Kolkata rape-murder| ಟಿಎಂಸಿ ಶಾಸಕ, ವಿಧಿವಿಜ್ಞಾನ ವಿಭಾಗದ ವೈದ್ಯರ ವಿಚಾರಣೆ

Update: 2024-09-23 12:20 GMT

ಕೋಲ್ಕತ್ತಾ: ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಶಾಸಕ ನಿರ್ಮಲ್ ಘೋಷ್ ಅವರನ್ನು ಸೋಮವಾರ ಸಿಬಿಐ ವಿಚಾರಣೆ ನಡೆಸಿದೆ. ಜೊತೆಗೆ, ಆಸ್ಪತ್ರೆಯ ಫೋರೆನ್ಸಿಕ್ ವಿಭಾಗದ ಪ್ರೊ. ಅಪೂರ್ಬ ಬಿಸ್ವಾಸ್ ಅವರನ್ನು ಪ್ರಶ್ನಿಸಿದೆ. 

ಟಿಎಂಸಿಯ ಪಾನಿಹಟಿ ಶಾಸಕ ಘೋಷ್ ಅವರು ಬೆಳಗ್ಗೆ 10.30ರ ಸುಮಾರಿಗೆ ಸಾಲ್ಟ್ ಲೇಕ್‌ನಲ್ಲಿರುವ ಸಿಬಿಐನ ಸಿಜಿಒ ಕಾಂಪ್ಲೆಕ್ಸ್ ಕಚೇರಿ ತಲುಪಿದರು. ʻನಾವು ಅವರನ್ನು ವಿಚಾರಣೆಗೆ ಕರೆದಿದ್ದೆವು. ಅವರು ಆಸ್ಪತ್ರೆ, ಸ್ಮಶಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದರು,ʼ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಡಾ.ಅಪೂರ್ಬ ಘೋಷ್ ಅವರು ಮೃತಳ ಅಂತಿಮ ವಿಧಿವಿಧಾನಗಳನ್ನು ತರಾತುರಿಯಲ್ಲಿ ಏರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಬಿಐ ಶಂಕಿಸಿದೆ.

ʻನಾವು ಕರೆ ವಿವರಗಳನ್ನು ಸಂಗ್ರಹಿಸಿದ್ದು, ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಮತ್ತು ಶಾಸಕನ ನಡುವೆ ಆಗಸ್ಟ್ 9 ರಂದು ಮಾತುಕತೆ ನಡೆದಿದೆ. ಅವರ ಸಂಭಾಷಣೆಯ ವಿವರ ಪಡೆದುಕೊಳ್ಳಬೇಕಿದೆ,ʼ ಎಂದು ಹೇಳಿದರು.

ಆಗಸ್ಟ್ 9 ರಂದು ಆರ್‌.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಪ್ರಕರಣದಲ್ಲಿ ಡಾ. ಘೋಷ್‌ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

Tags:    

Similar News