ಮೇ 31ರೊಳಗೆ ಪ್ಯಾನ್-ಆಧಾರ್‌ ಜೋಡಣೆ ಮಾಡದಿದ್ದರೆ, ಅಧಿಕ ಟಿಡಿಎಸ್‌ ಕಟಾವು

ತೆರಿಗೆದಾರರು ಮೇ 31 ರೊಳಗೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕಿದೆ. ಇಲ್ಲವಾದಲ್ಲಿ ದುಪ್ಪಟ್ಟು ತೆರಿಗೆ ಕಟಾವು ಮಾಡಿಕೊಳ್ಳಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.;

Update: 2024-05-28 10:36 GMT

ಪ್ಯಾನ್ ನ್ನು ಆಧಾರ್‌ನೊಂದಿಗೆ ಮೇ 31 ರೊಳಗೆ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ತೆರಿಗೆದಾರರರಿಗೆ ಸೂಚಿಸಿದೆ. ಇಲ್ಲದಿದ್ದರೆ, ದುಪ್ಪಟ್ಟು ತೆರಿಗೆ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದೆ. 

ಆದಾಯ ತೆರಿಗೆ ನಿಯಮಗಳ ಪ್ರಕಾರ, ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ನ್ನು ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಜೋಡಣೆ ಮಾಡಬೇಕಿದೆ. ಇಲ್ಲವಾದರೆ, ಅನ್ವಯಿಸುವ ದರಕ್ಕಿಂತ ಎರಡು ಪಟ್ಟು‌ ಟಿಡಿಎಸ್(ಮೂಲದಲ್ಲೇ ತೆರಿಗೆ ಕಟಾವು) ಮಾಡಬೇಕಾಗುತ್ತದೆ. 

ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆಯು ಈ ಸುತ್ತೋಲೆ ಹೊರಡಿಸಿದ್ದು, ತೆರಿಗೆದಾರರು ಮೇ 31 ರೊಳಗೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಿದರೆ, ಟಿಡಿಎಸ್‌ ಕಟಾವಿಗೆ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿತ್ತು. ʻಹೆಚ್ಚು ತೆರಿಗೆ ಕಟಾವು ತಪ್ಪಿಸಲು ಪ್ಯಾನ್ ಅನ್ನು ಮೇ 31, 2024ಕ್ಕೆ ಮುನ್ನ ಆಧಾರ್‌ನೊಂದಿಗೆ ಜೋಡಣೆ ಮಾಡಿ,ʼ ಎಂದು ಇಲಾಖೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು.

ಆಧಾರ್-ಪಾನ್ ಕಾರ್ಡ್ ಜೋಡಣೆ ಪರಿಶೀಲನೆ ಹೇಗೆ?:

1: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ

ಹಂತ 2: 'ತ್ವರಿತ ಲಿಂಕ್‌ಗಳು' ಶೀರ್ಷಿಕೆಯಡಿಯಲ್ಲಿ, 'ಲಿಂಕ್ ಆಧಾರ್ ಸ್ಥಿತಿ' ಮೇಲೆ ಕ್ಲಿಕ್ ಮಾಡಿ 

ಹಂತ 3: 'ಪ್ಯಾನ್ ಸಂಖ್ಯೆ' ಮತ್ತು 'ಆಧಾರ್ ಸಂಖ್ಯೆ' ನಮೂದಿಸಿ ಮತ್ತು 'View Link Aadhaar Status' ಬಟನ್ ಅನ್ನು ಕ್ಲಿಕ್ ಮಾಡಿ.

* ನಿಮ್ಮ ಆಧಾರ್ ಮತ್ತು ಪ್ಯಾನ್ ಜೋಡಣೆ ಆಗಿದ್ದರೆ ಈ ಸಂದೇಶ ಕಾಣಿಸುತ್ತದೆ:

ನಿಮ್ಮ ಪ್ಯಾನ್ AVXXXXXX7M ಅನ್ನು ಈಗಾಗಲೇ ನೀಡಿರುವ ಆಧಾರ್ 22XXXXXXXX74 ಗೆ ಜೋಡನೇ ಮಾಡಲಾಗಿದೆ

* ನಿಮ್ಮ ಆಧಾರ್-ಪ್ಯಾನ್ ಜೋಡಣೆ ಪ್ರಗತಿಯಲ್ಲಿದ್ದರೆ, ʻನಿಮ್ಮ ಆಧಾರ್-ಪ್ಯಾನ್ ಜೋಡಣೆ ವಿನಂತಿಯನ್ನು ಮೌಲ್ಯೀಕರಣಕ್ಕಾಗಿ ಯುಐಡಿಎಐ ಗೆ ಕಳುಹಿಸಲಾಗಿದೆ. ಹೋಮ್ ಪೇಜ್‌ನಲ್ಲಿರುವ 'ಲಿಂಕ್ ಆಧಾರ್ ಸ್ಟೇಟಸ್' ಲಿಂಕ್ ಕ್ಲಿಕ್ ಮಾಡುವ ಮೂಲಕ ನಂತರ ಪರಿಶೀಲಿಸಿ,ʼ ಎಂಬ ಸಂದೇಶ ಕಾಣಿಸುತ್ತದೆ.

* ಆಧಾರ್ ಸಂಖ್ಯೆ ಪ್ಯಾನ್ ಕಾರ್ಡ್‌ನೊಂದಿಗೆ ಜೋಡಣೆ ಆಗದಿದ್ದರೆ, ʻಪ್ಯಾನ್‌ ಆಧಾರ್‌ನೊಂದಿಗೆ ಜೋಡಣೆ ಆಗಿಲ್ಲ. ಆಧಾರ್ ನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲು ದಯವಿಟ್ಟು 'ಲಿಂಕ್ ಆಧಾರ್' ಅನ್ನು ಕ್ಲಿಕ್ ಮಾಡಿʼ ಎಂಬ ಸಂದೇಶ ಬರುತ್ತದೆ.

ಆಧಾರ್ ನ್ನು ಪ್ಯಾನ್‌ ಜೊತೆಗೆ ಜೋಡಣೆ ಮಾಡದಿದ್ದಾಗ, ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ 1,000 ರೂ. ವಿಳಂಬ ಶುಲ್ಕ ಪಾವತಿಸುವ ಮೂಲಕ ಆಧಾರ್-ಪ್ಯಾನ್ ಜೋಡಣೆಗೆ ವಿನಂತಿಸಬಹುದು.

ಮೇ 31 ರೊಳಗೆ ಎಸ್‌ಎಫ್‌ಟಿ ಸಲ್ಲಿಕೆ: ದಂಡ ಪಾವತಿ ತಪ್ಪಿಸಿಕೊಳ್ಳಲು ಮೇ 31 ರೊಳಗೆ ಎಸ್‌ಎಫ್‌ಟಿ ಸಲ್ಲಿಸಬೇಕೆಂದು ಬ್ಯಾಂಕ್‌ಗಳು, ಫಾರೆಕ್ಸ್ ಡೀಲರ್‌ಗಳು ಮತ್ತಿತರರನ್ನು ಐಟಿ ಇಲಾಖೆ ಪ್ರತ್ಯೇಕ ಪೋಸ್ಟ್‌ನಲ್ಲಿ ಕೇಳಿದೆ. 

ʻಎಸ್‌ಎಫ್‌ಟಿ (ಸ್ಪೆಸಿಫಿಕ್‌ ಫೈನಾನ್ಷಿಯಲ್‌ ಟ್ರಾನ್‌ಸ್ಯಾಕ್ಷನ್, ನಿರ್ದಿಷ್ಟ ಹಣಕಾಸು ವಹಿವಾಟುಗಳ ಹೇಳಿಕೆ) ಸಲ್ಲಿಸಲು ಗಡುವು ಮೇ 31, 2024. ನಿಖರವಾಗಿ ಮತ್ತು ಸಮಯಕ್ಕೆ ಸರಿಯಾಗಿ ಸಲ್ಲಿಸುವ ಮೂಲಕ ದಂಡ ತಪ್ಪಿಸಿ,ʼ ಎಂದು ಇಲಾ ಖೆ ಹೇಳಿದೆ.

ಫಾರೆಕ್ಸ್ ಡೀಲರ್‌ಗಳು, ಬ್ಯಾಂಕ್‌ಗಳು, ಸಬ್ ರಿಜಿಸ್ಟ್ರಾರ್, ಎನ್‌ಬಿಎಫ್‌ಸಿ, ಪೋಸ್ಟ್ ಆಫೀಸ್‌ಗಳು, ಬಾಂಡ್‌ಗಳು/ಡಿಬೆಂಚರ್‌ಗಳ ವಿತರಕರು, ಮ್ಯೂಚುಯಲ್ ಫಂಡ್ ಟ್ರಸ್ಟಿಗಳು, ಲಾಭಾಂಶವನ್ನು ಪಾವತಿಸುವ ಅಥವಾ ಷೇರುಗಳನ್ನು ಮರಳಿ ಖರೀದಿಸುವ ಕಂಪನಿಗಳು ಎಸ್‌ಎಫ್‌ಟಿ ಸಲ್ಲಿಸಬೇಕಾಗುತ್ತದೆ. ಈ ಸಂಸ್ಥೆಗಳು ನಿರ್ದಿಷ್ಟ ಹಣಕಾಸಿನ ವಹಿವಾಟುಗಳ ವಿವರಗಳನ್ನು ಅಥವಾ ಆ ವರ್ಷದಲ್ಲಿ ನೋಂದಾಯಿಸಿದ/ದಾಖಲಾದ/ನಿರ್ವಹಿಸಿದ ಖಾತೆಗಳನ್ನು ಒದಗಿಸುವ ಅಗತ್ಯವಿದೆ. 

ಎಸ್‌ಎಫ್‌ಟಿ ರಿಟರ್ನ್‌ ಸಲ್ಲಿಕೆಯಲ್ಲಿ ವಿಳಂಬವಾದರೆ, ದಿನವೊಂದಕ್ಕೆ 1,000 ರೂ.ವರೆಗೆ ದಂಡ ವಿಧಿಸಬಹುದು. ಸಲ್ಲಿಕೆ ಮಾಡದಿರುವುದು ಅಥವಾ ತಪ್ಪಾದ ಸಲ್ಲಿಕೆ ಕೂಡ ದಂಡ ವಿಧಿಸಲು ಕಾರಣವಾಗಬಹುದು. ಆದಾಯ ತೆರಿಗೆ ಇಲಾಖೆಯು ಎಸ್‌ಎಫ್‌ಟಿ ಮೂಲಕ ವ್ಯಕ್ತಿಯೊಬ್ಬರು ಕೈಗೊಳ್ಳುವ ಹೆಚ್ಚು ಮೌಲ್ಯದ ವಹಿವಾಟುಗಳನ್ನು ಜಾಡು ಹಿಡಿಯುತ್ತದೆ.

Tags:    

Similar News