ಕೊಳಕಿನಲ್ಲಿ ಕೂಡಿ ಹಾಕಿದರು; ಗೋಕರ್ಣದ ಗುಹೆಯಲ್ಲಿ ಪತ್ತೆಯಾದ ರಷ್ಯಾದ ಮಹಿಳೆಯ ಆರೋಪ

ಭಾರತಕ್ಕೆ ವ್ಯಾಪಾರ ವೀಸಾದ ಮೂಲಕ ರಷ್ಯಾದಿಂದ ಬಂದಿದ್ದ ಕುಟಿನಾ, ಗೋವಾ ಮಾರ್ಗವಾಗಿ ಗೋಕರ್ಣಕ್ಕೆ ತಲುಪಿದ್ದರು. ಸುಮಾರು ಎರಡು ವಾರಗಳ ಕಾಲ ಈ ಕಾಡಿನೊಳಗಿನ ಗುಹೆಯನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡು ಜೀವನ ಸಾಗಿಸಿದ್ದರು.;

Update: 2025-07-17 14:15 GMT

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ಏಕಾಂತದ ಗುಹೆಯೊಂದರಲ್ಲಿ ತಮ್ಮಿಬ್ಬರು ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾದ 40 ವರ್ಷದ ನಿನಾ ಕುಟಿನಾ ಅವರ ಪ್ರಕರಣ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ತಾನು ಚಿತ್ರಕಲೆ, ಹಾಡುಗಾರಿಕೆ ಮತ್ತು ಪುಸ್ತಕ ಓದುವ ಮೂಲಕ ಶಾಂತಿಯುತ ಜೀವನ ನಡೆಸುತ್ತಿದ್ದೆ ಎಂದು ಮಾಧ್ಯಮಗಳಿಗೆ ತಿಳಿಸಿರುವ ಕುಟಿನಾ, ತಮ್ಮ ವೀಸಾ ಇತ್ತೀಚೆಗೆ ಮುಕ್ತಾಯಗೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತಮ್ಮ ಬಗ್ಗೆ ಟಿವಿಯಲ್ಲಿ ಪ್ರಸಾರವಾದ ವರದಿಗಳು ಸುಳ್ಳು ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುಹೆಯಲ್ಲಿ ಒಂಟಿ ಜೀವನ

ನಿನಾ ಕುಟಿನಾ ಮತ್ತು ಅವರ ಇಬ್ಬರು ಮಕ್ಕಳಾದ ಪ್ರಿಯಾ (6) ಮತ್ತು ಆಮಾ (4) ಜುಲೈ 11ರಂದು ಕುಮಟಾದ ರಾಮತೀರ್ಥ ಬೆಟ್ಟದ ಗುಹೆಯಲ್ಲಿ ಪತ್ತೆಯಾಗಿದ್ದರು. ಭಾರತಕ್ಕೆ ವ್ಯಾಪಾರ ವೀಸಾದ ಮೂಲಕ ರಷ್ಯಾದಿಂದ ಬಂದಿದ್ದ ಕುಟಿನಾ, ಗೋವಾ ಮಾರ್ಗವಾಗಿ ಗೋಕರ್ಣಕ್ಕೆ ತಲುಪಿದ್ದರು. ಸುಮಾರು ಎರಡು ವಾರಗಳ ಕಾಲ ಈ ಕಾಡಿನೊಳಗಿನ ಗುಹೆಯನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡು ಜೀವನ ಸಾಗಿಸಿದ್ದರು.

ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕುಟಿನಾ, "ಕಳೆದ 15 ವರ್ಷಗಳಿಂದ ನಾನು 20 ದೇಶಗಳಿಗೆ ಭೇಟಿ ನೀಡಿದ್ದೇನೆ. ನನ್ನ ನಾಲ್ಕು ಮಕ್ಕಳು ವಿವಿಧ ಸ್ಥಳಗಳಲ್ಲಿ ಹುಟ್ಟಿದ್ದಾರೆ. ಆಸ್ಪತ್ರೆ ಅಥವಾ ವೈದ್ಯರ ಸಹಾಯವಿಲ್ಲದೆ ನಾನೇ ಹೆರಿಗೆ ಮಾಡಿಸಿದ್ದೇನೆ," ಎಂದು ತಿಳಿಸಿದ್ದಾರೆ. ಗುಹೆಯಲ್ಲಿದ್ದ ತಮ್ಮ ದಿನಚರಿಯ ಬಗ್ಗೆ ವಿವರಿಸಿರುವ ಅವರು, "ನಾವು ಸೂರ್ಯೋದಯ ಆದಾಗ ಏಳುತ್ತಿದ್ದೆವು, ನದಿಯಲ್ಲಿ ಈಜುತ್ತಿದ್ದೆವು. ಬೆಂಕಿಯಲ್ಲಿ ಅಡುಗೆ ಮಾಡಿ, ಸಮೀಪದ ಗ್ರಾಮದಿಂದ ಸಾಮಗ್ರಿಗಳನ್ನು ತರುತ್ತಿದ್ದೆವು. ಚಿತ್ರ ಬಿಡಿಸುತ್ತಿದ್ದೆವು, ಹಾಡುತ್ತಿದ್ದೆವು, ಪುಸ್ತಕ ಓದುತ್ತಿದ್ದೆವು, ಶಾಂತಿಯಿಂದ ಜೀವಿಸುತ್ತಿದ್ದೆವು," ಎಂದು ನೆನಪಿಸಿಕೊಂಡಿದ್ದಾರೆ.

ಪ್ರಕೃತಿಯಲ್ಲಿ ಸುರಕ್ಷಿತ ಎಂಬ ವಿಶ್ವಾಸ

ನಾನು ಆಧ್ಯಾತ್ಮಿಕತೆಗಾಗಿ ಗೋಕರ್ಣಕ್ಕೆ ಬಂದಿಲ್ಲ, ಬದಲಿಗೆ "ಪ್ರಕೃತಿಯು ಆರೋಗ್ಯಕ್ಕೆ ಉತ್ತಮ ಎಂಬ ನಂಬಿಕೆಯಿಂದ" ಬಂದಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಗುಹೆಯಲ್ಲಿ ತಾನು ಮತ್ತು ಮಕ್ಕಳು ಯಾವುದೇ ಅಪಾಯಕ್ಕೆ ಒಳಗಾಗಿರಲಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. "ನಮಗೆ ಕಾಡಿನಲ್ಲಿ ವಾಸಿಸುವ ಅನುಭವವಿದೆ. ನಾವು ಸಾಯುತ್ತಿರಲಿಲ್ಲ. ನನ್ನ ಮಕ್ಕಳು ಜಲಪಾತದಲ್ಲಿ ಈಜುತ್ತಾ, ಸಂತೋಷದಿಂದಿದ್ದರು," ಎಂದು ಅವರು ಹೇಳಿದ್ದಾರೆ.

ಗುಹೆಯ ಕುರಿತು ವಿವರಣೆ ನೀಡಿದ ಅವರು, "ಗುಹೆಯು ದಟ್ಟವಾದ ಕಾಡಿನೊಳಗೆ ಇರಲಿಲ್ಲ, ಅದು ಚಿಕ್ಕದೂ ಆಗಿರಲಿಲ್ಲ. ಅದರಲ್ಲಿ ಕಿಟಕಿಯಂತಹ ತೆರವು ಇದ್ದು, ಸಮುದ್ರವನ್ನು ನೋಡಬಹುದಿತ್ತು," ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೋಸ್ಟಾ ರಿಕಾ, ಮಲೇಷಿಯಾ, ಬಾಲಿ, ಥೈಲ್ಯಾಂಡ್, ನೇಪಾಳ ಮತ್ತು ಉಕ್ರೇನ್‌ನಂತಹ ದೇಶಗಳಿಗೂ ತಾನು ಭೇಟಿ ನೀಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ವೀಸಾ ವಿವಾದ, ಸ್ಪಷ್ಟನೆ

ಪೊಲೀಸರು ಕುಟಿನಾ ಅವರ ವೀಸಾ 2017ರಲ್ಲಿ ಮುಕ್ತಾಯಗೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಕುಟಿನಾ ಈ ಆರೋಪವನ್ನು ತಳ್ಳಿಹಾಕಿ, "ನನ್ನ ವೀಸಾ ಇತ್ತೀಚೆಗೆ ಮುಕ್ತಾಯಗೊಂಡಿದೆ. 2017ರ ನಂತರ ನಾವು ಇನ್ನೂ ನಾಲ್ಕು ದೇಶಗಳಿಗೆ ಭೇಟಿ ನೀಡಿದ್ದೇವೆ," ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಈಗಿನ ಪರಿಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಿನಾ, "ನಮ್ಮನ್ನು ಕೊಳಕು ಪರಿಸರದಲ್ಲಿ ಇರಿಸಲಾಗಿದೆ. ಇಲ್ಲಿ ಕೊಳಕಾಗಿದೆ, ಗೌಪ್ಯತೆ ಇಲ್ಲ, ಕೇವಲ ಅನ್ನವನ್ನು ತಿನ್ನಲು ನೀಡಲಾಗುತ್ತಿದೆ. ನನ್ನ ಮಗನ ಚಿತಾ ಭಸ್ಮ ಸೇರಿದಂತೆ ನಮ್ಮ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ," ಎಂದು ಗಂಭೀರ ಆರೋಪ ಮಾಡಿದ್ದಾರೆ. "ಟಿವಿಯಲ್ಲಿ ತೋರಿಸಿದ ಎಲ್ಲವೂ ಸುಳ್ಳು. ನಮ್ಮ ಜೀವನ ಎಷ್ಟು ಸ್ವಚ್ಛವಾಗಿತ್ತು ಎಂಬುದಕ್ಕೆ ನನ್ನ ಬಳಿ ವಿಡಿಯೋ ಮತ್ತು ಫೋಟೋಗಳಿವೆ," ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನನಗೆ ಆದಾಯ ಇದೆ ಎಂದ ಮಹಿಳೆ 

ಕುಟಿನಾ ತಾನು ಕಲೆ ಮತ್ತು ರಷ್ಯನ್ ಸಾಹಿತ್ಯದಲ್ಲಿ ತರಬೇತಿ ಪಡೆದ ಶಿಕ್ಷಕಿ ಎಂದು ಹೇಳಿಕೊಂಡಿದ್ದಾರೆ. ತಮ್ಮ ಮಕ್ಕಳಿಗೆ ತಾನೇ ಮನೆಯಲ್ಲಿ ಶಿಕ್ಷಣ ನೀಡುತ್ತೇನೆ ಎಂದಿರುವ ಅವರು, "ನನ್ನ ಮಕ್ಕಳು ತುಂಬಾ ಚುರುಕು, ಆರೋಗ್ಯವಂತ ಮತ್ತು ಪ್ರತಿಭಾವಂತರು. ಅವರು ಶಾಲೆಗೆ ಹೋಗಿಲ್ಲ, ಆದರೆ ಭವಿಷ್ಯದಲ್ಲಿ ಅಧಿಕೃತ ದಾಖಲೆಗಳೊಂದಿಗೆ ಹೋಮ್‌ಸ್ಕೂಲಿಂಗ್ ಮಾಡುತ್ತೇನೆ," ಎಂದು ತಿಳಿಸಿದ್ದಾರೆ. ಚಿತ್ರಕಲೆ, ಸಂಗೀತ ವಿಡಿಯೋ ತಯಾರಿಕೆ, ಶಿಕ್ಷಣ ಮತ್ತು ಮಕ್ಕಳ ಸಂರಕ್ಷಣೆಯ ಮೂಲಕ ತಮಗೆ ಆದಾಯ ಬರುತ್ತದೆ ಎಂದಿದ್ದಾರೆ. "ನನಗೆ ಕೆಲಸವಿಲ್ಲದಿದ್ದರೆ, ನನ್ನ ಸಹೋದರ, ತಂದೆ ಅಥವಾ ಮಗನಿಂದ ಆರ್ಥಿಕ ಸಹಾಯ ಪಡೆಯುತ್ತೇನೆ," ಎಂದು ಅವರು ಹೇಳಿದ್ದಾರೆ.

ರಷ್ಯಾಕ್ಕೆ ಮರಳದಿರಲು ಕಾರಣವನ್ನು ವಿವರಿಸಿದ ಅವರು, "ಹಲವು ವೈಯಕ್ತಿಕ ನಷ್ಟಗಳು ಎದುರಾದವು. ನನ್ನ ಮಗನ ಮರಣ ಮಾತ್ರವಲ್ಲದೆ, ಇತರ ಹತ್ತಿರದವರನ್ನೂ ಕಳೆದುಕೊಂಡೆ. ದುಃಖ, ಕೆಲಸ ಮತ್ತು ಇತರ ಸಮಸ್ಯೆಗಳಿಂದಾಗಿ ರಷ್ಯಾಕ್ಕೆ ಮರಳಲಿಲ್ಲ," ಎಂದಿದ್ದಾರೆ. ಭಾರತದ ಪರಿಸರ ಮತ್ತು ಜನರನ್ನು ಪ್ರೀತಿಸುವ ಕಾರಣದಿಂದಲೇ ಇಲ್ಲಿಗೆ ಮರಳಿ ಬಂದೆವು ಎಂದು ಅವರು ತಿಳಿಸಿದ್ದಾರೆ.

ಇಸ್ರೇಲಿ ತಂದೆಯ ಪತ್ತೆ ಮತ್ತು ಗಡಿಪಾರು ಪ್ರಕ್ರಿಯೆ

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಧಿಕಾರಿಯೊಬ್ಬರು ಈ ಮಕ್ಕಳ ತಂದೆಯಾದ ಇಸ್ರೇಲಿ ಉದ್ಯಮಿಯನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ಆತ ಭಾರತದಲ್ಲಿದ್ದು, ವ್ಯಾಪಾರ ವೀಸಾದಲ್ಲಿದ್ದಾರೆ. ಆತನೊಂದಿಗೆ ಮಾತನಾಡಿ, ನಿನಾ ಮತ್ತು ಮಕ್ಕಳಿಗೆ ವಿಮಾನ ಟಿಕೆಟ್‌ಗೆ ಸಹಾಯ ಮಾಡಬಹುದೇ ಎಂದು ಚರ್ಚಿಸಲಾಗಿದೆ. 2017 ಅಥವಾ 2018 ರಲ್ಲಿ ನಿನಾ ಈ ಇಸ್ರೇಲಿ ವ್ಯಕ್ತಿಯನ್ನು ಭೇಟಿಯಾಗಿದ್ದಳು ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ, ನಿನಾ ಕುಟಿನಾ ಬೆಂಗಳೂರಿನ ಡಿಟೆನ್ಷನ್ ಸೆಂಟರ್‌ನಲ್ಲಿದ್ದಾರೆ. ರಷ್ಯಾದ ರಾಯಭಾರ ಕಚೇರಿಯೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಆಕೆಯನ್ನು ಮತ್ತು ಆಕೆಯ ಮಕ್ಕಳನ್ನು ಗಡಿಪಾರು ಒಂದು ತಿಂಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Similar News