Kolkata rape-murder| ಸಂಧಾನ ಯಶಸ್ವಿ: ಪೊಲೀಸ್‌ ಆಯುಕ್ತ, ಆರೋಗ್ಯ ಅಧಿಕಾರಿಗಳ ವರ್ಗಾವಣೆಗೆ ಸಮ್ಮತಿ

ವೈದ್ಯರ ಬಹುತೇಕ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ನಿರ್ಧಾರಗಳು ಕಾರ್ಯರೂಪಕ್ಕೆ ಬಂದ ಬಳಿಕ ಪ್ರತಿಭಟನೆಯನ್ನು ಕೊನೆಗೊಳಿಸುವುದಾಗಿ ಕಿರಿಯ ವೈದ್ಯರು ಹೇಳಿದ್ದಾರೆ.

Update: 2024-09-17 06:29 GMT

ಪ್ರತಿಭಟನಾನಿರತ ವೈದ್ಯರ ಐದು ಬೇಡಿಕೆಗಳನ್ನು ಒಪ್ಪಿಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹತ್ಯೆಯಾದ ವೈದ್ಯೆಯ ಪೋಷಕರಿಗೆ ಹಣದ ಆಮಿಷ ಒಡ್ಡಿದ ಡೆಪ್ಯುಟಿ ಕಮಿಷನರ್ (ಉತ್ತರ ವಿಭಾಗ), ವೈದ್ಯಕೀಯ ಶಿಕ್ಷಣ ನಿರ್ದೇಶಕ (ಡಿಎಂಇ) ಮತ್ತು ಆರೋಗ್ಯ ಸೇವೆಗಳ ನಿರ್ದೇಶಕ(ಡಿಎಚ್‌ಎಸ್)ರನ್ನು ತೆಗೆದುಹಾಕುವುದಾಗಿ ಸಿಎಂ ಘೋಷಿಸಿದ್ದಾರೆ. 

ನೂತನ ಪೊಲೀಸ್ ಆಯುಕ್ತರ ಆಯ್ಕೆ ಇಂದು: ಸೋಮವಾರ (ಸೆಪ್ಟೆಂಬರ್ 16) ಪ್ರತಿಭಟನಾನಿರತ ವೈದ್ಯರೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. 

ʻಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಮುಗಿದ ನಂತರ ಮಂಗಳವಾರ 4 ಗಂಟೆ ಬಳಿಕ ಹೊಸ ಪೊಲೀಸ್ ಆಯುಕ್ತರ ಹೆಸರನ್ನು ಪ್ರಕಟಿಸಲಾಗುತ್ತದೆʼ ಎಂದು ಮುಖ್ಯಮಂತ್ರಿ ತಮ್ಮ ಕಾಳಿಘಾಟ್ ನಿವಾಸದಲ್ಲಿ ಧರಣಿ ನಿರತ ಕಿರಿಯ ವೈದ್ಯರೊಂದಿಗೆ ಸಭೆಯನ್ನು ಮುಗಿಸಿದ ನಂತರ ಪ್ರಕಟಿಸಿದರು. ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಸಹಿ ಮಾಡಿದ ನಡಾವಳಿಗೆ 42 ವೈದ್ಯರ ನಿಯೋಗ ಸಹಿ ಮಾಡಿತು.

ಧರಣಿ ಅಂತ್ಯಗೊಳಿಸಲು ಮನವಿ: ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ-ಹತ್ಯೆ ಬಳಿಕ ರಾಜ್ಯಾದ್ಯಂತ 38 ದಿನಗಳಿಂದ ಧರಣಿ ನಡೆಸುತ್ತಿರುವ ವೈದ್ಯರು ಕೆಲಸ ಸ್ಥಗಿತಗೊಳಿಸಿದ್ದಾರೆ. ಇದರಿಂದ ಆರೋಗ್ಯ ಸೇವೆಗಳು ನಿಂತಿವೆ. ʻವೈದ್ಯರ ಬಹುತೇಕ ಎಲ್ಲ ಬೇಡಿಕೆಗಳನ್ನು ಒಪ್ಪಿದ್ದೇವೆ. ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಕೈಲಾದದ್ದನ್ನು ಮಾಡಿದ್ದೇವೆ. ವೈದ್ಯರು ಕೆಲಸಕ್ಕೆ ಮರಳಬೇಕು ಮತ್ತು ಪ್ರತಿಭಟನೆ ನಡೆಸುತ್ತಿದ್ದ ವೈದ್ಯರ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳುವುದಿಲ್ಲ,ʼ ಎಂದು ಹೇಳಿದರು.

ಸರ್ಕಾರದ ನಿರ್ಧಾರ ʻಆಂದೋಲನದ ಒತ್ತಡ ಮತ್ತು ಜನಸಾಮಾನ್ಯರ ಗೆಲುವುʼ ಎಂದಿರುವ ವೈದ್ಯರು, ʻಪದಗಳು ಕ್ರಿಯೆಯಾಗಿ ಪರಿವರ್ತನೆ ಆಗುವವರೆಗೆʼ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಹೇಳಿದರು.

ʻಸುಪ್ರೀಂ ಕೋರ್ಟ್‌ನಲ್ಲಿರುವ ವಿಚಾರಣೆ ಮತ್ತು ವರ್ಗಾವಣೆಗಳು ದೃಢಪಟ್ಟ ನಂತರ ನಮ್ಮ ಮುಂದಿನ ಹೆಜ್ಜೆಯನ್ನು ನಿರ್ಧರಿಸುತ್ತೇವೆ,ʼ ಎಂದು ಮುಖಂಡರಲ್ಲಿ ಒಬ್ಬರಾದ ಡಾ. ದೇಬಾಶಿಶ್ ಹಲ್ಡರ್ ಹೇಳಿದರು.

ಉಳಿದ ಬೇಡಿಕೆಗಳನ್ನುಈಡೇರಿಸಲಿ: ʻಪೊಲೀಸ್‌ ಆಯುಕ್ತ, ಡಿಸಿ (ಉತ್ತರ), ಡಿಎಚ್‌ಎಸ್ ಮತ್ತು ಡಿಎಂಇಯನ್ನು ತೆಗೆದುಹಾಕಲು ಮುಖ್ಯಮಂತ್ರಿ ಒಪ್ಪಿಕೊಂಡಿದ್ದರೂ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಥವಾ ಡಿಸಿ (ಕೇಂದ್ರ) ಅವರನ್ನು ತೆಗೆದುಹಾಕಲು ಒಪ್ಪಿಗೆ ನೀಡಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರಿಗೆ ಬೆದರಿಕೆ, ಭ್ರಷ್ಟಾಚಾರ ಕುರಿತ ಚರ್ಚೆಗಳು ಅಪೂರ್ಣವಾಗಿಯೇ ಉಳಿದಿವೆ. ಈ ವಿಷಯಗಳ ಬಗ್ಗೆ ನಮಗೆ ಮೌಖಿಕ ಆಶ್ವಾಸನೆ ನೀಡಲಾಗಿದೆ. ಹೀಗಾಗಿ ನಮ್ಮ ಹೋರಾಟ ಇನ್ನೂ ಮುಕ್ತಾಯವಾಗಿಲ್ಲʼ ಎಂದು ಮತ್ತೊಬ್ಬ ಮುಖಂಡ ಡಾ.ಅನಿಕೇತ್ ಮಹತೋ ತಿಳಿಸಿದ್ದಾರೆ. 

ವೈದ್ಯರಿಗೆ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ರೋಗಿಗಳ ಕಲ್ಯಾಣ ಸಮಿತಿಗಳ ಪುನರ್ನಿರ್ಮಾಣಕ್ಕೆ 100 ಕೋಟಿ ರೂ., ಆಸ್ಪತ್ರೆಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಗೃಹ ಕಾರ್ಯದರ್ಶಿ, ಡಿಜಿಪಿ, ಸಿಪಿ ಕೋಲ್ಕತ್ತಾ ಮತ್ತು ಕಿರಿಯ ವೈದ್ಯರ ಪ್ರತಿನಿಧಿಗಳು ಸದಸ್ಯರಾಗಿರುವ ವಿಶೇಷ ಕಾರ್ಯಪಡೆ ರಚನೆ, ರಾಜ್ಯದ ಆಸ್ಪತ್ರೆಗಳು ಮತ್ತು ಕಾಲೇಜುಗಳಾದ್ಯಂತ ವೈದ್ಯಕೀಯ ಮೂಲಸೌಕರ್ಯದಲ್ಲಿ ಪರಿಣಾಮಕಾರಿ ಮತ್ತು ಸ್ಪಂದಿಸುವ ಕುಂದುಕೊರತೆ ಪರಿಹಾರ ಕಾರ್ಯವ್ಯವಸ್ಥೆ ಸ್ಥಾಪನೆಯನ್ನು ಒಪ್ಪಂದ ಒಳಗೊಂಡಿದೆ. 

ʻಬೆದರಿಕೆ ಮತ್ತು ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕುವವರೆಗೆ ಇಂತಹ ಕ್ರಮಗಳು ನಿಷ್ಪರಿಣಾಮಕಾರಿ ಆಗುತ್ತವೆ,ʼ ಎಂದು ವೈದ್ಯರು ಹೇಳಿದ್ದಾರೆ. 

ಮಧ್ಯರಾತ್ರಿ ಸಂಧಾನ ಅಂತ್ಯ: ಸರ್ಕಾರ ಮತ್ತು ಧರಣಿ ನಿರತ ಕಿರಿಯ ವೈದ್ಯರ ನಡುವಿನ ಮಾತುಕತೆ ಸೋಮಾವರ ಸಂಜೆ 6.50 ರ ಸುಮಾರಿಗೆ ಪ್ರಾರಂಭವಾಯಿತು. ಸುಮಾರು ಎರಡು ಗಂಟೆ ಸಭೆ ನಡೆದು, ಮುಖ್ಯ ಕಾರ್ಯದರ್ಶಿ ಸಮ್ಮುಖದಲ್ಲಿ ನಡಾವಳಿ ಅಂತಿಮಗೊಳಿಸುವ ಪ್ರಕ್ರಿಯೆಗೆ ಮೂರು ಗಂಟೆ ತೆಗೆದುಕೊಂಡಿತು. ಧರಣಿ ನಿರತ ವೈದ್ಯರ ಜೊತೆಗಿದ್ದ ಇಬ್ಬರು ಸ್ಟೆನೋಗ್ರಾಫರ್‌ಗಳು ಸಭೆಯ ನಡಾವಳಿಗಳನ್ನು ದಾಖಲಿಸಿಕೊಂಡರು. ವೈದ್ಯರು ರಾಜಿಗೆ ಒಪ್ಪಿಕೊಂಡು, ಸಹಿ ಮಾಡಿದ ಪ್ರತಿಯನ್ನು ಸ್ವೀಕರಿಸಿದರು. 

ಸ್ವಾಸ್ಥ್ಯ ಭವನದ ಎದುರು ಪ್ರತಿಭಟನಾಕಾರರು ಡೋಲು ಬಾರಿಸಿ, ಶಂಖ ಊದಿ ಸಂಭ್ರಮಾಚರಣೆ ನಡೆಸಿದರು.

Tags:    

Similar News