ಕೇಂದ್ರ ಸರ್ಕಾರವು ಲಡಾಖ್ ಪ್ರಾಂತ್ಯದಲ್ಲಿ ಹೊಸ ಐದು ಜಿಲ್ಲೆಗಳನ್ನು ಸೃಷ್ಟಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ನಿರ್ಧಾರವನ್ನು ಪ್ರಕಟಿಸಿ, ಜನರಿಗೆ ಯೋಜನೆಗಳ ಹರಿವು ಸುಗಮಗೊಳಿಸಲು ಮತ್ತು ಕೇಂದ್ರಾಡಳಿತ ಪ್ರದೇಶದ ಪ್ರತಿಯೊಂದು ಮೂಲೆಗೂ ಆಡಳಿತವನ್ನು ತಲುಪಿಸಲು ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ ಎಂದು ಸೋಮವಾರ (ಆಗಸ್ಟ್ 26) ಹೇಳಿದರು.
ಹೊಸ ಜಿಲ್ಲೆಗಳೆಂದರೆ ಝನ್ಸ್ಕಾರ್, ಡ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ತಾಂಗ್. ʻಲಡಾಖಿನ ಜನರಿಗೆ ಹೇರಳ ಅವಕಾಶ ಸೃಷ್ಟಿಸಲು ಮೋದಿ ಸರ್ಕಾರ ಬದ್ಧವಾಗಿದೆ. ಹೊಸ ಜಿಲ್ಲೆಗಳು ಆಡಳಿತವನ್ನು ಬಲಪಡಿಸುವ ಮೂಲಕ ಜನರಿಗೆ ಮೀಸಲಾದ ಪ್ರಯೋಜನಗಳನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುತ್ತವೆ,ʼ ಎಂದು ಶಾ ಹೇಳಿದರು.
ಉತ್ತಮ ಆಡಳಿತ ಮತ್ತು ಸಮೃದ್ಧಿ: ಐದು ಜಿಲ್ಲೆಗಳ ಸೃಷ್ಟಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಇದು ಉತ್ತಮ ಆಡಳಿತ ಮತ್ತು ಸಮೃದ್ಧಿಯತ್ತ ಒಂದು ಹೆಜ್ಜೆ ಎಂದು ಎಕ್ಸ್ ನಲ್ಲಿ ಕರೆದಿದ್ದಾರೆ.
ʻಝನ್ಸ್ಕಾರ್, ಡ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ತಾಂಗ್ ಜಿಲ್ಲೆಗಳಿಗೆ ಈಗ ಹೆಚ್ಚು ಗಮನ ಲಭ್ಯವಾಗಲಿದೆ. ಜನರಿಗೆ ಸೇವೆ ಮತ್ತು ಅವಕಾಶಗಳು ಹತ್ತಿರವಾಗುತ್ತವೆ. ರಾಜ್ಯವು ಉತ್ತಮ ಆಡಳಿತ ಮತ್ತು ಸಮೃ ದ್ಧಿಯತ್ತ ಒಂದು ಹೆಜ್ಜೆಯಾಗಿದೆ,ʼ ಎಂದು ಪ್ರಧಾನಿ ಹೇಳಿದರು.
ಜಮ್ಮು-ಕಾಶ್ಮೀರದಿಂದ ಬೇರ್ಪಟ್ಟಿರುವ ಲಡಾಖ್, ಗೃಹ ಸಚಿವಾಲಯದ ನೇರ ಆಡಳಿತಾತ್ಮಕ ನಿಯಂತ್ರಣದಲ್ಲಿದೆ.