Kolkata rape-murder| ಕಾರ್ಯಪಡೆ ನೇಮಕ, ಸಿಬಿಐನಿಂದ ವಸ್ತುಸ್ಥಿತಿ ವರದಿ ಕೇಳಿದ ಸುಪ್ರೀಂ
ʻಮಹಿಳೆಯರು ಕೆಲಸಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮತ್ತು ಪರಿಸ್ಥಿತಿ ಸುರಕ್ಷಿತವಾಗಿಲ್ಲದಿದ್ದರೆ, ನಾವು ಅವರಿಗೆ ಸಮಾನತೆಯನ್ನು ನಿರಾಕರಿಸಿದಂತೆ ಆಗಲಿದೆ,ʼ ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ; ಎಫ್‌ಐಆರ್ ವಿಳಂಬಕ್ಕೆ ನ್ಯಾಯಾಲಯವು ರಾಜ್ಯ, ಪೊಲೀಸರು ಹಾಗೂ ಆಸ್ಪತ್ರೆಯನ್ನು ದೂಷಿಸಿದೆ.;
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ವೈದ್ಯರ ಮುಷ್ಕರದ ನಡುವೆಯೇ ಸುಪ್ರೀಂ ಕೋರ್ಟ್ ಮಂಗಳವಾರ (ಆಗಸ್ಟ್ 20) ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯ ಸೇರಿದಂತೆ ಹಲವು ಲೋಪದೋಷಗಳ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ, ಕೋಲ್ಕತ್ತಾ ಪೊಲೀಸರು ಮತ್ತು ಆಸ್ಪತ್ರೆಯನ್ನು ತರಾಟೆಗೆ ತೆಗೆದುಕೊಂಡಿತು.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಗುರುವಾರ (ಆ.22) ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ವೈದ್ಯಕೀಯ ವೃತ್ತಿಪರರ ಸುರಕ್ಷತೆ, ಕೆಲಸದ ಪರಿಸ್ಥಿತಿಗಳು ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಶಿಫಾರಸು ಮಾಡಲು ರಾಷ್ಟ್ರೀಯ ಕಾರ್ಯಪಡೆಯನ್ನು ಸಹ ರಚಿಸಿದೆ.
ಸುಪ್ರೀಂ ಕೋರ್ಟಿನ ದಾಖಲೆಯಲ್ಲಿ ʻಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯೊಬ್ಬರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಘಟನೆ ಮತ್ತು ಸಂಬಂಧಿಸಿದ ವಿಷಯʼ ಎಂಬ ಶೀರ್ಷಿಕೆಯಡಿಯ ಈ ಪ್ರಕರಣದಲ್ಲಿನ ಸ್ವಯಂಪ್ರೇರಿತ ವಿಚಾರಣೆ ಮಹತ್ವಪೂರ್ಣ ಬೆಳವಣಿಗೆಯಾಗಿದೆ. ಪ್ರಕರಣದ ವಿಚಾರಣೆ ಈಗಾಗಲೇ ಕಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ನ್ಯಾಯಾಲಯವು ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿದೆ.