Kolkata rape-murder| ಕಿರಿಯ ವೈದ್ಯರ ಮುಷ್ಕರ ಭಾಗಶಃ ಅಂತ್ಯ: ಸೇವೆಗಳು ಪುನಾರಂಭ

ಕಿರಿಯ ವೈದ್ಯರು ತುರ್ತು ಮತ್ತು ಅಗತ್ಯ ಸೇವೆ ಆರಂಭಿಸುವುದಾಗಿ ಹೇಳಿದ್ದಾರೆ. ಆದರೆ, ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಿದ ನಂತರವಷ್ಟೇ ಒಪಿಡಿ ಕರ್ತವ್ಯ ಪುನಾರಂಭಿಸುವುದಾಗಿ ತಿಳಿಸಿದ್ದಾರೆ.;

Update: 2024-09-20 08:34 GMT

ಪಶ್ಚಿಮ ಬಂಗಾಳದಲ್ಲಿ ಕಳೆದ 41 ದಿನಗಳಿಂದ ಸಹೋದ್ಯೋಗಿಯ ಅತ್ಯಾಚಾರ ಮತ್ತು ಹತ್ಯೆ ವಿರುದ್ಧ ಆಂದೋಲನ ನಡೆಸುತ್ತಿರುವ ವೈದ್ಯರು, ಶನಿವಾರದಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. 

ಸಿಬಿಐ ಕಚೇರಿಗೆ ನಡಿಗೆ: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹತ್ಯೆಗೀಡಾದ ವೈದ್ಯೆಯ ಸ್ಮರಣಾರ್ಥ ಅಭಯ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸುವುದಾಗಿ ವೈದ್ಯರು ಘೋಷಿಸಿದರು. ಸಂತ್ರಸ್ತೆಗೆ ನ್ಯಾಯ ನೀಡಬೇಕು ಮತ್ತು ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿ, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸಾಲ್ಟ್ ಲೇಕ್‌ನಲ್ಲಿರುವ ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ ಸಿಬಿಐ ಕಚೇರಿಗೆ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ. 

ʻರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಸರ್ಕಾರ ನಮ್ಮ ಕೆಲವು ಬೇಡಿಕೆಗಳಿಗೆ ಸಮ್ಮತಿಸಿರುವುದರಿಂದ, ಶನಿವಾರದಿಂದ ಭಾಗಶಃ ತುರ್ತು ಮತ್ತು ಅಗತ್ಯ ಸೇವೆಗಳಿಗೆ ಮರುಸೇರ್ಪಡೆಯಾಗುತ್ತೇವೆ,ʼ ಎಂದು ಗುರುವಾರ ಹೇಳಿದರು. 

ಒಪಿಡಿ ಕರ್ತವ್ಯ ಇಲ್ಲ: ವೈದ್ಯರು ಹೊರರೋಗಿ ವಿಭಾಗ(ಒಪಿಡಿ)ದಲ್ಲಿ ಕೆಲಸ ಮಾಡುವುದಿಲ್ಲ. ತುರ್ತು ಮತ್ತು ಅಗತ್ಯ ಸೇವೆಗಳಲ್ಲಿ ಭಾಗಶಃ ಕೆಲಸ ಮಾಡುತ್ತಾರೆ. ʻಪಶ್ಚಿಮ ಬಂಗಾಳ ಸರ್ಕಾರ ನೀಡಿದ ಎಲ್ಲ ಭರವಸೆಗಳನ್ನು ಜಾರಿಗೆ ತರಲು ನಾವು ಒಂದು ವಾರ ಕಾಯುತ್ತೇವೆ. ಒಂದುವೇಳೆ ಈಡೇರದಿದ್ದರೆ, ನಾವು ಕೆಲಸ ಸ್ಥಗಿತಗೊಳಿಸುತ್ತೇವೆ,ʼ ಎಂದು ಹೇಳಿದ್ದಾರೆ. 

ವೈದ್ಯರ ಭದ್ರತೆಗೆ ನಿರ್ದೇಶನ: ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ಆರೋಗ್ಯ ವೃತ್ತಿಪರರಿಗೆ ಸುರಕ್ಷತೆ, ಭದ್ರತೆ ಮತ್ತು ಅನುಕೂಲಕರ ವಾತಾವರಣದ ಕುರಿತು ನಿರ್ದೇಶನಗಳ ಪಟ್ಟಿಯನ್ನು ಹೊರಡಿಸಿದ್ದಾರೆ. 

ʻಇಂದು ಹೊರಡಿಸಿದ ನಿರ್ದೇಶನಗಳು ಕ್ಯಾಂಪಸ್‌ಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯ ಖಾತ್ರಿ ಕುರಿತ ನಮ್ಮ ಬೇಡಿಕೆಗಳ ಭಾಗಶಃ ಅಂಗೀಕಾರ. ಕೋಲ್ಕತ್ತಾ ಪೊಲೀಸ್ ಕಮಿಷನರ್ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ತೆಗೆದುಹಾಕಿರುವುದು ಸೀಮಿತ ಗೆಲುವು ಎಂದು ನಾವು ಪರಿಗಣಿಸುತ್ತೇವೆ. ಆರ್‌ಜಿ ಕರ್ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ತಲಾ ಪಿಎಸ್ ಒಸಿ ಬಂಧನ ಚಳವಳಿಯ ವಿಜಯ. ಹೀಗಾಗಿ, ನಾವು ಅಗತ್ಯ ಸೇವೆಗಳಿಗೆ ಹಿಂತಿರುಗುತ್ತೇವೆ,ʼ ಎಂದು ಆಂದೋಲನದಲ್ಲಿ ಪಾಲ್ಗೊಂಡಿದ್ದ ಡಾ.ಅನಿಕೇತ್ ಮಹತೋ ಹೇಳಿದರು. 

ʻಸರ್ಕಾರದ ನಿರ್ದೇಶನದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿರುವ ಬೆದರಿಕೆ ಸಂಸ್ಕೃತಿ ಸಮಸ್ಯೆಗೆ ಪರಿಹಾರ, ಕ್ಯಾಂಪಸ್‌ಗಳಲ್ಲಿ ಪ್ರಜಾಸತ್ತಾತ್ಮಕ ವಾತಾವರಣದ ಪುನಃಸ್ಥಾಪನೆ ಹಾಗೂ ಕಿರಿಯ ವೈದ್ಯರಲ್ಲಿ ಭಯದ ನಿವಾರಣೆಗೆ ಯಾವುದೇ ಕ್ರಮದ ಉಲ್ಲೇಖ ಇಲ್ಲ.ಆರ್‌ಜಿ ಕರ್ ಘಟನೆ ಪುನರಾವರ್ತನೆ ಆಗುವುದಿಲ್ಲ ಎನ್ನುವ ಖಾತ್ರಿಯಿಲ್ಲ,ʼ ಎಂದು ಮತ್ತೊಬ್ಬ ಕಿರಿಯ ವೈದ್ಯ ದೇಬಾಶಿಶ್ ಹಲ್ಡರ್ ಹೇಳಿದರು. 

ಸರ್ಕಾರದಿಂದ 10 ಅಂಶಗಳ ನಿರ್ದೇಶನ: ʻಅಭಯಳಿಗೆ ನ್ಯಾಯ ಸಿಗುವವರೆಗೆʼ ಬೀದಿಗಳಲ್ಲಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮುಂದುವರಿಸುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕಿರಿಯ ವೈದ್ಯರು ಬುಧವಾರ ರಾತ್ರಿ ಸರ್ಕಾರದೊಂದಿಗಿನ ಸಭೆಯ ಪ್ರಮುಖ ಅಂಶಗಳ ಕರಡನ್ನು ಪಂತ್‌ ಅವರಿಗೆ ಸಲ್ಲಿಸಿದ ಕೆಲವೇ ಗಂಟೆಗಳ ನಂತರ ಮುಖ್ಯ ಕಾರ್ಯದರ್ಶಿಯಿಂದ ನಿರ್ದೇಶನಗಳು ಬಂದಿವೆ. 

ಪಂತ್ ಅವರು ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಎನ್‌.ಎಸ್. ನಿಗಮ್‌ ಅವರಿಗೆ ಕಳಿಸಿದ ಎರಡು ಪುಟಗಳ ಸಂವಹನದಲ್ಲಿ 10 ನಿರ್ದೇಶನಗಳನ್ನು ನೀಡಿದ್ದಾರೆ. ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಭದ್ರತಾ ಲೆಕ್ಕಪರಿಶೋಧನೆಗೆ ಮಾಜಿ ಡಿಜಿಪಿ ಸುರಜಿತ್ ಕರ್ ಪುರ್ಕಾಯಸ್ಥ ಅವರ ನೇಮಕ, ಆಂತರಿಕ ದೂರು ಸಮಿತಿ, ಕ್ಯಾಂಪಸ್‌ಗಳಲ್ಲಿ ಭದ್ರತಾ ಸಿಬ್ಬಂದಿಯ ನಿಯೋಜನೆ ವಿವರಗಳು, ಆರೋಗ್ಯ ಸೌಲಭ್ಯಗಳಲ್ಲಿ ಕೇಂದ್ರೀಕೃತ ಸಹಾಯವಾಣಿ ಸಂಖ್ಯೆ, ಪ್ಯಾನಿಕ್ ಕಾಲ್ ಬಟನ್ ಅಲಾರ್ಮ್ ವ್ಯವಸ್ಥೆ ಅಳವಡಿಕೆ ಇತ್ಯಾದಿಯನ್ನು ನಿರ್ದೇಶನ ಒಳಗೊಂಡಿದೆ. 

ರಾಜ್ಯದ ಕ್ರಮ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾ ಪೊಲೀಸ್ ಮುಖ್ಯಸ್ಥ ವಿನೀತ್ ಗೋಯಲ್ ಅವರನ್ನು ವರ್ಗಾಯಿಸಿ, ಅವರ ಸ್ಥಾನಕ್ಕೆ ಮನೋಜ್ ಕುಮಾರ್ ವರ್ಮಾ ಅವರನ್ನು ನೇಮಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕರನ್ನು ತೆಗೆದುಹಾಕಿದ್ದಾರೆ. ಪಶ್ಚಿಮ ಬಂಗಾಳ ವೈದ್ಯಕೀಯ ಮಂಡಳಿಯು ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ನೋಂದಣಿಯನ್ನು ರದ್ದುಗೊಳಿಸಿದೆ.

Tags:    

Similar News