Kolkata rape-murder: ರಾಜ್ಯಪಾಲರಿಂದ ತುರ್ತು ಸಭೆ

Update: 2024-08-19 08:44 GMT

ಎಎಪಿ ರಾಜ್ಯಸಭೆ ಸದಸ್ಯ ಮತ್ತು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಬಹಿರಂಗ ಪತ್ರದ ನಂತರ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸಲು ಬಂಗಾಳ ಸಮಾಜದ ವಿವಿಧ ವಿಭಾಗದ ಪ್ರತಿನಿಧಿಗಳ ತುರ್ತು ಸಭೆಯನ್ನು ಕರೆದಿದ್ದಾರೆ.

ರಾಜ್ಯಪಾಲರ ಸಂದೇಶ: ʻಆರ್‌.ಜಿ. ಕರ್ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಸಂಭವಿಸಿದ ದುರಂತ ಘಟನೆ ಬಗ್ಗೆ ದುಃಖ ವ್ಯ ಕ್ತಪಡಿಸಿ ಹರ್ಭಜನ್ ಸಿಂಗ್ ಅವರ ಪತ್ರ ಕುರಿತು ರಾಜ್ಯಪಾಲರು ಬಂಗಾಳ ಸಮಾಜದ ವಿವಿಧ ವಿಭಾಗದ ಪ್ರತಿನಿಧಿಗಳ ತುರ್ತು ಸಭೆಯನ್ನು ಕರೆದಿದ್ದಾರೆ,ʼ ಎಂದು ರಾಜಭವನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ʻದೇಶದೆಲ್ಲೆಡೆಯ ನಾಗರಿಕ ಸಮಾಜವು ಸರ್ಕಾರದ ನಿಷ್ಕ್ರಿಯತೆ ಬಗ್ಗೆ ತಮ್ಮ ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಜ್ಯಪಾಲರು ನಾಗರಿಕ ಸಮಾಜದೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆ, ʼಎಂದು ಹೇಳಿದೆ.

ಹರ್ಭಜನ್ ಅವರ ಪತ್ರ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರನ್ನು ಉದ್ದೇಶಿಸಿ ಬಹಿರಂಗ ಪತ್ರದಲ್ಲಿ ಹರ್ಭಜನ್ ಅವರು ʻನ್ಯಾಯ ವಿಳಂಬದ ಬಗ್ಗೆ ತೀವ್ರ ದುಃಖʼ ವ್ಯಕ್ತಪಡಿಸಿದ್ದರು.

ʻವೈದ್ಯಕೀಯ ಸಂಸ್ಥೆಯಲ್ಲಿ ಇಂತಹ ದುಷ್ಕೃತ್ಯ ಸಂಭವಿಸಿರುವುದು ಆಘಾತಕಾರಿ ಮತ್ತು ಸ್ವೀಕಾರಾರ್ಹವಲ್ಲ. ವೈದ್ಯಕೀಯ ಸಮುದಾಯ ಹಲವು ಸವಾಲುಗಳ ನಡುವೆ ಕಾರ್ಯನಿರ್ವಹಿಸುತ್ತಿದೆ. ಸುರಕ್ಷತೆ ಖಾತ್ರಿಯಿಲ್ಲದೆ ಇರುವಾಗ ಅವರು ಹೇಗೆ ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಾರೆ?,ʼ ಎಂದು ಅವರು ಬರೆದಿದ್ದರು. 

ʻಘಟನೆ ನಡೆದು ಒಂದು ವಾರಕ್ಕಿಂತ ಹೆಚ್ಚು ಸಮಯವಾಗಿದೆ. ಆದರೆ, ಈವರೆಗೆ ಯಾವುದೇ ದೃಢ ಕ್ರಮ ತೆಗೆದುಕೊಂಡಿಲ್ಲ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಸರ್ಕಾರಗಳು ಸಮಗ್ರ ಕ್ರಮ ಜಾರಿಗೊಳಿಸಬೇಕು. ಆಸ್ಪತ್ರೆಗಳಲ್ಲಿ ಭದ್ರತೆ ಬಲಪಡಿಸುವುದು, ಸಂತ್ರಸ್ಥರಿಗೆ ಸಾಕಷ್ಟು ಬೆಂಬಲ ನೀಡುವುದು ಮತ್ತು ಎಲ್ಲಾ ಆರೋಗ್ಯ ವೃತ್ತಿಪರರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಸೃಷ್ಟಿಸಬೇಕಿದೆ,ʼ ಎಂದು ಬರೆದಿದ್ದಾರೆ.

Tags:    

Similar News