JEE-Main 2025 results: ಜೆಇಇ ಫಲಿತಾಂಶ ಪ್ರಕಟ; ಕರ್ನಾಟಕದ ಒಬ್ಬರು ಸೇರಿ 14 ಅಭ್ಯರ್ಥಿಗಳಿಗೆ 100ಕ್ಕೆ 100
JEE-Main 2025 results : 14 ಟಾಪರ್‌ಗಳ ಪೈಕಿ 12 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದ್ದರೆ, ಒಬ್ಬರು ಹಿಂದುಳಿದ ವರ್ಗ ಮತ್ತು ಮತ್ತೊಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು.;
ಹೊಸದಿಲ್ಲಿ: ಜೆಇಇ ಮೇನ್ (JEE-Main 2025 ) ಮೊದಲ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕದ ಒಬ್ಬರು ಸೇರಿದಂತೆ ದೇಶದಾದ್ಯಂತದ 14 ಅಭ್ಯರ್ಥಿಗಳು ಪರಿಪೂರ್ಣ 100 ಅಂಕಗಳನ್ನು ಪಡೆದುಕೊಂಡಿದ್ದಾರೆ. 100 ಅಂಕ ಪಡೆದವರಲ್ಲಿ ಹೆಚ್ಚಿನವರು ರಾಜಸ್ಥಾನದವರು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಂಗಳವಾರ ಘೋಷಿಸಿದೆ.
14 ಟಾಪರ್‌ಗಳ ಪೈಕಿ 12 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದ್ದರೆ, ಒಬ್ಬರು ಹಿಂದುಳಿದ ವರ್ಗ ಮತ್ತು ಮತ್ತೊಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು.
ಒಟ್ಟು 12.58 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಮೊದಲ ಆವೃತ್ತಿಗೆ ಹಾಜರಾಗಿದ್ದರು.100 ಅಂಕಗಳನ್ನು ಪಡೆದ ಅಭ್ಯರ್ಥಿಗಳ ಪೈಕಿ, 5 ಮಂದಿ ರಾಜಸ್ಥಾನದಿಂದ, ತಲಾ ಇಬ್ಬರು ದೆಹಲಿ ಮತ್ತು ಉತ್ತರ ಪ್ರದೇಶ ಹಾಗೂ ಒಬ್ಬೊಬ್ಬರು ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ತೆಲಂಗಾಣ ಮತ್ತು ಮಹಾರಾಷ್ಟ್ರದವರಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಧಿಕಾರಿಗಳ ಪ್ರಕಾರ, ಅಂಕವು ಅಭ್ಯರ್ಥಿಗಳು ಪಡೆದ ಶೇಕಡಾವಾರು ಅಂಕಗಳಿಗೆ ಸಮನಾಗಿಲ್ಲ. ಇದು ಸಾಮಾನ್ಯ ಅಂಕಗಳಾಗಿವೆ.
ಈ ಪರೀಕ್ಷೆಯನ್ನು ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾಗಿದೆ.
ಭಾರತದ ಹೊರಗಿನ 15 ನಗರಗಳಲ್ಲಿ ಕೂಡಾ ಈ ಪರೀಕ್ಷೆ ಆಯೋಜಿಸಲಾಗಿತ್ತು, ಅವುಗಳೆಂದರೆ ಮನಾಮಾ, ದೋಹಾ, ದುಬೈ, ಕಠ್ಮಂಡು, ಮುಸ್ಕತ್, ಶಾರ್ಜಾ, ಸಿಂಗಪುರ್, ಕುವೈಟ್ ಸಿಟಿ, ಕೌಲಲಾಂಪುರ, ಅಬುಧಾಬಿ, ವೆಸ್ಟ್ ಜಾವಾ, ವಾಷಿಂಗ್ಟನ್, ಲಾಗೋಸ್ ಮತ್ತು ಮ್ಯೂನಿಚ್.
ಏಪ್ರಿಲ್‌ನಲ್ಲಿ ಎರಡನೇ ಆವೃತ್ತಿಯ ಪರೀಕ್ಷೆ
ಜನವರಿ-ಫೆಬ್ರವರಿಯಲ್ಲಿ ನಡೆದ ಮೊದಲ ಆವೃತ್ತಿಯ ನಂತರ, ಎರಡನೇ ಆವೃತ್ತಿ ಏಪ್ರಿಲ್‌ನಲ್ಲಿ ನಡೆಯಲಿದೆ. ಜೆಇಇ ಮೇನ್ ಪೇಪರ್ 1 ಮತ್ತು ಪೇಪರ್2 ಫಲಿತಾಂಶಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಅಲ್ಲಿಂದ ಭಾರತದ ಪ್ರತಿಷ್ಠಿತ 23 ಐಐಟಿಗಳಿಗೆ ಪ್ರವೇಶ ಪಡೆಯಲು ಸಾಧ್ಯವಿದೆ.
ಜೆಇಸಿ ಮೇನ್ 2025 ಎರಡೂ ಹಂತಗಳ ಪರೀಕ್ಷೆಗಳ ನಂತರ, ಅಭ್ಯರ್ಥಿಗಳ ಶ್ರೇಣಿಯನ್ನು (ರ್ಯಾಂಕ್) ಅವರ ಉತ್ತಮ NTA ಅಂಕಗಳನ್ನು ಪರಿಗಣಿಸಿ ಪ್ರಕಟಿಸಲಾಗುವುದು.