Kolkata rape murder| ಸಿಎಂ ಮಾತುಕತೆ ಪ್ರಸ್ತಾಪ ತಳ್ಳಿಹಾಕಿದ ಕಿರಿಯ ವೈದ್ಯರು
ʻಮಾತುಕತೆಗೆ ಆಹ್ವಾನಿಸಿ ಕಳಿಸಿರುವ ಇ-ಮೇಲ್‌ನ ಭಾಷೆ ಅಪಮಾನಕರವಾಗಿದೆ. ವೈದ್ಯರಿಗೆ ಅಗೌರವ ಮಾತ್ರವಲ್ಲ, ಸಂಪೂರ್ಣವಾಗಿ ಸಂವೇದನೆರಹಿತವಾಗಿದೆ. ಇದಕ್ಕೆ ಉತ್ತರಿಸುವ ಅಗತ್ಯ ಕಂಡುಬಂದಿಲ್ಲ,ʼ ಎಂದು ಸ್ವಾಸ್ಥ್ಯ ಭವನದ ಎದುರು ಧರಣಿ ನಡೆಸಿದ ಡಾ. ದೇಬಾಶಿಶ್ ಹಲ್ದರ್ ಹೇಳಿದರು.;
ಕಿರಿಯ ವೈದ್ಯರ ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸಚಿವಾಲಯದಲ್ಲಿ ಮಾತುಕತೆಗೆ ಆಗಮಿಸಬೇಕೆಂಬ ಸಿಎಂ ಅವರ ಆಹ್ವಾನವನ್ನು ವೈದ್ಯರು ತಿರಸ್ಕರಿಸಿದ್ದಾರೆ.
ಮಂಗಳವಾರ ಸಂಜೆ 5 ಗಂಟೆಯೊಳಗೆ ಕೆಲಸವನ್ನು ಪುನಾರಂಭಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಕಿರಿಯ ವೈದ್ಯರು ಧಿಕ್ಕರಿ ಸಿದ್ದು, ಬೇಡಿಕೆಗಳನ್ನು ಈಡೇರಿಸುವವರೆಗೆ ಮತ್ತು ಸಂತ್ರಸ್ತೆಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಭಟನಾಕಾರರಿಗೆ ಪತ್ರ ಬರೆದಿದ್ದು, ಅವರನ್ನು ಸಭೆಗೆ ಆಹ್ವಾನಿಸಿದ್ದಾರೆ ಎಂದು ರಾಜ್ಯ ಸರ್ಕಾ ರ ತಿಳಿಸಿದೆ. ಆದರೆ, ರಾಜ್ಯ ಆರೋಗ್ಯ ಕಾರ್ಯದರ್ಶಿಯಿಂದ ಇ-ಮೇಲ್ ಬಂದಿದೆ. ನಾವು ಅವರ ರಾಜೀನಾಮೆಯನ್ನುಕೇಳುತ್ತಿದ್ದು, ಇದು ಅಪಮಾನಕರ. ಸಭೆಗೆ ಹಾಜರಾಗಲು ಪ್ರತಿನಿಧಿಗಳ ಸಂಖ್ಯೆಯನ್ನು 10 ಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ ಎಂದು ವೈದ್ಯರು ಹೇಳಿದ್ದಾರೆ.
ʻಇಮೇಲ್‌ನ ಭಾಷೆ ಅಪಮಾನಕರವಾಗಿದೆ. ವೈದ್ಯರಿಗೆ ಅಗೌರವ ಮಾತ್ರವಲ್ಲ, ಸಂಪೂರ್ಣವಾಗಿ ಸಂವೇದನೆರಹಿತವಾಗಿದೆ. ಇದಕ್ಕೆ ಉತ್ತರಿಸುವ ಅಗತ್ಯ ಕಂಡುಬಂದಿಲ್ಲ,ʼ ಎಂದು ಸ್ವಾಸ್ಥ್ಯ ಭವನದ ಎದುರು ಧರಣಿ ನಡೆಸಿದ ಡಾ. ದೇಬಾಶಿ ಶ್ ಹಲ್ದರ್ ಹೇಳಿದರು.
ವೈದ್ಯರ ಮೇಲೆ ಕ್ರಮದ ಸೂಚನೆ: ಆರ್.ಜಿ. ಕರ್ ಆಸ್ಪತ್ರೆಯ ಅಧಿಕಾರಿಗಳು 51 ವೈದ್ಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ವೈದ್ಯರು ಬೆದರಿಸುತ್ತಿದ್ದಾರೆ ಮತ್ತು ಸಂಸ್ಥೆಯ ಪ್ರಜಾಸತ್ತಾತ್ಮಕ ವಾತಾವರಣಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ವೈದ್ಯರನ್ನು ಸೆಪ್ಟೆಂಬರ್ 11 ರಂದು ವಿಚಾರಣೆಗೆ ಕರೆಯಲಾಗಿದೆ.
ಕೋಲ್ಕತ್ತಾ ಪೊಲೀಸ್ ಕಮಿಷನರ್, ಆರೋಗ್ಯ ಕಾರ್ಯದರ್ಶಿ, ಆರೋಗ್ಯ ಸೇವೆಗಳ ನಿರ್ದೇಶಕರು ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ಮಂಗಳವಾರ ಸಂಜೆ 5 ಗಂಟೆಗೆ ಪದಚ್ಯುತಗೊಳಿಸುವಂತೆ ರಾಜ್ಯ ಸರ್ಕಾರವನ್ನು ವೈದ್ಯರು ಕೇಳಿದ್ದರು. ಸಾಲ್ಟ್ ಲೇಕ್‌ನಲ್ಲಿರುವ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಯಾದ ಸ್ವಾಸ್ಥ್ಯ ಭವನಕ್ಕೆ ಮೆರವಣಿಗೆ ನಡೆಸಿದ ವೈದ್ಯರು, ಧರಣಿ ನಡೆಸಿದರು.ಆರೋಗ್ಯ ಖಾತೆ ಸಚಿವರಾದ ಚಂದ್ರಿಮಾ ಭಟ್ಟಾಚಾರ್ಯ ಮಾತನಾಡಿ, ʻ ಮುಖ್ಯಮಂತ್ರಿ ವೈದ್ಯರಿಗೆ ಸಂದೇಶ ಕಳಿಸುವ ಮೂಲಕ ಸಕಾರಾತ್ಮಕ ವಿಧಾನ ಅನುಸರಿಸಿದ್ದಾರೆ ಎಂದು ಹೇಳಿದರು.
ʻಕಿರಿಯ ವೈದ್ಯರಿಗೆ ಸಂಜೆ 6.10 ರ ಸುಮಾರಿಗೆ ಇಮೇಲ್ ಕಳುಹಿಸಲಾಗಿದೆ. ಪ್ರತಿಭಟನಕಾರರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ರಾತ್ರಿ 7.30ಕ್ಕೆ ಸಿಎಂ ತಮ್ಮ ಕಚೇರಿಯಿಂದ ತೆರಳಿದರು,ʼ ಎಂದು ಹೇಳಿದರು.
ವೈದ್ಯ ವಿದ್ಯಾರ್ಥಿಗಳಿಂದ ಬೆದರಿಕೆ: ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಅಧಿಕಾರಿಗಳು ಮತ್ತು ಇತರ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಐವರು ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ.ʻಅವರು ವಸತಿನಿಲಯವನ್ನು ಹಾಗೂ ವೈದ್ಯಕೀಯ ಕಾಲೇಜಿನ ಆವರಣವನ್ನು ತಕ್ಷಣ ತೊರೆಯಬೇಕಿದೆ,ʼ ಎಂದು ಹೇಳಿದೆ.
ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ, ಅಲಿಪೋರ್ ನ್ಯಾಯಾಲಯದ ಆವರಣದಲ್ಲಿ ಗೊಂದಲ ಸೃಷ್ಟಿಯಾಯಿತು. ಮಹಿಳಾ ವಕೀಲರು ಘೋಷ್ ವಿರುದ್ಧ ಘೋಷಣೆ ಕೂಗಿದರು ಮತ್ತು ನ್ಯಾಯಾಲಯದಿಂದ ಹೊರಹೋಗುವುದನ್ನು ತಡೆಯಲು ಪ್ರಯತ್ನಿಸಿದರು. ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಕುಮ್ಮಕ್ಕು ನೀಡಿದ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೇಂದ್ರ ಅರೆಸೇನಾ ಪಡೆಗಳ ನೆರವು ಕೋರಿದ್ದಾರೆ.