Kolkata rape-murder: ಎಸ್‌ಸಿ ಆದೇಶ ಧಿಕ್ಕರಿಸಿದ ಕಿರಿಯ ವೈದ್ಯರು, ಕೆಲಸ ನಿಲುಗಡೆ ಮುಂದುವರಿಕೆ

ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂ ನಿರ್ದೇಶನ ನೀಡಿದ್ದರೂ, ವೈದ್ಯರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಆರೋಗ್ಯ ಕಾರ್ಯದರ್ಶಿ ಮತ್ತು ಡಿಹೆಚ್‌ಇ ರಾಜೀನಾಮೆಗೆ ಒತ್ತಾಯಿಸಿ ಮೆರವಣಿಗೆಯನ್ನು ಆಯೋಜಿಸಿದ್ದಾರೆ.;

Update: 2024-09-10 06:08 GMT
ಆರ್.‌ ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕಾಯುತ್ತಿರುವ ರೋಗಿಗಳು

ಸುಪ್ರೀಂ ಕೋರ್ಟ್ ಮಂಗಳವಾರ (ಸೆಪ್ಟೆಂಬರ್ 10) ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದ್ದರೂ, ಪಶ್ಚಿಮ ಬಂಗಾಳದ ಪ್ರತಿಭಟನಾನಿರತ ಕಿರಿಯ ವೈದ್ಯರು ಕೆಲಸ ನಿಲುಗಡೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. .

ಆರೋಗ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಶಿಕ್ಷಣ ನಿರ್ದೇಶಕ (ಡಿಎಚ್‌ಇ) ರಾಜೀನಾಮೆಗೆ ಒತ್ತಾಯಿಸಿ, ಮುಷ್ಕರ ನಿರತ ವೈದ್ಯರು ಸಾಲ್ಟ್ ಲೇಕ್‌ನಲ್ಲಿರುವ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಯಾದ ಸ್ವಾಸ್ಥ್ಯ ಭವನಕ್ಕೆ ಮಂಗಳವಾರ ಮಧ್ಯಾಹ್ನ ಮೆರವಣಿಗೆ ನಡೆಸುವುದಾಗಿ ಸೋಮವಾರ ಸಂಜೆ ಹೇಳಿದರು.

ʻನಮ್ಮ ಬೇಡಿಕೆಗಳು ಈಡೇರಿಲ್ಲ ಮತ್ತು ಸಂತ್ರಸ್ತೆಗೆ ನ್ಯಾಯ ದೊರಕಿಲ್ಲ. ಆದ್ದರಿಂದ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಆರೋಗ್ಯ ಕಾರ್ಯದರ್ಶಿ ಮತ್ತು ಡಿಎಚ್‌ಇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ನಾಳೆ ಮಧ್ಯಾಹ್ನ ಸ್ವಾಸ್ಥ್ಯ ಭವನಕ್ಕೆ ಮೆರವಣಿಗೆ ನಡೆಸುತ್ತೇವೆ,ʼ ಎಂದು ವೈದ್ಯರೊಬ್ಬರು ತಿಳಿಸಿದರು. 

9-9-9 ಮೆರವಣಿಗೆ: ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯ ಪುನರಾರಂಭಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ವೈದ್ಯರು ಕೆಲಸ ಆರಂಭಿಸಿದರೆ ಅವರ ವಿರುದ್ಧ ವರ್ಗಾವಣೆ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಭರವಸೆ ನೀಡಿದ ಬಳಿಕ ನ್ಯಾಯಾಲಯ ಈ ನಿರ್ದೇಶನ ನೀಡಿತು. 

ಸೋಮವಾರ ಸಂಜೆ ʻ9-9-9ʼ ಕಾರ್ಯಕ್ರಮದಡಿ ನಗರದ ವಿವಿಧ ಭಾಗಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹೌರಾ ಪಟ್ಟಣದ ಶ್ಯಾಂಬಜಾರ್, ಎಸ್ಪ್ಲನೇಡ್, ನ್ಯೂ ಟೌನ್, ಜಾದವ್‌ಪುರ 8 ಬಿ ಟರ್ಮಿನಸ್‌ನಲ್ಲಿ ಗಡಿಯಾರ 9 ಹೊಡೆದಾಗ ನೂರಾರು ಜನರು ರಾಷ್ಟ್ರಗೀತೆಯನ್ನು ಹಾಡುತ್ತ ಒಂಬತ್ತು ನಿಮಿಷ ಕಾಲ ಜಮಾಯಿಸಿದರು. ವೈದ್ಯೆ ಗೆ ನ್ಯಾಯಕ್ಕಾಗಿ ಒತ್ತಾಯಿಸಿದರು. 

ʻನಾವು ಪ್ರತಿಭಟನೆಗೆ ಸಾಂಕೇತಿಕವಾಗಿ '9-9-9' ಎಂದು ಹೆಸರಿಸಿದ್ದೇವೆ. ಒಂದು ತಿಂಗಳ ಹಿಂದೆ ಆಗಸ್ಟ್ 9 ರಂದು ನಮ್ಮ ಸಹೋದರಿ ಮೇಲೆ ಕ್ರೂರ ದಾಳಿ ನಡೆದಿತ್ತು. ನಾವು ಅವಳಿಗೆ ನ್ಯಾಯಕಾಗಿ ಒತ್ತಾಯಿಸುತ್ತೇವೆ, ʼಎಂದು ಜಾಧವ್‌ಪುರದ ವಿದ್ಯಾರ್ಥಿನಿ ಉಷಾಶಿ ಡೇ ಹೇಳಿದರು. ಪ್ರತಿಭಟನಾಕಾರರು ಒಂಬತ್ತು ನಿಮಿಷ ಕಾಲ ಮೊಬೈಲ್ ಫ್ಲ್ಯಾಷ್ ದೀಪಗಳನ್ನು ಪ್ರದರ್ಶಿಸಿದರು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಗೆ ಒತ್ತಾಯಿಸಿ ಘೋಷಣೆ ಕೂಗಿದರು.

Tags:    

Similar News