Kolkata rape-murder: 24 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ ಆರಂಭ
ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ, ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ್ದ ವೈದ್ಯರ 24 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರವು ಶನಿವಾರ (ಆಗಸ್ಟ್ 17) ಬೆಳಗ್ಗೆ 6 ಗಂಟೆಯಿಂದ ಪ್ರಾರಂಭವಾಯಿತು.
ಮುಷ್ಕರ ಹೊರರೋಗಿ ಸೇವೆಗಳು (ಒಪಿಡಿ), ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ತುರ್ತು ಆರೈಕೆ ಮತ್ತು ನಿರ್ಣಾಯಕ ಚಿಕಿತ್ಸೆಗಳು ಕಾರ್ಯನಿರ್ವಹಿಸುತ್ತವೆ.
ಐಎಂಎ ಬೇಡಿಕೆಗಳೇನು?:
* ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿಯಾದ ವ್ಯಕ್ತಿಗಳ ಗುರುತಿಸುವಿಕೆ ಹಾಗೂ ಸಮಗ್ರ ಮತ್ತು ಸಮಯೋಚಿತ ತನಿಖೆ
* ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಮತ್ತು ಗೌರವಯುತ ಪರಿಹಾರ.
* ಆಗಸ್ಟ್ 15 ರ ಮುಂಜಾನೆ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯ ನಡೆಸಿದವರ ಮೇಲೆ ಕ್ರಮ.
* 36 ಗಂಟೆಗಳ ಶಿಫ್ಟ್ ಮತ್ತು ವಿಶ್ರಾಂತಿಗೆ ಸುರಕ್ಷಿತ ಸ್ಥಳ ಸೇರಿದಂತೆ ವೈದ್ಯರ ಕೆಲಸ ಮತ್ತು ಜೀವನ ಪರಿಸ್ಥಿತಿಗಳ ಕೂಲಂಕಷ ಪರೀಕ್ಷೆ.
̇* ಕೆಲಸದ ಸ್ಥಳಗಳಲ್ಲಿ ವೈದ್ಯಕೀಯ ವೃತ್ತಿಪರರ ವಿರುದ್ಧ ಹಿಂಸಾಚಾರ ತಡೆಗಟ್ಟಲು ಕೇಂದ್ರ ಕಾನೂನು.
* ಆಸ್ಪತ್ರೆಗಳಲ್ಲಿ ವಿಮಾನ ನಿಲ್ದಾಣಕ್ಕಿಂತ ಕಡಿಮೆಯಿಲ್ಲದ ಭದ್ರತಾ ಪ್ರೋಟೋಕಾಲ್‌ಗಳು. ಸಿಸಿಟಿವಿಗಳು ಮತ್ತು ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆಯೊಂದಿಗೆ ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳೆಂದು ಘೋಷಣೆ.
ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ಮತ್ತು ಆಲ್ ಇಂಡಿಯಾ ಮೆಡಿಕಲ್ ಸ್ಟೂಡೆಂಟ್ಸ್ ಅಸೋಸಿ ಯೇಷನ್ (ಎಐಎಂಎಸ್ಎ) ಮತ್ತಿತರ ವೈದ್ಯಕೀಯ ವಿದ್ಯಾರ್ಥಿ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಂಡಿವೆ. ನ್ಯಾಯ ನೀಡಬೇಕೆಂದು ಮತ್ತು ಭವಿಷ್ಯದಲ್ಲಿ ಇಂತಹ ಅಪರಾಧ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ, ದೇಶಾದ್ಯಂತ ವಿವಿಧ ನಗರಗಳಲ್ಲಿ ಕಿರಿಯ ವೈದ್ಯರಿಂದ ಪ್ರತಿಭಟನೆ ಮತ್ತು ಕ್ಯಾಂಡಲ್ ಮೆರವಣಿಗೆಗಳು ನಡೆದಿವೆ.
ಕಲ್ಕತ್ತಾ ಹೈಕೋರ್ಟ್‌ನ ತೀರ್ಪಿನ ನಂತರ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಕನಿಷ್ಠ 30 ಶಂಕಿತರನ್ನು ಗುರುತಿಸಲಾಗಿದ್ದು, ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ಶುಕ್ರವಾರ (ಆಗಸ್ಟ್ 16) ಹೇಳಿದ್ದಾರೆ.