Mysore MUDA Case | ಇಡಿ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್; ರಾಜಕೀಯ ದಾಳವಾಗಿ ಇಡಿ ಬಳಕೆಗೆ ಸಿಜೆಐ ಗರಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸ್ ವಜಾಗೊಳಿಸಿದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.;
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸ್ ವಜಾಗೊಳಿಸಿದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಜಾರಿನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ, ಇಡಿ ಪರ ವಕೀಲರಿಗೆ ಕಠಿಣ ಮಾತುಗಳಲ್ಲಿ ಪ್ರತಿಕ್ರಿಯಿಸಿ ಅರ್ಜಿ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಅರ್ಜಿ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಡಿ ರಾಜಕೀಯ ದಾಳವಾಗಿ ಬಳಕೆಯಾಗಬಾರದು. ದುರದೃಷ್ಟವಶಾತ್ ನನಗೆ ಮಹಾರಾಷ್ಟ್ರದಲ್ಲಿ ಇಂತಹದ್ದೇ ಅನುಭವವಾಗಿದೆ. ನಮ್ಮ ಬಾಯಿಂದ ಏನನ್ನಾದರೂ ಹೇಳಲು ಒತ್ತಾಯಿಸಬೇಡಿ. ಹಾಗೇನಾದರೂ ಆದರೆ ನಾವು ಜಾರಿ ನಿರ್ದೇಶನಾಲಯದ ಬಗ್ಗೆ ತುಂಬಾ ಕಠಿಣವಾದ ಪದಗಳಲ್ಲಿ ಹೇಳಬೇಕಾಗುತ್ತದೆ ಎಂದು ಸಿಜೆಐ ಎಚ್ಚರಿಸಿದರು.
ರಾಜಕೀಯ ಪಕ್ಷಗಳು ಮತದಾರರ ಮಧ್ಯೆ ರಾಜಕೀಯ ನಡೆಸಲಿ. ಆದರೆ,ಅದಕ್ಕೆ ನಿಮ್ಮನ್ನು ಏಕೆ ಬಳಸಲಾಗುತ್ತಿದೆ ಎಂದು ಪ್ರಶ್ನಿಸಿದರು.
ಸಹಾಯಕ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಮಾತನಾಡಿ, ನಾವು ಅರ್ಜಿಯಿಂದ ಹಿಂದೆ ಸರಿಯುತ್ತೇವೆ. ಆದರೆ, ಇದನ್ನೇ ಪೂರ್ವನಿದರ್ಶನವೆಂದು ಪರಿಗಣಿಸಬಾರದು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಬಿ.ಆರ್.ಗವಾಯಿ ಅವರು, ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದಲ್ಲಿ ನಮಗೆ ಯಾವುದೇ ದೋಷ ಕಂಡುಬಂದಿಲ್ಲ. ವಿಚಿತ್ರ ಸಂಗತಿಗಳು ಮತ್ತು ಸಂದರ್ಭಗಳಲ್ಲಿ ನಾವು ಈ ಅರ್ಜಿಯನ್ನು ವಜಾಗೊಳಿಸುತ್ತೇವೆ. ನಮ್ಮಿಂದ ಕೆಲವು ಕಠಿಣ ಹೇಳಿಕೆಗಳನ್ನು ಹೇಳಿಸದೇ ಇದ್ದುದಕ್ಕೆ ಸಹಾಯಕ ಸಾಲಿಸಿಟರ್ ಜನರಲ್ ಅವರಿಗೆ ಧನ್ಯವಾದ ಹೇಳಬೇಕು ಎಂದು ಹೇಳಿದರು.