ಇಡಿ ಅಧಿಕಾರಿಗಳ ಕಿರುಕುಳ ಆರೋಪಿಸಿ ಉದ್ಯಮಿ ದಂಪತಿ ಆತ್ಮಹತ್ಯೆ; ಬಿಜೆಪಿ, ಕಾಂಗ್ರೆಸ್ ಜಟಾಪಟಿ
ಪರ್ಮಾರ್ ಮತ್ತು ಅವರ ಪತ್ನಿ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದಾರೆ. ಅವರ ರಾಜಕೀಯ ಒಲವುಗಳ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.;
ಇಡಿ ಅಧಿಕಾರಿಗಳ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಉದ್ಯಮಿ ಮತ್ತು ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ನೋಟ್ನಲ್ಲಿ ಅವರು ಬಿಜೆಪಿ ನಾಯಕರ ಕಿರುಕುಳದ ಆರೋಪ ಮಾಡಿರುವುದು ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.
ಉದ್ಯಮಿ ಮನೋಜ್ ಪರ್ಮಾರ್ ಮತ್ತು ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡವರು. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಆತ್ಮಹತ್ಯೆ ಪತ್ರದಲ್ಲಿ ತಮ್ಮ ಮಕ್ಕಳನ್ನು ಅನಾಥ ಮಾಡಬೇಡಿ ಎಂದು ವಿಪಕ್ಷಗಳ ನಾಯಕ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಬಿಜೆಪಿ ನಾಯಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪರ್ಮಾರ್ ಮತ್ತು ಅವರ ಪತ್ನಿ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದಾರೆ. ಅವರ ರಾಜಕೀಯ ಒಲವುಗಳ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಈ ದಂಪತಿಯ ಮಕ್ಕಳು ತಮ್ಮ ಪಿಗ್ಗಿಬ್ಯಾಂಕ್ನಲ್ಲಿ ಕೂಡಿಟ್ಟಿದ್ದ ಹಣವನ್ನು ರಾಹುಲ್ ಗಾಂಧಿ ಅವರ "ಭಾರತ್ ಜೋಡೋ (ನ್ಯಾಯ) ಯಾತ್ರೆ" ಯ ಸಮಯದಲ್ಲಿ ಉಡುಗೊರೆಯಾಗಿ ನೀಡಿದ್ದರು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಪೊಲೀಸರು ಸ್ವೀಕರಿಸಿದ ಆತ್ಮಹತ್ಯೆ ಪತ್ರವು ಅರ್ಜಿಯ ರೂಪದಲ್ಲಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಒಪಿ) ಆಕಾಶ್ ಅಮಲ್ಕರ್ ತಿಳಿಸಿದ್ದಾರೆ. ಮೃತ ದಂಪತಿಯ ಕುಟುಂಬ ಸದಸ್ಯರು ಇನ್ನೂ ಶೋಕದಲ್ಲಿದ್ದಾರೆ. ಆದ್ದರಿಂದ ಪೊಲೀಸರು ಅವರ ಹೇಳಿಕೆಗಳನ್ನು ದಾಖಲಿಸಿಲ್ಲ ಎಂದು ಅವರು ಹೇಳಿದ್ದಾರೆ.
ತನಿಖೆ ನಡೆಯುತ್ತಿರುವುದರಿಂದ ಆತ್ಮಹತ್ಯೆ ಪತ್ರದ ಬಗ್ಗೆ ಹೆಚ್ಚಿನ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿಕೆ ನೀಡಿದ್ದಾರೆ.
ಎಲ್ಲ ರಾಜಕೀಯ ನಾಯಕರ ಹೆಸರಲ್ಲಿ ಮರಣ ಪತ್ರ
ಪರ್ಮಾರ್ ಮತ್ತು ಅವರ ಪತ್ನಿ ನೇಹಾ ಶುಕ್ರವಾರ ಬೆಳಿಗ್ಗೆ ಸೆಹೋರ್ ಜಿಲ್ಲೆಯ ಅಷ್ಟಾ ಪಟ್ಟಣದ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಭಾರತದ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರರನ್ನು ಉದ್ದೇಶಿಸಿ ಆತ್ಮಹತ್ಯೆ ಪತ್ರ ಬರೆಯಲಾಗಿದೆ.
ಆತ್ಮಹತ್ಯೆ ಪತ್ರದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಹೆಸರು ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಪಕ್ಷದ ರಾಜ್ಯ ಅಧ್ಯಕ್ಷ ಜಿತು ಪಟ್ವಾರಿ, "ಕಾಂಗ್ರೆಸ್ ಜನರ ಪಕ್ಷ. ಅದಕ್ಕಾಗಿಯೇ ನಾನು ನಿನ್ನೆ ಅಲ್ಲಿಗೆ ಭೇಟಿ ನೀಡಿದ್ದೆ. ಪರ್ಮಾರ್ ದಂಪತಿಯ ಸಾವು ಆತ್ಮಹತ್ಯೆಯಲ್ಲ. ರಾಜ್ಯ ಪ್ರಾಯೋಜಿತ ಕೊಲೆ ಎಂದು ಪಟ್ವಾರಿ ಆರೋಪಿಸಿದರು.
ಇಡಿ ಮತ್ತು ಇತರ ತನಿಖಾ ಸಂಸ್ಥೆಗಳಿಂದ ಕಿರುಕುಳಕ್ಕೊಳಗಾದ ನಂತರ ಹಲವಾರು ನಾಯಕರು ಬಿಜೆಪಿಗೆ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಇಡಿ ಅಧಿಕಾರಿಗಳ ಕಿರುಕುಳದಿಂದಾಗಿ ಪರ್ಮಾರ್ ತನ್ನ ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಶನಿವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೃತರ ಏಕೈಕ ಅಪರಾಧವೆಂದರೆ. ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಅವರ ಮಕ್ಕಳು ಪಿಗ್ಗಿ ಬ್ಯಾಂಕ್ ಉಡುಗೊರೆಯಾಗಿ ಕೊಟ್ಟಿರುವುದು ಎಂದು ಕಮಲ್ನಾಥ್ ಬರೆದುಕೊಂಡಿದ್ದಾರೆ. ಕಾನೂನಿನ ಪ್ರಕಾರ ಪ್ರಕರಣದ ತನಿಖೆ ನಡೆಸುವಂತೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಮಲ್ ನಾಥ್ ತಮ್ಮ ಪೋಸ್ಟ್ ನಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಒತ್ತಾಯಿಸಿದರು.