ಕಾನ್ಪುರ (ಉತ್ತರಪ್ರದೇಶ): ಲಕ್ನೋ ಮತ್ತು ಕಾನ್ಪುರ ನಡುವೆ ಸಂಚರಿಸುವ ಹಮ್ಸಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ 11 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ರೈಲ್ವೆ ಗುತ್ತಿಗೆ ಕಾರ್ಮಿಕ(34)ರೊಬ್ಬರನ್ನು ಶುಕ್ರವಾರ ಸಹ ಪ್ರಯಾಣಿಕರು ಥಳಿಸಿ ಕೊಂದಿದ್ದಾರೆ.
ಬಿಹಾರ ಮೂಲದ ಪ್ರಶಾಂತ್ ಕುಮಾರ್ ಮೃತ. ಮಂಗಳವಾರ ರಾತ್ರಿ ನಡೆದ ಘಟನೆ ನಂತರ ಸಂತ್ರಸ್ತೆಯ ಕುಟುಂಬ ಮತ್ತು ಇತರ ಪ್ರಯಾಣಿಕ ರು ಆತನನ್ನು ಹಿಡಿದರು. ಕುಮಾರ್ ಸಂತ್ರಸ್ತೆಯ ಕುಟುಂಬದೊಂದಿಗೆ ಬಿಹಾರದ ಸಿವಾನ್‌ನಿಂದ ಹಮ್ಸಫರ್ ಎಕ್ಸ್‌ಪ್ರೆಸ್‌ಗೆ ಹತ್ತಿದ್ದರು. ಬಾಲಕಿಗೆ ತನ್ನ ಬರ್ತ್ ನೀಡುವುದಾಗಿ ಹೇಳಿ, ಆಕೆಯ ತಾಯಿ ಇಲ್ಲದಿದ್ದಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೆಚ್ಚುವರಿ ಡಿಜಿ (ರೈಲ್ವೆ)ಡಿ. ಪ್ರಕಾಶ್ ಶುಕ್ರವಾರ ತಿಳಿಸಿದರು.
ಘಟನೆಯನ್ನು ಬಾಲಕಿ ತನ್ನ ತಾಯಿಗೆ ಮತ್ತು ಆಕೆ ತನ್ನ ಕುಟುಂಬಕ್ಕೆ ತಿಳಿಸಿದ್ದಾರೆ. ಕುಪಿತಗೊಂಡ ಕುಟುಂಬ ಮತ್ತು ಪ್ರಯಾಣಿಕರು ಆತನನ್ನು ಥಳಿಸಿದರು. ಕಾನ್ಪುರ ಸೆಂಟ್ರಲ್ ನಿಲ್ದಾಣದಲ್ಲಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು. ಆರೋಗ್ಯ ಹದಗೆಟ್ಟಿದ್ದರಿಂದ ಕೆಪಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟರು ಎಂದು ಅಧಿಕಾರಿ ಹೇಳಿದರು.
ಸಂತ್ರಸ್ತೆಯ ತಾಯಿ ನೀಡಿದ ದೂರು ಆಧರಿಸಿ, ಕುಮಾರ್ ವಿರುದ್ಧ ಸೆಕ್ಷನ್ 74 ಮತ್ತು ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿ ದೆ. ಹೆಚ್ಚಿನ ತನಿಖೆಗೆ ಪ್ರಕರಣವನ್ನು ಲಕ್ನೋಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಕಾನ್ಪುರದಲ್ಲಿ ಮೂವರು ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದ್ದು, ಶವವನ್ನು ಕುಮಾರ್ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.