‘ಭ್ರಷ್ಟ’ ಐಪಿಎಸ್ ಅಧಿಕಾರಿಗಳನ್ನು ಬಯಲಿಗೆಳೆಯುವೆ: ಶಾಸಕ ಜಲೀಲ್

ಜಲೀಲ್‌ ಮತ್ತು ಅನ್ವರ್ ಮಾಡಿರುವ ಭ್ರಷ್ಟಾಚಾರ ಆರೋಪಗಳು ಗೃಹ ಇಲಾಖೆ ವಿರುದ್ಧ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ಪ್ರಮುಖ ಇಲಾಖೆವನ್ನು ಸಿಎಂ ಕಳೆದ ಎಂಟು ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ.

Update: 2024-09-05 06:54 GMT

ತಿರುವನಂತಪುರಂ: ನಿಲಂಬೂರ್ ಶಾಸಕ ಪಿ.ವಿ. ಅನ್ವರ್ ಅವರ ನಂತರ, ಮಲಪ್ಪುರಂ ಜಿಲ್ಲೆಯ ಮತ್ತೊಬ್ಬ ಆಡಳಿತಾರೂಢ ಎಡ ಶಾಸಕ, ಮಾಜಿ ಸಚಿವ ಕೆ.ಟಿ. ಜಲೀಲ್ ಅವರು ಐಪಿಎಸ್ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ವಂಚನೆಯನ್ನು ಬಯಲಿಗೆಳೆಯುವುದಾಗಿ ಹೇಳಿದ್ದಾರೆ.

ʻವಂಚಕ ಮತ್ತು ಭ್ರಷ್ಟ ಐಪಿಎಸ್ ಅಧಿಕಾರಿಗಳನ್ನು ಬಹಿರಂಗಪಡಿಸಲಾಗುವುದು, ಅದರಲ್ಲಿ ಯಾವುದೇ ಅನುಮಾನವಿಲ್ಲ. ಸಮವಸ್ತ್ರದ ನೆಪದಲ್ಲಿ ಏನು ಬೇಕಾದರೂ ಮಾಡಬಹುದು ಮತ್ತು ತಪ್ಪಿಸಿಕೊಳ್ಳಬಹುದು ಎಂಬ ದಶಕಗಳಿಂದ ಇರುವ ಭ್ರಮೆ ಈಗ ಕೊನೆಗೊಂಡಿದೆ,ʼ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಜಲೀಲ್ ಬುಧವಾರ ಹೇಳಿದ್ದಾರೆ. 

ಶಾಸಕ ಅನ್ವರ್‌ ಅವರು ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಜಿತ್ ಕುಮಾರ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಪಿ. ಶಶಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅವರ ಹೇಳಿಕೆ ಸೃಷ್ಟಿಸಿದ ಬಿರುಗಾಳಿಯನ್ನು ತಿಳಿಗೊಳಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆಡಳಿತಾರೂಢ ಸಿಪಿಐ(ಎಂ) ಪ್ರಯತ್ನದ ನಡುವೆಯೇ ಜಲೀಲ್‌ ಅವರ ಹೇಳಿಕೆ ಬಂದಿದೆ. 

125 ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದ ಮುಖ್ಯಮಂತ್ರಿ ಅವರನ್ನು ʻಧೀರ ಕಾಮ್ರೇಡ್‌ʼ ಎಂದು ಜಲೀಲ್ ಬಣ್ಣಿಸಿದ್ದಾರೆ. ಆದರೆ, ಅವರು ಮತ್ತು ಅನ್ವರ್ ಮಾಡಿರುವ ಭ್ರಷ್ಟಾಚಾರ ಆರೋಪಗಳು ಗೃಹ ಇಲಾಖೆ ವಿರುದ್ಧ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪ್ರಮುಖ ಇಲಾಖೆವನ್ನು ಸಿಎಂ ಕಳೆದ ಎಂಟು ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ. 

ʻಇದು ಗೋಡೆಗಳಿಗೂ ಕಿವಿ ಇರುವ ಯುಗ. ದೇವರ ಕಣ್ಣುಗಳು ಎಲ್ಲವನ್ನೂ ನೋಡುತ್ತಿವೆ. ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿರುವವರ ಆರ್ಥಿಕ ಮೂಲಗಳನ್ನು ಹುಡುಕಿ ಬಯಲಿಗೆಳೆಯಲಾಗುವುದು. ರಾತ್ರಿ ವೇಳೆ ಕಳ್ಳಸಾಗಾಣಿಕೆ ಮಾಡಿರುವ ವಸ್ತುಗಳು, ಅವನ್ನು ಯಾವ ಸಮುದ್ರದಲ್ಲಿ ಅಡಗಿಸಿಟ್ಟಿದ್ದರೂ, ಪತ್ತೆ ಮಾಡಲಾಗುವುದು,ʼ ಎಂದು ಆಗಲಿದೆ,’ ಎಂದು ಎರಡು ದಿನಗಳ ಹಿಂದೆ ಚುನಾವಣಾ ರಾಜಕೀಯದಿಂದ ನಿವೃತ್ತಿ ನಿರ್ಧಾರ ಪ್ರಕಟಿಸಿದ ಜಲೀಲ್ ಬರೆದಿದ್ದಾರೆ.

ʻಶಾಸಕ ಅನ್ವರ್ ಹೇಳಿಕೆಯಲ್ಲಿ ಸುಳ್ಳು ಇದ್ದರೆ ಸಂಬಂಧಪಟ್ಟ ಅಧಿಕಾರಿಗಳು ದೂರು ನೀಡಬೇಕು. ಇಲ್ಲದಿದ್ದಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಲಿ. ಇಂತಹ ಕ್ರಮವು ತಪ್ಪಿತಸ್ಥ ಅಧಿಕಾರಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ,ʼ ಎಂದಿದ್ದಾರೆ.

Tags:    

Similar News