ನ್ಯಾ.ವರ್ಮಾ ವಾಗ್ದಂಡನೆ; ಸಲಹೆ ನೀಡಲು ಇಬ್ಬರು ವಕೀಲರ ನೇಮಿಸಿದ ಸ್ಪೀಕರ್‌

ನ್ಯಾ. ವರ್ಮಾ ಅವರನ್ನು ವಾಗ್ದಂಡನೆ ಮೂಲಕ ತೆಗೆದುಹಾಕಬೇಕು ಎಂದು ಆಗ್ರಹದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಸಮಿತಿ ರಚಿಸಿದ್ದರು.

Update: 2025-09-22 08:19 GMT

ಅಲಹಾಬಾದ್ ಹೈಕೋರ್ಟ್ ನ್ಯಾ.ಯಶವಂತ್ ವರ್ಮಾ ಅವರ ವಾಗ್ದಂಡನೆ ಪ್ರಕ್ರಿಯೆಗೆ ರಚಿಸಿರುವ ತ್ರಿಸದಸ್ಯ ಸಮಿತಿಗೆ ನೆರವಾಗಲು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಇಬ್ಬರು ವಕೀಲರನ್ನು ಅಧಿಕೃತ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ.  

ಕಳೆದ ಆಗಸ್ಟ್ 12ರಂದು ನ್ಯಾ.ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ನ್ಯಾ. ವರ್ಮಾ ಅವರನ್ನು ವಾಗ್ದಂಡನೆ ಮೂಲಕ ತೆಗೆದುಹಾಕಬೇಕು ಎಂದು ಆಗ್ರಹದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಸಮಿತಿ ರಚಿಸಿದ್ದರು. ಸುಪ್ರೀಂಕೋರ್ಟ್ ಕೂಡ ಆಂತರಿಕ ಸಮಿತಿ ರಚಿಸಿತ್ತು. ಆ ಸಮಿತಿಯು ಈಗಾಗಲೇ ದೋಷಾರೋಪ ವರದಿ ಸಲ್ಲಿಸಿ, ನ್ಯಾ. ವರ್ಮಾ ಅವರ ಪದಚ್ಯುತಿಗೆ ಶಿಫಾರಸು ಮಾಡಿತ್ತು.

ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ, ಶಿಫಾರಸು ಮಾಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇದ್ದರೂ, ವಾಗ್ದಂಡನೆ ವಿಧಿಸುವ ಅಧಿಕಾರ ಸಂಸತ್ತಿಗೆ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪ್ರಸ್ತಾವನೆ ಮಂಡಿಸಿತು. 146 ಮಂದಿ ಸಂಸದರು ಸಹಿ ಮಾಡಿದ ಆ ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿದ್ದರು.

ನ್ಯಾಯಮೂರ್ತಿಗಳ (ವಿಚಾರಣಾ) ಕಾಯ್ದೆಯಡಿ ರಚಿಸಲಾದ ತನಿಖಾ ಸಮಿತಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ (ಕರ್ನಾಟಕ ಮೂಲದ) ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ಹಿರಿಯ ವಕೀಲ (ಕರ್ನಾಟಕ ಮೂಲದ) ಬಿ. ವಾಸುದೇವ ಆಚಾರ್ಯ ಸದಸ್ಯರಾಗಿದ್ದರು.

ಲೋಕಸಭಾ ಸಚಿವಾಲಯವು ಸೆ.19ರಂದು ಹೊರಡಿಸಿದ ಆದೇಶದ ಪ್ರಕಾರ, ನ್ಯಾಯಮೂರ್ತಿ ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಕುರಿತು ಸಮಿತಿ ನಡೆಸುತ್ತಿರುವ ಪರಿಶೀಲನೆಗೆ ನೆರವಾಗುವ ಸಲುವಾಗಿ ವಕೀಲರಾದ ರೋಹನ್ ಸಿಂಗ್ ಮತ್ತು ಸಮೀಕ್ಷಾ ದುವಾ ಅವರನ್ನು ಸಲಹೆಗಾರರನ್ನಾಗಿ ನೇಮಿಸಲಾಗಿದೆ.

Tags:    

Similar News