Kolkata rape-murder| ಆರ್.‌ಜಿ. ಕರ್ ಆಸ್ಪತ್ರೆ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಬಂಧನ

Update: 2024-09-03 08:26 GMT
ವೈದ್ಯೆ ಅತ್ಯಾಚಾರ- ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ಘೋಷ್ (ಎಡ) ಅವರನ್ನು ರಜೆ ಮೇಲೆ ತೆರಳುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು.

ಆರ್‌.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರ ಮೂವರನ್ನು ಸಿಬಿಐ ಸೋಮವಾರ ಬಂಧಿಸಿದೆ. 

ಘೋಷ್ ಅವರ ಭದ್ರತಾ ಸಿಬ್ಬಂದಿ ಅಫ್ಸರ್ ಅಲಿ (44), ಆಸ್ಪತ್ರೆಯ ಮಾರಾಟ ಪ್ರತಿನಿಧಿಗಳಾದ ಬಿಪ್ಲವ್ ಸಿಂಘಾ (52) ಮತ್ತು ಸುಮನ್ ಹಜಾರಾ (46) ಬಂಧಿತರು. 

ಘೋಷ್ ಅವರ ವಿಚಾರಣೆ 15 ನೇ ದಿನವಾದ ಸೋಮವಾರವೂ ನಡೆಯಿತು. ಏಜೆನ್ಸಿಯ ಸಾಲ್ಟ್ ಲೇಕ್ ಕಚೇರಿಯಿಂದ ಅವರನ್ನು ಕೋಲ್ಕತ್ತಾ ದ ಸಿಬಿಐನ ಭ್ರಷ್ಟಾಚಾರ ವಿರೋಧ ವಿಭಾಗ ಇರುವ ನಿಜಾಮ್ ಪ್ಯಾಲೇಸ್ ಕಚೇರಿಗೆ ಕರೆದೊಯ್ದು, ಬಂಧಿಸಲಾಯಿತು. 

ಎರಡನೇ ಪ್ರಮುಖ ಬಂಧನ: ವೈದ್ಯೆ ಅತ್ಯಾಚಾರ- ಹತ್ಯೆ ಬಳಿಕ ನಡೆದ ಎರಡನೇ ಪ್ರಮುಖ ಬಂಧನ ಇದಾಗಿದೆ. ಇದಕ್ಕೂ ಮುನ್ನ ಕೋಲ್ಕತ್ತಾ ಪೊಲೀಸರು ನಾಗರಿಕ ಸ್ವಯಂಸೇವಕ ಸಂಜೋಯ್ ರಾಯ್ ಅವರನ್ನು ಬಂಧಿಸಿ, ಸಿಬಿಐಗೆ ಹಸ್ತಾಂತರಿಸಿದ್ದರು. 

ಕಲ್ಕತ್ತಾ ಹೈಕೋರ್ಟ್ ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅಕ್ರಮಗಳ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲು ಆಗಸ್ಟ್ 23 ರಂದು ಆದೇಶಿಸಿತು. ಮಾಜಿ ಉಪ ಅಧೀಕ್ಷಕ ಡಾ. ಅಖ್ತರ್ ಅಲಿ ಅವರು ಘೋಷ್‌ ಅವರ ಅಧಿಕಾರಾವಧಿಯಲ್ಲಿ ನಡೆದ ಹಣಕಾಸಿನ ದುರುಪಯೋಗ ಕುರಿತು ಜಾರಿ ನಿರ್ದೇಶನಾಲಯ(ಇಡಿ)ದ ತನಿಖೆಗೆ ಮನವಿ ಸಲ್ಲಿಸಿದ್ದರು. 

2 ವರ್ಷ ಪ್ರಾಂಶುಪಾಲ: ಘೋಷ್ ಅವರು ಫೆಬ್ರವರಿ 2021 ರಿಂದ ಸೆಪ್ಟೆಂಬರ್ 2023 ರವರೆಗೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಅಕ್ಟೋಬರ್‌ನಲ್ಲಿ ಅವರನ್ನು ವರ್ಗಾಯಿಸಲಾಯಿತಾದರೂ, ಒಂದು ತಿಂಗಳೊಳಗೆ ಆ ಸ್ಥಾನಕ್ಕೆ ಮರಳಿದರು. 

ಘೋಷ್ ಅವರ ವಿರುದ್ಧ ಒಂದು ವರ್ಷದ ಹಿಂದೆ ರಾಜ್ಯ ವಿಚಕ್ಷಣ ಆಯೋಗ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಲಾಗಿತ್ತು.ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಬದಲಾಗಿ, ತಮ್ಮನ್ನು ಸಂಸ್ಥೆಯಿಂದ ವರ್ಗಾವಣೆ ಮಾಡಲಾಯಿತು ಎಂದು ಅಲಿ ದೂರಿದ್ದರು. 

ಹೈಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಶವಗಳ ಅಕ್ರಮ ಮಾರಾಟ, ಬಯೋಮೆಡಿಕಲ್ ತ್ಯಾಜ್ಯದ ಸಾಗಣೆ, ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಪೂರೈಕೆದಾರರಿಂದ ಕಮಿಷನ್‌ ಪಡೆದಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 5 ರಿಂದ 8 ಲಕ್ಷ ರೂ. ಪಾವತಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ಅಲಿ ಆರೋಪಿಸಿದ್ದಾರೆ. ಮಮತಾ ಬ್ಯಾನರ್ಜಿ ಆಡಳಿತವು ಅಮಾನತುಗೊಳಿಸದೆ, ಘೋಷ್ ಅವರನ್ನು ರಕ್ಷಿಸುತ್ತಿದೆ ಎಂದು ಧರಣಿ ನಿರತ ವೈದ್ಯರು ಆರೋಪಿಸಿದ್ದಾರೆ. 

ಅಂತ್ಯದ ಆರಂಭ: ಪಶ್ಚಿಮ ಬಂಗಾಳದ ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್ ಅವರು, ʻಘೋಷ್ ಬಂಧನವನ್ನು ಅಂತ್ಯದ ಆರಂಭ,ʼ ಎಂದು ಬಣ್ಣಿಸಿದ್ದಾರೆ. ಬೋಸ್ ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕೆಲವು ದಿನಗಳ ನಂತರ ಘೋಷ್‌ ಅವರ ಬಂಧನ ಸಂಭವಿಸಿದೆ. 

Tags:    

Similar News