Kolkata rape and murder| ವೈದ್ಯರ ಮುಷ್ಕರದಿಂದ 23 ಜನ ಸಾವು-ಬಂಗಾಳ ಸರ್ಕಾರ
ವೈದ್ಯರ ಪ್ರತಿಭಟನೆಯಿಂದ 23 ಜನರು ಸಾವನ್ನಪ್ಪಿದ್ದಾರೆ ಎಂದು ಆರ್.ಜಿ. ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಸಿ ಪೀಠಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ವಕೀಲ ಕಪಿಲ್ ಸಿಬಲ್ ಹೇಳಿದರು.;
ಕೋಲ್ಕತ್ತಾದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರತಿಭಟಿಸಿ ನಡೆದ ವೈದ್ಯರ ಮುಷ್ಕರದಿಂದ 23 ಜನರು ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ.
ಸುಪ್ರೀಂ ಕೋರ್ಟ್ ಪೀಠಕ್ಕೆ ಹಿರಿಯ ವಕೀಲ ಕಪಿಲ್ ಸಿಬಲ್ ಈ ಮಾಹಿತಿ ಸೋಮವಾರ ನೀಡಿದ್ದಾರೆ. ಸುಪ್ರೀಂ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸ್ವಯಂ ವಿಚಾರಣೆ ನಡೆಸುತ್ತಿದೆ.
ವರದಿ ಸಲ್ಲಿಕೆ: ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಸಿಬಲ್ ಅವರು, ʻರಾಜ್ಯ ಆರೋಗ್ಯ ಇಲಾಖೆಯು ವರದಿ ಸಲ್ಲಿಸಿದೆ. ವೈದ್ಯರ ಮುಷ್ಕರದಿಂದ 23 ಜನರು ಸಾವನ್ನಪ್ಪಿದ್ದಾರೆ,ʼ ಎಂದು ಹೇಳಿದರು. ಮು.ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿತು.
ಮರಣ ದಾಖಲಿಸುವಲ್ಲಿ ವಿಳಂಬ: ಅಸ್ವಾಭಾವಿಕ ಸಾವು ವರದಿ ದಾಖಲಿಸಿದ ಸಮಯದ ಬಗ್ಗೆಯೂ ನ್ಯಾಯಾಲಯ ಸ್ಪಷ್ಟನೆ ಕೇಳಿದೆ. ಮರಣ ಪ್ರಮಾಣಪತ್ರವನ್ನು ಮಧ್ಯಾಹ್ನ 1.47ಕ್ಕೆ ನೀಡಲಾಗಿದ್ದು, ಠಾಣೆಯಲ್ಲಿ ಮಧ್ಯಾಹ್ನ 2.55ಕ್ಕೆ ದಾಖಲಿಸಲಾಗಿದೆ ಎಂದು ಸಿಬಲ್ ತಿಳಿಸಿದರು.
ವೈದ್ಯೆ ಸಾವಿನ ಬಗ್ಗೆ ಪ್ರಕರಣ ದಾಖಲಿಸಲು ವಿಳಂಬ ಮಾಡಿದ್ದಕ್ಕೆ ಕೋಲ್ಕತ್ತಾ ಪೊಲೀಸರನ್ನು ಎಸ್‌ಸಿ ಕಟುವಾಗಿ ಟೀಕಿಸಿದೆ. ವಿಳಂಬ ಮತ್ತು ಕಾರ್ಯವಿಧಾನ ʻಕ್ಷೋಭೆಗೆ ಕಾರಣವಾಗಿದೆʼ ಎಂದಿದ್ದು, ಘಟನೆಗಳ ಅನುಕ್ರಮವನ್ನು ಪ್ರಶ್ನಿಸಿದೆ.
ಸಹಕಾರದ ಕೊರತೆ: ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಭದ್ರತೆ ಜವಾಬ್ದಾರಿ ಹೊತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಗೆ ಪಶ್ಚಿಮ ಬಂಗಾಳ ಸರ್ಕಾರ ಬೆಂಬಲ ನೀಡದೆ ಇರುವ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಎಸ್‌ಸಿಗೆ ಮನವಿ ಮಾಡಿದೆ.
ಟಿಎಂಸಿ ಸರ್ಕಾರದ ಅಸಹಕಾರವು ಗಾಢ ಸಮಸ್ಯೆಯನ್ನು ಸೂಚಿಸುತ್ತದೆ. ಸಿಐಎಸ್‌ಎಫ್‌ಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೇಂದ್ರ ಗೃಹ ಸಚಿವಾಲಯ ವಿನಂತಿಸಿದೆ.