ಕವಾಡ್ ಯಾತ್ರೆ: ಮಧ್ಯಂತರ ತಡೆ ವಿಸ್ತರಿಸಿದ ಸುಪ್ರೀಂ
ಕವಾಡ್ ಯಾತ್ರೆಗೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳು ಹೊರಡಿಸಿದ ನಿರ್ದೇಶನಗಳಿಗೆ ಜುಲೈ 22 ರಂದು ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿತು. ಶುಕ್ರವಾರ ತಡೆಯನ್ನು ವಿಸ್ತರಿಸಿದೆ.;
ಕವಾಡ್ ಯಾತ್ರೆಯ ಮಾರ್ಗದಲ್ಲಿರುವ ತಿನಿಸು ಅಂಗಡಿಗಳ ಮಾಲೀಕರ ಹೆಸರು ಪ್ರದರ್ಶಿಸುವಂತೆ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರ ಹೊರಡಿಸಿದ ನಿರ್ದೇಶನಗಳನ್ನು ತಡೆ ಹಿಡಿಯುವ ಜುಲೈ 22 ರ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಜುಲೈ 26) ಮುಂದುವರಿಸಿದೆ.
ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳು ಹೊರಡಿಸಿದ ನಿರ್ದೇಶನಗಳಿಗೆ ಜುಲೈ 22 ರಂದು ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿತು.
ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರ ಪೀಠವು, ʻಜುಲೈ 22 ರ ಆದೇಶದ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡುವುದಿಲ್ಲ. ಆ ಆದೇಶದಲ್ಲಿ ಹೇಳಬೇಕಾದುದನ್ನು ಹೇಳಿದ್ದೇವೆ. ಹೆಸರುಗಳನ್ನು ಬಹಿರಂಗಪಡಿಸುವಂತೆ ಯಾರನ್ನೂ ಒತ್ತಾಯಿಸುವಂತಿಲ್ಲ,ʼ ಎಂದು ಹೇಳಿತು.
ಪ್ರತಿಕ್ರಿಯೆಗೆ ಸೂಚನೆ: ತಮ್ಮ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಿಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಮಧ್ಯಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ಪೀಠ ಕೇಳಿದೆ. ರಾಜ್ಯ ಸರ್ಕಾರಗಳು ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ಮಾಡಿಕೊಟ್ಟು, ವಿಷಯವನ್ನು ಆಗಸ್ಟ್ 5 ರಂದು ವಿಚಾರಣೆಗೆ ನಿಗದಿಗೊಳಿಸಿದೆ.
ಆದೇಶ ಸಮರ್ಥಿಸಿಕೊಂಡ ಯುಪಿ ಸರ್ಕಾರ: ಇದಕ್ಕೂ ಮೊದಲು, ಉತ್ತರ ಪ್ರದೇಶ ಸರ್ಕಾರವು ತನ್ನ ನಿರ್ದೇಶನವನ್ನು ಸಮರ್ಥಿಸಿಕೊಂಡಿತು. ಪಾರದರ್ಶಕತೆ ತರಲು, ಸಂಭವನೀಯ ಗೊಂದಲ ತಪ್ಪಿಸಲು ಮತ್ತು ಶಾಂತಿಯುತ ಯಾತ್ರೆಯನ್ನು ಖಚಿತಪಡಿಸುವುದು ನಮ್ಮ ಉದ್ಧೇಶ ಎಂದು ಹೇಳಿತು.
ʻಪಾರದರ್ಶಕತೆ ಮತ್ತು ಯಾತ್ರಿಗಳು ಯಾತ್ರೆಯ ಅವಧಿಯಲ್ಲಿ ತಾವು ಏನು ಸೇವಿಸುತ್ತಿದ್ದೇವೆ ಎಂದು ತಿಳಿದುಕೊಳ್ಳಲು ಮತ್ತು ಅವರ ನಂಬಿಕೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ಧೇಶ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ (ಜುಲೈ 26) ತನ್ನ ಉತ್ತರ ನೀಡಿತ್ತು.
ಯುಪಿ ಸರ್ಕಾರ ಹೇಳಿದ್ದೇನು?: ʻಎಲ್ಲಾ ಧರ್ಮಗಳು, ನಂಬಿಕೆಗಳು ಮತ್ತು ವ್ಯಕ್ತಿಗಳು ಸಹಬಾಳ್ವೆ ನಡೆಸುವುದನ್ನು ಖಚಿತಪಡಿಸಿ ಕೊಳ್ಳಲು ಮತ್ತು ಅವರ ಹಬ್ಬಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಕಾಳಜಿ ವಹಿಸುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಸಲ್ಲಿಕೆಯಲ್ಲಿ ಹೇಳಿದೆ.
ʻವಾರ್ಷಿಕವಾಗಿ 4.07 ಕೋಟಿಗೂ ಹೆಚ್ಚು ಮಂದಿ ಭಾಗವಹಿಸುವ ಕವಾಡ್ ಯಾತ್ರೆಯನ್ನು ಶಾಂತಿಯುತವಾಗಿ ಪೂರ್ಣಗೊಳಿಸುವುದನ್ನು ಖಾತ್ರಿಪಡಿಸಲು ಆಕ್ಷೇಪಾರ್ಹ ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದೆ,ʼ ಎಂದು ಅದು ಹೇಳಿದೆ. ಸಣ್ಣ ಗೊಂದಲದಿಂದ ಸಮಸ್ಯೆ ಉಲ್ಬಣ: ಕವಾಡ್ ಯಾತ್ರೆಯು ಶ್ರಾವಣ ಮಾಸದಲ್ಲಿ ನಡೆಯುವ ವಾರ್ಷಿಕ ತೀರ್ಥಯಾತ್ರೆಯಾಗಿದ್ದು, ಹರಿದ್ವಾರ ಮತ್ತು ಇತರ ಪವಿತ್ರ ಸ್ಥಳಗಳಿಂದ ಗಂಗಾ ಜಲವನ್ನು ತಂದ ಶಿವನ ಭಕ್ತರು ವಿವಿಧ ಪೂಜಾ ಸ್ಥಳಗಳಲ್ಲಿ ಶಿವನಿಗೆ ಅರ್ಪಿಸುತ್ತಾರೆ ಎಂದು ಸ್ಥಾಯಿ ಸಲಹೆಗಾರರಾದ ರುಚಿರಾ ಗೋಯೆಲ್ ಮೂಲಕ ಯುಪಿ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ.
ಕೋಟ್ಯಂತರ ಮಂದಿ ಪಾಲ್ಗೊಳ್ಳಲಿದ್ದು, ಆಹಾರದ ಬಗೆಗಿನ ಸಣ್ಣ ಗೊಂದಲ ಅವರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಸಾಧ್ಯತೆ ಇದೆ. ಮುಜಾಫರ್‌ನಗರದಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಸಮಸ್ಯೆ ಭುಗಿಲೇಳುವ ಸಾಧ್ಯತೆ ಇದೆ. ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಜೈನರ ಹಬ್ಬದಲ್ಲಿ ಒಂಬತ್ತು ದಿನ ಕಾಲ ಗುಜರಾತ್‌ನಲ್ಲಿ ಕಸಾಯಿಖಾನೆಗಳನ್ನು ಸಂಪೂರ್ಣವಾಗಿ ಮುಚ್ಚುವುದನ್ನು ಸುಪ್ರೀಂ ಕೋರ್ಟ್ 2008ರಲ್ಲಿ ಎತ್ತಿಹಿಡಿದಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಶಿಕ್ಷಣ ತಜ್ಞ ಅಪೂರ್ವಾನಂದ್ ಝಾ, ಅಂಕಣಕಾರ ಆಕಾರ್ ಪಟೇಲ್ ಮತ್ತು ಅಸೋಷಿಯೇಷನ್ ಆಫ್ ಪ್ರೊಟಿಕ್ಷನ್ ಆಫ್ ಸಿವಿಲ್ ಲಿಬರ್ಟೀಸ್ ನಿರ್ದೇಶನಗಳನ್ನು ಪ್ರಶ್ನಿಸಿದ್ದವು. ಕವಾಡ್ ಯಾತ್ರೆ ಜುಲೈ 22 ರಂದು ಆರಂಭವಾಗಿದ್ದು, ಆಗಸ್ಟ್ 6 ರಂದು ಕೊನೆಗೊಳ್ಳುತ್ತದೆ.