ಮುಂಬೈ: ಪ್ರಚೋದನಕಾರಿ ಭಾಷಣದಿಂದ ವಿವಾದ ಸೃಷ್ಟಿಸಿರುವ ಬಿಜೆಪಿ ಶಾಸಕ ನಿತೇಶ್ ರಾಣೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ʻಮಸೀದಿಗಳನ್ನು ಪ್ರವೇಶಿಸುವ ಮೂಲಕ ಮುಸ್ಲಿಮರನ್ನು ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆʼ ಎನ್ನಲಾಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರ ನಿತೇಶ್ ರಾಣೆ ಅವರ ಭಾಷಣ ವೈರಲ್ ಆದ ನಂತರ, ಬಿಜೆಪಿ ನವೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಕೋಮು ಗಲಭೆ ಸೃಷ್ಟಿಸಲು ಬಯಸುತ್ತದೆ ಎಂದು ಪ್ರತಿಪಕ್ಷಗಳು ದೂರಿವೆ.
ನಿತೇಶ್ ಅವರ ತಂದೆ, ಬಿಜೆಪಿ ಸಂಸದ ನಾರಾಯಣ ರಾಣೆ ಅವರು, ಹಾನಿ ನಿಯಂತ್ರಣಕ್ಕೆ ಮುಂದಾಗಿದ್ದು, ಮಗನಿಗೆ ಬುದ್ಧಿ ಹೇಳಿರುವುದಾಗಿ ತಿಳಿಸಿದ್ದಾರೆ. ʻಈ ವಿಷಯದಲ್ಲಿ ಧರ್ಮವನ್ನು ಎಳೆಯಬೇಡಿ. ಎಲ್ಲ ಮುಸ್ಲಿಮರು ತಪ್ಪಿತಸ್ಥರಲ್ಲ. ಆದ್ದರಿಂದ ಇಡೀ ಸಮುದಾಯವನ್ನು ಎಳೆಯಬೇಡಿ. ನಾನು ಪುತ್ರನಿಗೆ ಛೀಮಾರಿ ಹಾಕಿದ್ದೇನೆ,ʼ ಎಂದು ಹೇಳಿದ್ದಾರೆ.
ಅಹ್ಮದ್‌ನಗರ ಜಿಲ್ಲೆಯ ಶ್ರೀರಾಮಪುರ ಮತ್ತು ತೋಪ್ಖಾನಾ ಪ್ರದೇಶಗಳಲ್ಲಿ ಎರಡು ಸಾರ್ವಜನಿಕ ಸಭೆಗಳಲ್ಲಿ ಭಾನುವಾರ ಮಾತನಾಡಿದ್ದ ನಿತೇಶ್, ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಧರ್ಮಗುರು ಮಹಂತ್ ರಾಮಗಿರಿ ಮಹಾ ರಾಜ್ ಅವರನ್ನು ಬೆಂಬಲಿಸಿದ್ದರು. ಮಹಾರಾಜರಿಗೆ ತೊಂದರೆಯಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ವೈರಲ್ ವಿಡಿಯೋವೊಂದರಲ್ಲಿ ನಿತೇಶ್ ರಾಣೆ,ʻ ರಾಮಗಿರಿ ಮಹಾರಾಜರ ವಿರುದ್ಧ ಯಾರಾದರೂ ಏನಾದರೂ ಹೇಳಿದರೆ, ನಾವು ಮಸೀದಿ ಗಳನ್ನು ಪ್ರವೇಶಿಸಿ, ನಿಮ್ಮನ್ನು ಒಬ್ಬೊಬ್ಬರಾಗಿ ಹೊಡೆಯುತ್ತೇವೆ. ಇದನ್ನು ನೆನಪಿನಲ್ಲಿಡಿ,ʼ ಎಂದಿದ್ದಾರೆ. ರಾಮಗಿರಿ ಮಹಾರಾಜ್ ವಿರುದ್ಧ ಮಹಾರಾಷ್ಟ್ರದ ಹಲವೆಡೆ ಪ್ರಕರಣಗಳು ದಾಖಲಾಗಿದ್ದು, ಅವರ ಬಂಧನಕ್ಕೆ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.
ನಿತೇಶ್ ರಾಣೆ ವಿರುದ್ಧ ಶ್ರೀರಾಮಪುರ ಮತ್ತು ಟೋಪ್‌ಖಾನಾ ಠಾಣೆಗಳಲ್ಲಿ ಕ್ರಿಮಿನಲ್ ಬೆದರಿಕೆ, ಉದ್ದೇಶಪೂರ್ವಕವಾಗಿ ಶಾಂತಿ ಕದಡುವ ಪ್ರಯತ್ನ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕೆ ಎರಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧನಕ್ಕೆ ಆಗ್ರಹ: ನಿತೇಶ್ ರಾಣೆ ಅವರ ವಿಡಿಯೋ ಹಂಚಿಕೊಂಡಿರುವ ಎಐಎಂಐಎಂ ವಕ್ತಾರ ವಾರಿಸ್ ಪಠಾಣ್, ಬಿಜೆಪಿ ಶಾಸಕರನ್ನು ಬಂಧಿಸುವಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಗೃಹ ಖಾತೆ ಸಚಿವ ದೇವೇಂದ್ರ ಫಡ್ನವಿಸ್ ಅವರಿಗೆ ಆಗ್ರಹಿಸಿದ್ದಾರೆ. ʻರಾಣೆ ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುತ್ತಿದ್ದಾರೆ. ಇದು ಉದ್ರೇಕಕಾರಿ, ದ್ವೇಷ ಭಾಷಣ. ಚುನಾವಣೆಗೆ ಮುನ್ನ ಬಿಜೆಪಿ ಮಹಾರಾಷ್ಟ್ರದಲ್ಲಿ ಕೋಮುಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ,ʼ ಎಂದು ಆರೋಪಿಸಿದ್ದಾರೆ.
ಶಿವಸೇನಾ (ಯುಬಿಟಿ) ರಾಜ್ಯಸಭೆ ಸದಸ್ಯ ಸಂಜಯ್ ರಾವತ್ ಅವರು,ʻಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ಗಲಭೆ ಸೃಷ್ಟಿಸಲು ಮುಂದಾಗಿದೆ,ʼ ಎಂದು ಹೇಳಿದ್ದಾರೆ. ರಾವತ್ ಅವರ ಸಹೋದ್ಯೋಗಿ ಮತ್ತು ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಶಾಸಕ ಹಿಂಸಾಚಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ಹೇಳಿದರು.
ಮುಂಬೈ ಕಾಂಗ್ರೆಸ್‌ನ ಅಧ್ಯಕ್ಷೆ ವರ್ಷಾ ಗಾಯಕ್‌ವಾಡ್ ನೇತೃತ್ವದ ನಿಯೋಗವು ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಿ, ಪ್ರಚೋದನಕಾರಿ ಹೇಳಿಕೆ ನೀಡಿರುವ ಕಂಕಾವ್ಲಿ ಶಾಸಕ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು. ʻನಿತೇಶ್ ರಾಣೆ ಮತ್ತು ಬಿಜೆಪಿ ಎಂಎಲ್ಸಿ ಪ್ರಸಾದ್ ಲಾಡ್ ನೀಡಿದ ಹೇಳಿಕೆಗೆ ರಾಜಕೀಯ ಪ್ರಾಯೋಜಕತ್ವವಿದೆಯೇ ಎಂದು ತನಿಖೆ ಮಾಡಬೇಕು,ʼ ಎಂದು ಆಗ್ರಹಿಸಿದರು.
ಎನ್ಸಿಪಿ (ಎಸ್‌ಪಿ) ವಕ್ತಾರ ಅನೀಶ್ ಗವಾಂಡೆ ಅವರು,ʻನಿತೇಶ್ ರಾಣೆ ಅವರ ಹೇಳಿಕೆ ಇಂಥ ಮೊದಲ ಘಟನೆಯೇನಲ್ಲ. ಕೊಳೆಯುವಿಕೆ ಆಳವಾಗಿದೆ. ತೆಹಸೀನ್ ಪೂನಾವಾಲಾ ತೀರ್ಪಿನ ಉಲ್ಲಂಘನೆಗೆ ಮಹಾರಾಷ್ಟ್ರ ಸರ್ಕಾರದ ವಿರುದ್ಧವೇ ಪ್ರಕರಣ ದಾಖಲಿಸಬೇಕು,ʼ ಎಂದು ಹೇಳಿದರು.
ವಿವಾದ ಹೊಸದೇನಲ್ಲ: ನಿತೇಶ್ ರಾಣೆಗೆ ವಿವಾದಗಳು ಹೊಸದಲ್ಲ.ಒರಟು ಮಾತಿಗೆ ಹೆಸರಾಗಿರುವ ಅವರ ಮೇಲೆ ವರ್ಷದ ಆರಂಭದಲ್ಲಿ ಮುಂಬೈನ ಮಾಲ್ವಾನಿ, ಮನ್‌ಖುರ್ದ್ ಮತ್ತು ಘಾಟ್‌ಕೋಪರ್ ಪ್ರದೇಶಗಳಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.