Kolkata rape-murder| ಸಾಕ್ಷ್ಯಗಳನ್ನು ತಿರುಚಲಾಗಿದೆ- ಹಿರಿಯ ವೈದ್ಯರ ಆರೋಪ

Update: 2024-09-16 13:24 GMT

ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂದು ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಸೋಮವಾರ (ಸೆಪ್ಟೆಂಬರ್ 16) ಆರೋಪಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಸಭೆಯ ನೇರ ಪ್ರಸಾರದ ಬೇಡಿಕೆಯನ್ನು ಪುನರುಚ್ಚರಿಸಿದರು. 

ʻನಾವು ಇಂತಹ ಘೋರ ಅಪರಾಧವನ್ನು ಖಂಡಿಸುತ್ತೇವೆ. ಈ ಅಪರಾಧಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಕೂಟ ಕಾರಣ. ಸಾಕ್ಷ್ಯಗಳನ್ನು ಹಾಳುಮಾಡಲಾಗಿದೆ,ʼ ಎಂದು ಆರೋಪಿಸಿದರು. 

ಕಿರಿಯ ವೈದ್ಯರಿಗೆ ಇಮೇಲ್ ಮೂಲಕ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ಸೋಮವಾರ ಸಂಜೆ 5 ಗಂಟೆಗೆ ಕಾಳಿಘಾಟ್‌ನಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಮಾತುಕತೆಗೆ ಆಗಮಿಸುವಂತೆ ತಿಳಿಸಿದ್ದಾರೆ. 

‘ನಾಟಕ’ ಹಣೆಪಟ್ಟಿ: ಪಶ್ಚಿಮ ಬಂಗಾಳದ ಹಿರಿಯ ಸಚಿವ ಸಿದ್ದಿಕುಲ್ಲಾ ಚೌಧರಿ, ಕಿರಿಯ ವೈದ್ಯರ ಕೆಲಸ ನಿಲುಗಡೆ ಧರಣಿಯನ್ನು ನಾಟಕ ಮತ್ತು ರಾಜಕೀಯ. ರಾಜ್ಯದಲ್ಲಿ ಟಿಎಂಸಿ ಸರ್ಕಾರದ ಹೆಸರು ಕೆಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ. 

ʻಕಿರಿಯ ವೈದ್ಯರು ಈ ನಾಟಕ ನಿಲ್ಲಿಸಬೇಕು. ಇದು ಸ್ವಲ್ಪ ಸಮಯದಿಂದ ನಡೆಯುತ್ತಿದೆ ಮತ್ತು ಮಿತಿ ಮೀರಿದೆ. ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ಈಗ ಆಂದೋಲನವನ್ನು ನಿರ್ದೇಶಿಸುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ,ʼ ಎಂದು ಸುದ್ದಿಗಾರರಿಗೆ ತಿಳಿಸಿದರು.

ಎಸ್‌ ಸಿ ವಿಚಾರಣೆ: ಏತನ್ಮಧ್ಯೆ, ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಡೆಸಲಿದೆ. ಸೆಪ್ಟೆಂಬರ್ 10 ರಂದು ಸಂಜೆ 5 ಗಂಟೆಯೊಳಗೆ ಕೆಲಸ ಪುನರಾರಂಭಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ಕಿರಿಯ ವೈದ್ಯರು ತಮ್ಮ ಮುಷ್ಕರವನ್ನು ಮುಂದುವರಿಸಿದ್ದಾರೆ.

Tags:    

Similar News