Telangana : ಕಾಂಗ್ರೆಸ್ ಸರ್ಕಾರದ ನಡವಳಿಕೆ ಖಂಡಿಸಿ "ಖಾಲಿ ಸಂಪಾದಕೀಯ" ಪ್ರಕಟಿಸಿದ ಉರ್ದು ದಿನಪತ್ರಿಕೆ!
ಪತ್ರಿಕೆಯ ಆರೋಪಕ್ಕೆ ಸಮಜಾಯಿಷಿ ನೀಡಿರುವ ಕಾಂಗ್ರೆಸ್ ವಕ್ತಾರರೊಬ್ಬರು, "ಸರ್ಕಾರವು ಪತ್ರಿಕಾ ಜಾಹೀರಾತುಗಳ ಮೇಲಿನ ವೆಚ್ಚ ತಗ್ಗಿಸಲು ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ನಾವು ಕೆಲವು ಪತ್ರಿಕೆಗಳಿಗೆ ಜಾಹೀರಾತುಗಳನ್ನು ನಿಲ್ಲಿಸಿದ್ದೇವೆ" ಎಂದು ತಿಳಿಸಿದ್ದಾರೆ.;
ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ನೇತೃತ್ವದ ತೆಲಂಗಾಣ (Telangana) ಕಾಂಗ್ರೆಸ್ ಸರ್ಕಾರವು ಸರ್ಕಾರಿ ಜಾಹೀರಾತನ್ನು ಉದ್ದೇಶಪೂರ್ವಕಾಗಿ ನಿಲ್ಲಿಸಿದೆ ಎಂದು ಆರೋಪಿಸಿ, ತೆಲಂಗಾಣದ ಉರ್ದು ದಿನಪತ್ರಿಕೆ (Urdu daily) ಒಂದು ಪ್ರತಿಭಟನಾರ್ಥವಾಗಿ "ಖಾಲಿ ಸಂಪಾದಕೀಯ" ಪ್ರಕಟಿಸಿದೆ. "ದಿ ಮುನ್ಸಿಫ್ ಡೈಲಿ" (The Munsif Daily) ಎಂಬ ಪತ್ರಿಕೆ, 70ರ ದಶಕದಲ್ಲಿ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿದ್ದಕ್ಕೆ ಆ ಪತ್ರಿಕೆಗೆ ಜಾಹೀರಾತಿನಿಂದ ನೀಡದಿರುವುದನ್ನು ಇಲ್ಲಿ ಸ್ಮರಿಸಬಹುದು.
ಪತ್ರಿಕೆಯ ಆರೋಪಕ್ಕೆ ಸಮಜಾಯಿಷಿ ನೀಡಿರುವ ಕಾಂಗ್ರೆಸ್ ವಕ್ತಾರರೊಬ್ಬರು, "ಸರ್ಕಾರವು ಪತ್ರಿಕಾ ಜಾಹೀರಾತುಗಳ ಮೇಲಿನ ವೆಚ್ಚ ತಗ್ಗಿಸಲು ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ನಾವು ಕೆಲವು ಪತ್ರಿಕೆಗಳಿಗೆ ಜಾಹೀರಾತುಗಳನ್ನು ನಿಲ್ಲಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಕೋಮು ಸಾಮರಸ್ಯ ಕೆಡಿಸುವಂಥ ಘಟನೆಗಳನ್ನು ಈ ಉರ್ದು ದಿನಪತ್ರಿಕೆ ಬಹಿರಂಗಪಡಿಸಿತ್ತು. ಪೊಲೀಸ್ ವೈಫಲ್ಯಗಳು ಮತ್ತು ರಾಜ್ಯ ಸರ್ಕಾರದ ನಿಷ್ಕ್ರಿಯತೆ ಎತ್ತಿ ತೋರಿಸಿತ್ತು. ಚಿಲ್ಕೂರಿನಲ್ಲಿ ಪಾಳುಬಿದ್ದ ಮಸೀದಿ ಧ್ವಂಸ, ಅಲ್ಪಸಂಖ್ಯಾತ ಶಾಲಾ ಬಾಲಕಿಯರ ಸಮವಸ್ತ್ರದಿಂದ ದುಪಟ್ಟಾ ತೆಗೆದುಹಾಕಿರುವುದು ಮತ್ತು ವಕ್ಫ್ ಆಸ್ತಿಗಳನ್ನು ರಕ್ಷಿಸುವಲ್ಲಿ ಸರ್ಕಾರದ ವೈಫಲ್ಯದ ಬಗ್ಗೆಯೂ ಪತ್ರಿಕೆಯು ವರದಿ ಮಾಡಿದೆ.
""ಇಮಾಮ್‌ಗಳು ಮತ್ತು ಮುಅಝ್ಝಿನ್‌ಗಳ ವೇತನ ವಿಳಂಬ, ವಿಚ್ಛೇದಿತ ಮಹಿಳೆಯರಿಗೆ ಸ್ಟೈಪಂಡ್ ನೀಡದಿರುವುದು ಮತ್ತು ತೆಲಂಗಾಣ ಸಂಪುಟದಲ್ಲಿ ಮುಸ್ಲಿಂ ಪ್ರತಿನಿಧಿಯನ್ನೇ ಸೇರಿಸದಿರುವುದು ಸೇರಿದಂತೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಮೇಲೆ ನಮ್ಮ ಪತ್ರಿಕೆ ಬೆಳಕು ಚೆಲ್ಲುತ್ತಾ ಬಂದಿತ್ತು,'' ಎಂದು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಥೆರ್ ಮೊಯಿನ್ ಹೇಳಿದ್ದಾರೆ.
"ಕಾಂಗ್ರೆಸ್ ಆಡಳಿತದಲ್ಲಿ ತೆಲಂಗಾಣವು ಸಾಮರಸ್ಯದ ನೆಲವಾಗಿ ಪರಿವರ್ತನೆಗೊಂಡಿದೆ ಎಂದೇ ನಾವು ವರದಿ ಮಾಡಬೇಕೆಂದು ರೇವಂತ್ ಸರ್ಕಾರ ನಿರೀಕ್ಷಿಸಿದ್ದರೆ, ನಾವು ಅದಕ್ಕೆ ಸಿದ್ಧರಿಲ್ಲ ನಾವು ಪ್ರಶ್ನಿಸುವುದನ್ನು ಮುಂದುವರಿಸುತ್ತೇವೆ. ತೆಲಂಗಾಣದ ನೆಲ ಏಕೆ ಬರಡಾಗಿದೆ? ಬಡವರನ್ನು ಈಗಲೂ ಹಸಿವು ಏಕೆ ಅಂಚಿಗೆ ತಳ್ಳಲಾಗುತ್ತಿದೆ? ಅಸಹಾಯಕ ಹೆಣ್ಣುಮಕ್ಕಳ ಮೇಲೆ ಏಕೆ ದೌರ್ಜನ್ಯ ನಡೆಯುತ್ತಿದೆ?" ಎಂಬ ಪ್ರಶ್ನೆಗಳನ್ನು ಮುಂದುವರಿಸುತ್ತೇವೆ ಎಂದೂ ಮೊಯಿನ್ ಮುಂದಿಟ್ಟಿದ್ದಾರೆ.
ರಾಹುಲ್ ವಿರುದ್ಧವೂ ವಾಗ್ದಾಳಿ
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಅಪಾಯವನ್ನು ಎದುರಿಸುತ್ತಿದೆ ಎಂದು 2023ರ ಜೂನ್ ತಿಂಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನೂ ಉರ್ದು ಪತ್ರಿಕೆ ಖಂಡಿಸಿದೆ. "ದೇಶದ ಬಹುತೇಕ ಉರ್ದು ಪತ್ರಿಕೆಗಳು ಮೋದಿ ಸರ್ಕಾರವನ್ನು ಟೀಕಿಸಿವೆ. ಆದರೆ, ಕೇಂದ್ರ ಸರ್ಕಾರವು ಒಂದೇ ಒಂದು ಪತ್ರಿಕೆಯ ಜಾಹೀರಾತನ್ನು ತಡೆಹಿಡಿದಿದ್ದಿಲ್ಲ. ಆದರೆ, ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರವು ಸತ್ಯ ಮಾತನಾಡಿದ್ದಕ್ಕಾಗಿ ನಮ್ಮ ಪತ್ರಿಕೆಯನ್ನು ಶಿಕ್ಷಿಸುತ್ತಿದೆ. ಇದ್ಯಾವ ನ್ಯಾಯ?" ಎಂದು ಪ್ರಶ್ನಿಸಿದೆ.
"1975ರಲ್ಲಿ ಇಂದಿರಾ ಗಾಂಧಿಯವರು ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಿ ವಿಫಲರಾದರು. ಇಂದು, ಅವರ ಪಕ್ಷವು ಇತಿಹಾಸವನ್ನು ಮರುಕಳಿಸುವಂತೆ ಮಾಡುತ್ತಿದೆ. ಆದರೆ, ಒಂದಂತೂ ಸತ್ಯ- ಲೇಖನಿಯು ಖಡ್ಗಕ್ಕಿಂತಲೂ ಹರಿತವಾದದ್ದು. ಭಾರತದಲ್ಲಿ ಪತ್ರಿಕೋದ್ಯಮದ ಧ್ವನಿಯನ್ನು ಅಡಗಿಸಲು ಎಂದಿಗೂ ಸಾಧ್ಯವಿಲ್ಲ" ಎಂದೂ ಹೇಳಿದೆ.