J-K Assembly : ಜಮ್ಮು ಕಾಶ್ಮೀರ ವಿಧಾನ ಸಭೆ ಕಲಾಪದಲ್ಲಿ ಮಾರಾಮಾರಿ; ಹೊಡೆದಾಡಿಕೊಂಡ ಸದಸ್ಯರು
ಗುರುವಾರ ಬೆಳಿಗ್ಗೆ ವಿಧಾನಸಭೆ ಸೇರಿದ ಕೂಡಲೇ, ಬುಧವಾರ (ನವೆಂಬರ್ 6) ಅಂಗೀಕರಿಸಿದ ನಿರ್ಣಯದ ವಿರುದ್ಧ ಬಿಜೆಪಿ ಸದಸ್ಯರು ಪ್ರತಿಭಟಿಸಲು ಆರಂಭಿಸಿದರು. ಇದು ಗದ್ದಲಕ್ಕೆ ಕಾರಣವಾಯಿತು.
ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯ ಪ್ರಕಾರ ವಿಶೇಷ ಸ್ಥಾನಮಾನ ಮರುಸ್ಥಾಪಿಸುವ ನಿರ್ಣಯದ ವಿರುದ್ಧದ ಬಿಜೆಪಿ ಸದಸ್ಯರು ನಡೆಸಿದ ಪ್ರತಿಭಟನೆಯು ಅಲ್ಲಿ ವಿಧಾನ ಸಭೆ ಕಲಾಪದ ವೇಳೆ ಮಾರಾಮಾರಿಗೆ ಕಾರಣವಾಯಿತು. ಪ್ರತಿಭಟನೆಯ ಸಂದರ್ಭದಲ್ಲಿ ಬಾವಿಗೆ ನುಗ್ಗಿದ ಪ್ರತಿ ಪಕ್ಷದ ಸದಸ್ಯರನ್ನು ಹೊರಹಾಕುವಂತೆ ಸ್ಪೀಕರ್ ನಿರ್ದೇಶಿಸಿದ ನಂತರ ಬಿಜೆಪಿ ಶಾಸಕರು ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮಾರ್ಷ;ಲ್‌ಗಳ ನಡುವೆ ಗುರುವಾರ (ನವೆಂಬರ್ 7) ಜಟಾಪಟಿ ನಡೆಯಿತು.
Ruckus breaks out in the #JammuandKashmir Assembly on Thursday after #BJP members protest against the passage of a resolution on the restoration of special status for the erstwhile state.
— The Federal (@TheFederal_News) November 7, 2024
Read here: https://t.co/ZlC9Ub3tFT#Article370 pic.twitter.com/l7t9f9tyJr
ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರ ನಿರ್ದೇಶನದ ಮೇರೆಗೆ ಕನಿಷ್ಠ ಮೂವರು ಶಾಸಕರನ್ನು ಹೊರಹಾಕಲಾಯಿತು. ಆದಾಗ್ಯೂ ವಿರೋಧ ಪಕ್ಷದ ಸದಸ್ಯರ ಪ್ರತಿರೋಧದಿಂದಾಗಿ ಜೋರು ಜಗಳ ನಡೆಯಿತು.
ಎಐಪಿ ಬ್ಯಾನರ್ ವಿರುದ್ಧ ಗದ್ದಲ
ಗುರುವಾರ ಬೆಳಿಗ್ಗೆ ವಿಧಾನಸಭೆ ಸೇರಿದ ಕೂಡಲೇ, ಬುಧವಾರ (ನವೆಂಬರ್ 6) ಅಂಗೀಕರಿಸಿದ ನಿರ್ಣಯದ ವಿರುದ್ಧ ಬಿಜೆಪಿ ಸದಸ್ಯರು ಪ್ರತಿಭಟಿಸಲು ಆರಂಭಿಸಿದರು. ಇದು ಗದ್ದಲಕ್ಕೆ ಕಾರಣವಾಯಿತು.
ಬಿಜೆಪಿ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ನಿರ್ಣಯದ ಮೇಲೆ ಮಾತನಾಡುತ್ತಿದ್ದಾಗ, ಅವಾಮಿ ಇತ್ತೆಹಾದ್ ಪಕ್ಷದ (ಎಐಪಿ) ಮುಖಂಡ ಮತ್ತು ಲಂಗಟೆ ಶಾಸಕ ಶೇಖ್ ಖುರ್ಷಿದ್ ಅವರು 370 ಮತ್ತು 35 ಎ ವಿಧಿಗಳನ್ನು ಪುನಃಸ್ಥಾಪಿಸಬೇಕು ಎಂಬ ಬ್ಯಾನರ್ ಪ್ರದರ್ಶಿಸಿದರು. ಅವರು ಸದನದ ಬಾವಿಗೆ ಇಳಿದರು. ಖುರ್ಷಿದ್ ಎಐಪಿ ಮುಖ್ಯಸ್ಥ ಮತ್ತು ಬಾರಾಮುಲ್ಲಾ ಸಂಸದ ಎಂಜಿನಿಯರ್ ರಶೀದ್ ಅವರ ಸಹೋದರ.
ಬ್ಯಾನರ್ ಹರಿದು ಆಕ್ರೋಶ
ಕೋಪಗೊಂಡ ಬಿಜೆಪಿ ಸದಸ್ಯರು ಬಾವಿಗೆ ಹಾರಿ ಬ್ಯಾನರ್ ಕಸಿದುಕೊಂಡು ಹರಿದು ಹಾಕಿದರು. ಗದ್ದಲದ ನಡುವೆಯೇ ಸ್ಪೀಕರ್ ಕಲಾಪವನ್ನು15 ನಿಮಿಷಗಳ ಕಾಲ ಮುಂದೂಡಿದರು. ಆದರೆ, ಸದನವನ್ನು ಮುಂದೂಡಿದ ನಂತರವೂ ಬಿಜೆಪಿ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಸ್ಪೀಕರ್ ವಿರೋಧ ಪಕ್ಷದ ಸದಸ್ಯರನ್ನು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಿದರು.
"ನೀವು ಸದನದ ಪ್ರತಿಪಕ್ಷಗಳ ಸದಸ್ಯರು. ನಾವು ನಿಮ್ಮ ಮಾತನ್ನು ಕೇಳುತ್ತೇವೆ" ಎಂದು ಸ್ಪೀಕರ್ ಶರ್ಮಾ ಅವರು ಕುರಿತು ಹೇಳಿದರು.
ಕೆರಳಿದ ಎನ್‌ಸಿ
ಸ್ಪೀಕರ್ ಹೇಳಿಕೆಯಿಂದ ಕೆರಳಿದ ಎನ್‌ಸಿ ಸದಸ್ಯರು ಪ್ರತಿಭಟನೆ ಮಾಡಲು ಮುಂದಾದರು. ಈ ವೇಳೆ ಸ್ಪೀಕರ್, 'ನೀವು ನಿಯಮಗಳಿಗಿಂತ ದೊಡ್ಡವರಲ್ಲ. ನಿಯಮಗಳನ್ನು ನೋಡಿ. ಕೆಲವು ಸದಸ್ಯರ ಚಟುವಟಿಕೆಗಳನ್ನು ನಾನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನನ್ನ ಕೈಯಿಂದ ತಪ್ಪು ಕ್ರಮಗಳನ್ನು ಕೈಗೊಳ್ಳುವಂತೆ ಮಾಡಿಸಬೇಡಿ " ಎಂದು ಅವರು ಎಚ್ಚರಿಕೆ ನೀಡಿದರು.
ʼʼನ್ಯಾಷನಲ್ ಕಾನ್ಫರೆನ್ಸ್‌ನ ವಿಶೇಷ ಸ್ಥಾನಮಾನದ ನಾಟಕವು ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ" ಎಂದು ಶರ್ಮಾ ಹೇಳಿಕೆ ನೀಡಿದರು. ಇದು ಆ ಪಕ್ಷವನ್ನು ಕೆರಳಿಸಿತು. ಗದ್ದಲ ಮುಂದುವರಿಯುತ್ತಿದ್ದಂತೆಬಹುತೇಕ ಎಲ್ಲ ಶಾಸಕರು ಎದ್ದು ನಿಂತು ಗಲಾಟೆ ಶುರು ಮಾಡಿದರು.
ಬಿಜೆಪಿ ಶಾಸಕರನ್ನು ಹೊರಹಾಕಲು ಸ್ಪೀಕರ್ ಸೂಚನೆ
ಬಿಜೆಪಿ ಸದಸ್ಯರು "ಬಲಿದಾನಗಳಾಗಿವೆ. ಈ ಕಾಶ್ಮೀರ ನಮ್ಮದುʼʼ ಎಂದರು. ಪ್ರತಿಯಾಗಿ ಎನ್ಸಿ ಶಾಸಕರು "ರಕ್ತ ಹರಿಸಿ ನಿರ್ಮಿಸಿದ ಕಾಶ್ಮೀರ ನಮ್ಮದು,ʼʼ ಎಂದು ಹೇಳಿದರು. ಕೋಲಾಹಲ ಮುಂದುವರಿದಾಗ ಸ್ಪೀಕರ್ ಏನನ್ನೂ ದಾಖಲಿಸಬಾರದು ಅಥವಾ ವರದಿ ಮಾಡಬಾರದು ಎಂದು ನಿರ್ದೇಶನ ನೀಡಿದರು. ಅಲ್ಲದೆ, ಸದನದ ಬಾವಿಗೆ ನುಗ್ಗಿದ ಬಿಜೆಪಿ ಸದಸ್ಯರನ್ನು ಹೊರಹಾಕುವಂತೆ ನಿರ್ದೇಶನ ನೀಡಿದರು.
ಅವರನ್ನು ಹೊರ ಹಾಕಲು ಮಾರ್ಷಗಳು ಮುಂದಾಗುತ್ತಿದ್ದಂತೆ ಗಲಾಟೆ ಜೋರಾಯಿತು. "ಅವರು ಅದಕ್ಕೆ ಅರ್ಹರು, ಅವರನ್ನು ಹೊರಹಾಕಿ" ಎಂದು ಸ್ಪೀಕರ್ ಆದೇಶಿಸಿದರು. ಈ ವೇಳೆ ಬಿಜೆಪಿಯ ಏಕೈಕ ಮಹಿಳಾ ಶಾಸಕಿ ಶಗುನ್ ಪರಿಹಾರ್ ವಿಧಾನಭೆಯ ಮೇಜಿನ ಮೇಲೆ ನಿಂತರು. ಅವರನ್ನು ಹೊರಕ್ಕೆ ಹಾಕಲು ಮಹಿಳಾ ಮಾರ್ಷಲ್‌ಗಳನ್ನು ಕರೆಸಲಾಯಿತು.
ಬಿಜೆಪಿ ಶಾಸಕರನ್ನು ಎಳೆದುಕೊಂಡು ಹೋಗುತ್ತಿದ್ದಂತೆ ಅವರು ಮಾರ್ಷಲ್‌ಗಳ ಜತೆ ಹೊಡೆದಾಡಿದರು. ಬೆಂಚುಗಳು ಮೇಜುಗಳನ್ನು ಹಿಡಿದು ಬಡಿದಾಡುವ ನಡುವೆ ಮೂವರು ಬಿಜೆಪಿ ಶಾಸಕರನ್ನು ಸದನದಿಂದ ಹೊರಹಾಕಲಾಯಿತು.
ನ್ಯಾಷನಲ್ ಕಾನ್ಫರೆನ್ಸ್ ಸದಸ್ಯರು "ಜಮ್ಮು ಕಾಶ್ಮೀರದ 370ನೇ ವಿಧಿಯ ಕುರಿತು ಘೋಷಣೆ ಕೂಗಿದರೆ " ಬಿಜೆಪಿ ಶಾಸಕರು "ಭಾರತ್ ಮಾತಾ ಕಿ ಜೈ" ಎಂದು ಕೂಗಿದರು.
ಗಲಾಟೆ ಮುಂದುವರಿಕೆ
ಸಚಿವ ಸತೀಶ್ ಶರ್ಮಾ ಎದ್ದು ನಿಂತು, ಬಿಜೆಪಿ ಒಡೆದು ಆಳುವ ಆಟ ಆಡುತ್ತಿದೆ ಎಂದು ಆರೋಪಿಸಿದರು. "ಭಾರತ ಮಾತೆ" ಎಲ್ಲರಿಗೂ ಸೇರಿದವರು ಎಂದು ಅವರು ಹೇಳಿದರು. "ಅವರು (ಬಿಜೆಪಿ ಸದಸ್ಯರು) ನಿನ್ನೆ ನಿಂತಿದ್ದ ಮೇಜಿನ ಮೇಲೆ ಭಾರತದ ಸಂವಿಧಾನವಿತ್ತು. ಅವರು ತಮ್ಮ ಬೂಟುಗಳನ್ನು ಧರಿಸಿ ಅದರ ಮೇಲೆ ನಿಂತಿದ್ದಾರೆ. ಅದಕ್ಕಾಗಿ ಅವರಿಗೆ ಶಿಕ್ಷೆಯಾಗಬೇಕು" ಎಂದು ಶರ್ಮಾ ಒತ್ತಾಯಿಸಿದರು. .
ಹೊಸ ನಿರ್ಣಯ
ಖುರ್ಷಿದ್ ಮತ್ತು ಹಂದ್ವಾರದ ಶಾಸಕ ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜಾದ್ ಲೋನ್ ಜಂಟಿಯಾಗಿ 370 ನೇ ವಿಧಿ ಸ್ಥಾಪಿಸುವಂತೆ ಒತ್ತಾಯಿಸಿ ಹೊಸ ನಿರ್ಣಯ ಸಲ್ಲಿಸಿದರು.
ಖುರ್ಷಿದ್ ಮತ್ತು ಲೋನ್ ಅವರು ಸಲ್ಲಿಸಿದ ನಿರ್ಣಯದಲ್ಲಿ ಹೀಗೆ ಹೇಳಲಾಗಿದೆ: "ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ, 2019 ಅನ್ನು ಜಾರಿಗೆ ತರುವುದರ ಜೊತೆಗೆ 370ನೇ ವಿಧಿ ಮತ್ತು 35 ಎ ವಿಧಿಯನ್ನು ಅಸಂವಿಧಾನಿಕ ಮತ್ತು ಏಕಪಕ್ಷೀಯವಾಗಿ ರದ್ದುಪಡಿಸಿರುವುದನ್ನು ಈ ಸದನ ಬಲವಾಗಿ ಖಂಡಿಸುತ್ತದೆ. ಈ ಕ್ರಮಗಳು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯತ್ವವನ್ನು ಕಸಿದುಕೊಂಡಿದೆ. ಈ ಪ್ರದೇಶಕ್ಕೆ ಮತ್ತು ಇಲ್ಲಿನ ಜನರ ಮೂಲಭೂತ ಖಾತರಿಗಳು ಮತ್ತು ರಕ್ಷಣೆಗಳನ್ನು ದುರ್ಬಲಗೊಳಿಸಿದೆ.
"ಈ ಸದನವು 370 ನೇ ವಿಧಿ ಮತ್ತು 35 ಎ ವಿಧಿಯನ್ನು ಅವುಗಳ ಮೂಲ, ಬದಲಾಗದ ರೂಪದಲ್ಲಿ ತಕ್ಷಣವೇ ಪುನರ್‌ಸ್ಥಾಪಿಸಲು ಒತ್ತಾಯಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ಪರಿಚಯಿಸಿದ ಎಲ್ಲಾ ಬದಲಾವಣೆಗಳನ್ನು ಹಿಂತೆಗೆದುಕೊಳ್ಳಲು ಕರೆ ನೀಡುತ್ತದೆ,ʼ ಎಂದು ಬರೆದಿದೆ.