ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಈ ಹಿಂದೆ ಅಮಾನುಷವಾಗಿ ನಡೆಸಿಕೊಂಡಿದ್ದ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂರಕ್ಷಿಸುವಂತೆ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಆದೇಶಿಸಿದ್ದಾರೆ.
ಸಹಾಯಕ ಪೊಲೀಸ್ ಆಯುಕ್ತ ಎ.ಕೆ. ಸಿಂಗ್ ಅವರನ್ನು ತಮ್ಮ ಭದ್ರತಾ ಸೇವೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿ ಕೇಜ್ರಿವಾಲ್, ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಕೇಜ್ರಿವಾಲ್ ಅವರ ಮನವಿ ಮೇರೆಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂರಕ್ಷಿಸುವಂತೆ ನ್ಯಾಯಾಲಯ ಸೂಚಿಸಿದೆ. ʻಕೇಜ್ರಿವಾಲ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನೇಮಕಗೊಂಡ ಎಸಿಪಿ ಅನಗತ್ಯವಾಗಿ ಕಠಿಣ ಮತ್ತು ಅಸಭ್ಯವಾಗಿ ವರ್ತಿಸಿದ್ದಾರೆʼ ಎಂದು ನ್ಯಾಯಾಧೀಶರಾದ ಕಾವೇರಿ ಬವೇಜಾ ಗಮನಿಸಿದರು.ʻಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಲು ಮತ್ತು ಅದರ ಪ್ರತಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮತ್ತು ಸಿಬಿಐ ವಿಶೇಷ ನ್ಯಾಯಾಧೀಶರಿಗೆ ವಿನಂತಿ ಪತ್ರವನ್ನು ಕಳುಹಿಸಲು ನಿರ್ದೇಶಿಸುತ್ತಿದ್ದೇನೆʼ ಎಂದು ನ್ಯಾಯಾಧೀಶರು ಹೇಳಿದರು.
ಕೇಜ್ರಿವಾಲ್ ಆರೋಪ: ಶುಕ್ರವಾರ (ಮಾರ್ಚ್ 22) ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರುವಾಗ ಎಸಿಪಿ ಸಿಂಗ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮೂಲಗಳ ಪ್ರಕಾರ, ಶುಕ್ರವಾರ ಕೇಜ್ರಿವಾಲ್ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ, ವಕೀಲರು, ದಾವೆದಾರರು ಮತ್ತು ಭದ್ರತಾ ಸಿಬ್ಬಂದಿಯಿರುವಾಗ ಎಸಿಪಿ ಹಲವರೊಂದಿಗೆ ಅನುಚಿತವಾಗಿ ವರ್ತಿಸಿದರು.
ಕಳೆದ ವರ್ಷ ಇದೇ ನ್ಯಾಯಾಲಯದ ಆವರಣದಲ್ಲಿ ಪತ್ರಕರ್ತರು ಸಿಸೋಡಿಯಾ ಅವರನ್ನುಪ್ರಶ್ನೆ ಕೇಳಿದಾಗ, ಸಿಂಗ್ ಅವರ ಕುತ್ತಿಗೆಯನ್ನು ಹಿಡಿದಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ, ದೆಹಲಿ ಪೊಲೀಸರು ತಮ್ಮಿಂದ ಯಾವುದೇ ತಪ್ಪು ಆಗಿಲ್ಲ ಮತ್ತು ಇಂಥ ಕ್ರಮಗಳು ಭದ್ರತೆಗೆ ಅಗತ್ಯ ಎಂದು ಸಮರ್ಥಿಸಿಕೊಂಡಿ ದ್ದರು.
ಇಡಿ ಕಸ್ಟಡಿ
ನ್ಯಾಯಾಲಯವು ಕೇಜ್ರಿವಾಲ್ ಅವರನ್ನು ಏಳು ದಿನ ಕಾಲ ಇಡಿ ಕಸ್ಟಡಿಗೆ ನೀಡಿದೆ. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ತನಿಖೆ ನಡೆಸುತ್ತಿರುವ ಇಡಿ, ಕೇಜ್ರಿವಾಲ್ ಅವರನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡಬೇಕೆಂದು ಕೇಳಿಕೊಂಡಿದೆ. ಕೇಜ್ರಿವಾಲ್ ಹಗರಣದ ಪ್ರಮುಖ ಸಂಚುಕೋರರು ಎಂದು ಹೇಳಿದೆ.