Kolkata rape-murder: ಟಿಎಂಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ
ಪಶ್ಚಿಮ ಬಂಗಾಳದಲ್ಲಿ 48,600 ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳ ವಿಚಾರಣೆ ಬಾಕಿಯಿದ್ದರೂ, ಉಳಿದ 11 ತ್ವರಿತ ವಿಶೇಷ ನ್ಯಾಯಾಲಯಗಳನ್ನು ಪ್ರಾರಂಭಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದಲ್ಲಿ ಅತ್ಯಾಚಾರಗಳನ್ನು ಕುರಿತು ಬರೆದ ಪತ್ರಕ್ಕೆ ಕೇಂದ್ರ ಖಾರವಾಗಿ ಪ್ರತಿಕ್ರಿಯಿಸಿದೆ. ಟಿಎಂಸಿ ಸರ್ಕಾರವು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ರಕ್ಷಣೆಗೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.
ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಂತರ ಮಮತಾ ಬ್ಯಾನರ್ಜಿ ಅವರು ಮೋದಿ ಅವರಿಗೆ ಪತ್ರ ಬರೆದಿದ್ದರು . ದೇಶದಲ್ಲಿ ಪ್ರತಿದಿನ 90 ಅತ್ಯಾಚಾರಗಳು ನಡೆಯುತ್ತಿವೆ ಮತ್ತು ಇಂಥ ಘೋರ ಅಪರಾಧದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡುವ ಕೇಂದ್ರ ಕಾನೂನು ತರಬೇಕೆಂದು ಒತ್ತಾಯಿಸಿದ್ದರು.
ಕೇಂದ್ರದ ಪ್ರತಿಕ್ರಿಯೆ ಏನು?: ಆಗಸ್ಟ್ 25 ರಂದು ಸಿಎಂಗೆ ಪತ್ರ ಬರೆದಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ಪಶ್ಚಿಮ ಬಂಗಾಳದಲ್ಲಿ 48,600 ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳ ವಿಚಾರಣೆ ಬಾಕಿಯಿದ್ದರೂ, ಉಳಿದ 11 ತ್ವರಿತ ವಿಶೇಷ ನ್ಯಾಯಾಲಯಗಳನ್ನು ಪ್ರಾರಂಭಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಸಹಾಯವಾಣಿ, ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಯಂಥ ಪ್ರಮುಖ ತುರ್ತು ಸಹಾಯವಾಣಿಗಳನ್ನು ಕಾರ್ಯಗತಗೊಳಿಸುವಲ್ಲಿ ಪಶ್ಚಿಮ ಬಂಗಾಳ ಸರ್ಕಾರ ವಿಫಲವಾಗಿದೆ. ಸಂತ್ರಸ್ತರಿಗೆ ತಕ್ಷಣದ ನೆರವು ನೀಡಲು ಈ ಸೇವೆಗಳು ಅತ್ಯಗತ್ಯ. ಕೇಂದ್ರ ಸರ್ಕಾರದ ಹಲವು ವಿಜ್ಞಾಪನೆಗಳ ಹೊರತಾಗಿಯೂ, ರಾಜ್ಯ ಅವುಗಳನ್ನು ಇನ್ನೂ ಸಂಯೋಜಿಸಿಲ್ಲ. ಈ ಕೊರತೆಯಿಂದ ಪಶ್ಚಿಮ ಬಂಗಾಳದ ಮಹಿಳೆಯರು ಮತ್ತು ಮಕ್ಕಳು ಸಂಕಷ್ಟದ ಸಮಯದಲ್ಲಿ ನಿರ್ಣಾಯಕ ಬೆಂಬಲದಿಂದ ವಂಚಿತಗೊಳ್ಳುತ್ತಾರೆ ಎಂದು ಸಚಿವೆ ಹೇಳಿದ್ದಾರೆ.
ಕೇಂದ್ರ ಪ್ರಾಯೋಜಿತ ಯೋಜನೆಯಡಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ(ಎಫ್‌ಟಿಎಸ್‌ಸಿ)ಗಳನ್ನು ಕಾರ್ಯಗತಗೊಳಿಸುವಲ್ಲಿ ರಾಜ್ಯ ವಿಫಲವಾಗಿದೆ. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಕಾನೂನು ಚೌಕಟ್ಟು ಮತ್ತು ನ್ಯಾಯಾಂಗ ಪ್ರಕ್ರಿಯೆಗಳನ್ನು ಜಾರಿಗೊಳಿಸುವ ತುರ್ತು ಅಗತ್ಯವಿದೆ ಎಂದು ಸಚಿವೆ ಹೇಳಿದ್ದಾರೆ.
123 ತ್ವರಿತ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿಲ್ಲ: ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ 123 ಎಫ್‌ಟಿಎಸ್‌ಸಿಗಳನ್ನು ಮಂಜೂರು ಮಾಡಿದೆ; ಇದರಲ್ಲಿ 20 ವಿಶೇಷ ಪೋಕ್ಸೊ ನ್ಯಾಯಾಲಯ ಮತ್ತು 103 ಅತ್ಯಾಚಾರ- ಪೋಕ್ಸೊ ಪ್ರಕರಣಗಳ ಸಂಯೋಜಿತ ನ್ಯಾಯಾಲಯಗಳು ಸೇರಿವೆ. ಜೂನ್ 2023 ರ ಮಧ್ಯದವರೆಗೆ ಈ ಯಾವುದೇ ನ್ಯಾಯಾಲಯ ಕಾರ್ಯನಿರ್ವಹಿಸಿಲ್ಲ ಎಂದು ಸಚಿವರು ಹೇಳಿದರು.
ಜೂನ್ 2023ರೊಳಗೆ 7 ಎಫ್‌ಟಿಎಸ್ ಸಿಗಳನ್ನು ಆರಂಭಿಸಲಾಗುತ್ತದೆ ಎಂದಿದ್ದರೂ, ಜೂನ್ 30, 2024 ರ ವೇಳೆಗೆ ಆರು ವಿಶೇಷ ಪೋಕ್ಸೊ ನ್ಯಾಯಾಲಯ ಮಾತ್ರ ಕಾರ್ಯಗತಗೊಂಡಿದೆ. ಉಳಿದ 11 ಎಫ್‌ಟಿಎಸ್‌ಸಿ ಸಕ್ರಿಯಗೊಂಡಿಲ್ಲ ಎಂದು ಹೇಳಿದರು.
ಭಾರತೀಯ ನ್ಯಾಯ ಸಂಹಿತೆಯ ಮಹತ್ವ: ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳನ್ನು ಎದುರಿಸಲು ಜುಲೈ 2024 ರಲ್ಲಿ ದೇಶಾದ್ಯಂತ ಪರಿಚಯಿಸಿದ ಭಾರತೀಯ ನ್ಯಾಯ ಸಂಹಿತೆಯು ಅಪ್ರಾಪ್ತ ವಯಸ್ಕರ ವಿರುದ್ಧ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಅಪರಾಧಗಳಿಗೆ ಕಠಿಣ ಜೈಲು ಶಿಕ್ಷೆ ವಿಧಿಸುತ್ತದೆ ಎಂದು ಸಚಿವೆ ಹೇಳಿದರು.
ʻಲಿಂಗ ಸಮಾನತೆಯನ್ನು ಉತ್ತೇಜಿಸುವ ಮತ್ತು ಮಹಿಳೆಯರು ಸಶಕ್ತರಾಗಲು ಸುರಕ್ಷಿತ ಹಾಗೂ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬೇಕಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅಪರಾಧಗಳನ್ನು ಅಸ್ತಿತ್ವದಲ್ಲಿರುವ ಶಾಸಕಾಂಗ ಚೌಕಟ್ಟು ಬಳಸಿಕೊಂಡು, ನಿರ್ವಹಿಸಬೇಕಿದೆʼ ಎಂದು ಸಚಿವೆ ಹೇಳಿದ್ದಾರೆ.