತಿ ತ್ಯಜಿಸುವ ಅವರ ನಿರ್ಧಾರ ಯುವ ಕುಸ್ತಿಪಟುಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು,ʼ ಎಂದರು.
ಚೌಕದ ಇನ್ನೊಂದು ಮೂಲೆಯಲ್ಲಿ ಕುಳಿತಿದ್ದ ವಿನೇಶ್ ಅವರ ಅಜ್ಜ ಜಗತ್ ಸಿಂಗ್, ಶ್ರವಣ ಸಮಸ್ಯೆ ಹೊರತಾಗಿಯೂ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ʻವಿನೇಶ್, ಗೀತಾ, ಬಬಿತಾ, ಪ್ರಿಯಾಂಕಾ ಮತ್ತು ಸಂಗೀತಾ ಮತ್ತಿತರ ಸಾಮಾನ್ಯ ಹುಡುಗಿಯರು ವಿಶ್ವ ದರ್ಜೆಯ ಕುಸ್ತಿಪಟುಗಳಾಗಿ ಬೆಳೆಯುವುದನ್ನು ನಾನು ನೋಡಿದ್ದೇನೆ. ಅವರಲ್ಲಿ ವಿನೇಶ್, ಅತ್ಯಂತ ಕಠೋರ, ದೃಢನಿಶ್ಚಯದ ಮತ್ತು ಉಗ್ರ ಹಠದ ಹುಲಿಯಂಥ ಪ್ರವೃತ್ತಿ ಯವಳು. ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಸಮಯದಲ್ಲಿ ಮತ್ತು ಈಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಕೆಯ ನಿಲುವು ನೋಡಿರಬಹುದು,ʼ ಎಂದು ಹೇಳಿದರು.
ಮೂರ್ಛೆ ಹೋದ ತಾಯಿ: ಗ್ರಾಮವು ವಿನೇಶ್ ಅವರೊಂದಿಗೆ ಗಾಢವಾದ ಸಂಬಂಧ ಹೊಂದಿದೆ ಎಂದು ಕರ್ತಾರ್ ದ ಫೆಡರಲ್‌ಗೆ ತಿಳಿಸಿದರು.
ʻನಾವು ಅವಳನ್ನು ನಮ್ಮ ಮಗಳೆಂದು ಮಾತ್ರ ನೋಡುವುದಿಲ್ಲ. 1.3 ಶತಕೋಟಿ ಜನರ ಮಗಳಾಗಿ ನೋಡುತ್ತೇವೆ. ಇಡೀ ಭಾರತ ಅವಳಿಗಾಗಿ ಪ್ರಾರ್ಥಿಸುತ್ತಿದೆ. ಅವಳು ನಿಜವಾಗಿಯೂ ಅಧಿಕ ತೂಕ ಹೊಂದಿದ್ದರೆ, ಫೈನಲ್‌ಗೆ ಅರ್ಹತೆ ಗಳಿಸುವ ಮೂರು ಪಂದ್ಯಗಳಲ್ಲಿ ಸ್ಪರ್ಧಿಸಲು ಏಕೆ ಅವಕಾಶ ನೀಡಲಾಯಿತು? ಅಧಿಕ ತೂಕದ ಈ ಸಿದ್ಧಾಂತವನ್ನು ನಾವು ಒಪ್ಪುವುದಿಲ್ಲ. ಇದು ದೊಡ್ಡ ಪಿತೂರಿಯಂತೆ ಭಾಸವಾಗುತ್ತದೆ,ʼ ಎಂದು ಅವರು ಹೇಳಿದರು.
ʻಮಗಳು ರಾತ್ರಿಯಿಡೀ ತೂಕ ಇಳಿಸಿಕೊಳ್ಳಲು ಪಡುತ್ತಿರುವ ಕಷ್ಟದ ಬಗ್ಗೆ ಕೇಳಿದ ವಿನೇಶ್ ಅವರ ತಾಯಿ, ಮೂರ್ಛೆ ಹೋದರು. ಆಕೆಯನ್ನು ಆರೈಕೆಗಾಗಿ ಸೋನಿಪತ್‌ನಲ್ಲಿರುವ ವಿನೇಶ್ ಅವರ ಅತ್ತೆಯ ಮನೆಗೆ ಕಳುಹಿಸಲಾಗಿದೆ,ʼ ಎಂದು ಕರ್ತಾರ್ ಹೇಳಿದರು.
ಜಾಟ್ ಸಮುದಾಯದ ಫೋಗಟ್ ಗೋತ್ರದವರ ಪ್ರಾಬಲ್ಯವಿರುವ 500 ಮನೆಗಳ ಬಲಾಲಿಯ ನಿವಾಸಿಗಳಲ್ಲಿ ನಿರಾಶೆ ಎದ್ದುಕಾಣುತ್ತಿತ್ತು. ‘ಅವಳು ಚಿನ್ನದ ಪದಕ ಗೆದ್ದ ಮೇಲೆ ನೀವು ಬಂದಿದ್ದರೆ, ಹಳ್ಳಿಯಲ್ಲಿ ಸಂಭ್ರಮಾಚರಣೆ ನಡೆಯುತ್ತಿತ್ತು’ ಎಂದು ನಿವಾಸಿಗಳು ಹೇಳಿದರು.
ತೂಕವು ನಿರ್ಣಾಯಕ: ಅಪ್ರತಿಮ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಫೋಗಟ್ ಅವರ ತಾಯಿ ದಯಾ ಕೌರ್(ಬಾಲಿವುಡ್ ಚಿತ್ರ ʻದಂಗಲ್ʼನಲ್ಲಿ ಸಾಕ್ಷಿ ತನ್ವರ್ ಅವರು ಈ ಪಾತ್ರದಲ್ಲಿ ನಟಿಸಿದ್ದಾರೆ), ವಿನೇಶ್ ಫೋಗಟ್ ಅವರ ಕುಟುಂಬದೊಂದಿಗೆ ಉಳಿದುಕೊಂಡಿದ್ದಾರೆ. ʻಕುಟುಂಬವು ತೀವ್ರ ದುಃಖದಲ್ಲಿದೆ; ಎಲ್ಲರೂ ದುಃಖಿತರಾಗಿದ್ದಾರೆ,ʼ ಎಂದು ಹೇಳಿದರು.
ʻಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್‌ಗೆ ಏನಾಯಿತು ಎಂಬ ಕುರಿತು ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯ ಹೊಂದಿದ್ದಾರೆ. ಆದರೆ, ಎಲ್ಲರಿಗೂ ಕುಸ್ತಿ ನಿಯಮಗಳ ಅರಿವು ಇರುವುದಿಲ್ಲ. ಇದು ಸ್ವಲ್ಪ ಹೆಚ್ಚು ತೂಕದ ಪ್ರಕರಣ. ಅವರು 50 ಕೆಜಿ ಮಿತಿಗಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರು. ವಿನೇಶ್ ಅಸಾಧಾರಣ ಕುಸ್ತಿಪಟು. ಆದರೆ, ಈ ಕ್ರೀಡೆಯಲ್ಲಿ ತೂಕ ಕಾಪಾಡಿಕೊಳ್ಳುವುದು ಬಹಳ ಮುಖ್ಯ,ʼ ಎಂದು ಅವರು ಹೇಳಿದರು.
ವಿನೇಶ್ ಅವರ ಕುಟುಂಬ, ತನ್ನ ಸಹೋದರ, ಅತ್ತಿಗೆ ಮತ್ತು ಸೋದರಸಂಬಂಧಿ ಸೇರಿದಂತೆ ಯಾರೂ ಊಟ ಮಾಡುತ್ತಿಲ್ಲ ಎಂದು ತಿಳಿಸಿದರು.
ʻಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿಲ್ಲ. ಅಂತಹ ಸಾಮರ್ಥ್ಯವಿರುವ ಯಾರಾದರೂ ಹೀಗೆ ಹಿನ್ನಡೆ ಎದುರಿಸಿದಾಗ ಅದು ಸಹಜ ಪ್ರತಿಕ್ರಿಯೆ,ʼ ಎಂದು ದಯಾ ಕೌರ್ ಹೇಳಿದರು.
'ಆನೆಯನ್ನು ಸಾಕಿದಂತೆ': ʻಕುಸ್ತಿಪಟುಗಳಿಗೆ ನಿಜವಾದ ಸವಾಲು ಕೇವಲ ಕುಸ್ತಿಯಲ್ಲ; ಆದರೆ, ತಮ್ಮ ತೂಕವನ್ನು ನಿರ್ವಹಿಸುವುದು. ವಿನೇಶ್ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ. ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ಗೆ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಾಯಿತು. ತೂಕ ಇಳಿಸಿಕೊಂಡು, ಉತ್ತಮ ಪ್ರದರ್ಶನ ನೀಡಿದರು. ಆದರೆ, ಅದೃಷ್ಟ ಅವಳ ಕಡೆ ಇರಲಿಲ್ಲ,ʼ ಎಂದು ಹೇಳಿದರು.
ಒಲಿಂಪಿಕ್ ಮಟ್ಟದ ಕುಸ್ತಿ ಪಟುವಿನ ಸಿದ್ಧಪಡಿಸುವ ಕುರಿತು ಮಾತನಾಡಿ, ʼಒಲಿಂಪಿಕ್ ಅಥ್ಲೀಟ್‌ಗೆ ತರಬೇತಿ ನೀಡುವುದು ಆನೆಯನ್ನು ಸಾಕಿದಂತೆ; ಆಹಾರ, ಸೌಲಭ್ಯ ಮತ್ತು ಕಠಿಣ ತರಬೇತಿ ಬಗ್ಗೆ ದೈನಂದಿನ ಗಮನ ಬೇಕು. ನನ್ನ ಪತಿ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾಬೀರ್ ಫೋಗಟ್ ಅವರಿಂದ 6 ಹುಡುಗಿಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತರಬೇತಿ ಪಡೆದಿದ್ದಾರೆ,ʼ ಎಂದರು.
ವಿನೇಶ್ ಕುಸ್ತಿ ಬಿಡಲು ಸಾಧ್ಯವಿಲ್ಲ: ಪುತ್ರಿಯರಾದ ಗೀತಾ ಮತ್ತು ಬಬಿತಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ನಂತರ ಪ್ರಾಮುಖ್ಯತೆಗೆ ಏರಿದ ಮಹಾಬೀರ್ ಫೋಗಟ್, ಆನಂತರ ದಂಗಲ್ ಚಲನಚಿತ್ರದ ಮೂಲಕ ಪ್ರಸಿದ್ಧರಾದರು. ಬಾಲಿವುಡ್ ನಟ ಅಮೀರ್ ಖಾನ್ ಈ ಹಿಟ್ ಚಿತ್ರದಲ್ಲಿ ಮಹಾಬೀರ್ ಫೋಗಟ್ ಪಾತ್ರವನ್ನು ನಿರ್ವಹಿಸಿದ್ದರು.
ದ ಫೆಡರಲ್‌ನೊಂದಿಗೆ ಮಾತನಾಡಿ,ʻ ವಿನೇಶ್ ಕುಸ್ತಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಅವಳು ಭಾರತಕ್ಕೆ ಹಿಂತಿರುಗಿ ಬಂದ ಬಳಿಕ ವಿನೇಶ್ ಮತ್ತು ಅವಳ ಅತ್ತೆಯೊಂದಿಗೆ ಮಾತನಾಡುತ್ತೇನೆ. ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳುತ್ತೇನೆ. ಇದು ತಕ್ಷಣದ ಪ್ರತಿಕ್ರಿಯೆ ಆಗಿರಬಹುದು. ಆದರೆ, ಅವಳಿಗೆ ಅಪಾರ ಬೆಂಬಲ ಇದೆ,ʼ ಎಂದು ಮಹಾಬೀರ್ ಹೇಳಿದರು.
ʻಕುಸ್ತಿ ಸಮುದಾಯ ಈಗ ಅವಳನ್ನು ಬಿಡುವುದಿಲ್ಲ. ಪ್ಯಾರಿಸ್‌ನಲ್ಲಿ ಕಳೆದುಕೊಂಡಿದ್ದನ್ನು ಮುಂದಿನ ಒಲಿಂಪಿಕ್ಸ್‌ನಲ್ಲಿ ಖಂಡಿತವಾಗಿಯೂ ಸಾಧಿಸುತ್ತಾಳೆ,ʼ ಎಂದು ಅವರು ವಿಶ್ವಾಸದಿಂದ ಹೇಳಿದರು.
ಸೌಲಭ್ಯಗಳ ಕೊರತೆ: ಬಲಾಲಿ ಕೆಲವು ಶ್ರೇಷ್ಟ ಕುಸ್ತಿಪಟುಗಳನ್ನು ರೂಪಿಸಿದ್ದರೂ, ಗ್ರಾಮದಲ್ಲಿ ಕ್ರೀಡಾ ಮೂಲಸೌಕರ್ಯದ ಕೊರತೆಯಿದೆ. ಗ್ರಾಮದ ಏಕೈಕ ಕುಸ್ತಿ ಅಖಾಡ ಶಿಥಿಲಾವಸ್ಥೆಯಲ್ಲಿದೆ. ಅಖಾಡಾದ ಯುವ ಕುಸ್ತಿಪಟು ವಿನೀತ್ ಮಾತನಾಡಿ, ʻಇಲ್ಲಿನ ಪ್ರತಿಯೊಬ್ಬರೂ ವಿನೇಶ್ ಫೋಗಟ್‌ನಂತೆ ಆಗಬೇಕೆಂಬ ಕನಸು ಕಾಣುತ್ತಾರೆ,ʼ ಎಂದು ಹೇಳಿದರು.
ʻಇಲ್ಲಿ ಸುಮಾರು 20 ಯುವ ಕುಸ್ತಿಪಟುಗಳು ತರಬೇತಿ ಪಡೆಯುತ್ತಿದ್ದಾರೆ. ವಿದ್ಯುತ್, ಕುಡಿಯುವ ನೀರು ಇಲ್ಲ. ಸ್ಥಳೀಯರು ಚಾಪೆಗಳನ್ನು ದಾನ ಮಾಡಿದ್ದಾರೆ,ʼ ಎಂದು ವಿಷಾದಿಸಿದರು. ತಮ್ಮ ಕುಟುಂಬದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರ ಎಲ್ಲಾ ಪಂದ್ಯಗಳನ್ನು ವೀಕ್ಷಿಸಿರುವ ವಿನೀತ್, ವಿನೇಶ್ ಅನರ್ಹಗೊಂಡಾಗ ಎದೆಗುಂದಿದೆ ಎಂದು ಹೇಳಿದರು.
ವಿನೇಶ್ ದೀದಿ ಒಲಿಂಪಿಕ್ಸ್‌ಗೂ ಮುನ್ನ ಇಲ್ಲಿಗೆ ಬಂದಿದ್ದರು. ಸವಾಲುಗಳನ್ನು ಲೆಕ್ಕಿಸದೆ ಹೋರಾಡಲು ನಮ್ಮನ್ನು ಪ್ರೋತ್ಸಾಹಿಸಿದರು. ʻನೀವು ಕುಸ್ತಿಯನ್ನು ಬಿಡಬೇಡಿ; ನಮ್ಮಂತಹ ಕುಸ್ತಿಪಟುಗಳ ಹಿಂದೆ ಬಂಡೆಯಂತೆ ಗಟ್ಟಿಯಾಗಿ ನಿಲ್ಲಿʼ ಎಂದು ವಿನೇಶ್ ದೀದಿ ಅವರಿಗೆ ಹೇಳುತ್ತೇವೆ ಎಂದು ವಿನೀತ್ ಹೇಳಿದರು.