Infosys Layoff | ಇನ್ಫೋಸಿಸ್​ನಲ್ಲಿ ಕೆಲಸ ಕಳೆದುಕೊಂಡ ಟ್ರೈನಿಗಳಿಂದ ಪ್ರಧಾನಿ ಕಚೇರಿಗೆ ದೂರು

Infosys Layoff: ಹೊಸಬರಿಗೆ, ಇನ್ಫೋಸಿಸ್​​ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವುದು ಹೆಮ್ಮೆಯ ಕ್ಷಣ. ಆದರೆ ಕೆಲವೇ ತಿಂಗಳುಗಳ ಬಳಿಕ ಆಂತರಿಕ ಮೌಲ್ಯಮಾಪನಗಳಲ್ಲಿ ವಿಫಲ ಎಂಬ ಕಾರಣ ನೀಡಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.;

Update: 2025-02-27 12:32 GMT

ಕೃತಕ ಬುದ್ಧಿಮತ್ತೆ ರಚಿತ ಚಿತ್ರ.

ಇನ್ಫೋಸಿಸ್​​ನಲ್ಲಿ ತರಬೇತಿ ಪಡೆದ ಬಳಿಕ ಆಂತರಿಕ ಮೌಲ್ಯ ಮಾಪನ ಪರೀಕ್ಷೆಯನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಕೆಲಸ ಕಳೆದುಕೊಂಡವರು ಇದೀಗ ಪ್ರಧಾನಿ ಕಚೇರಿಗೆ (ಪಿಎಂಒ) ದೂರು ನೀಡಿದ್ದಾರೆ ಎಂದು 'ದ ಎಕನಾಮಿಕ್ ಟೈಮ್ಸ್' ವರದಿ ಮಾಡಿದೆ.

100ಕ್ಕೂ ಹೆಚ್ಚು ದೂರುಗಳು ಪ್ರಧಾನಿ ಕಚೇರಿಗೆ ಬಂದಿದ್ದು, ಕಾರ್ಮಿಕ ಸಚಿವಾಲಯಕ್ಕೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಲಾಗಿದೆ. ಮರಳಿ ತಮ್ಮನ್ನು ಉದ್ಯೋಗಕ್ಕೆ ತೆಗೆದುಕೊಳ್ಳುವಂತೆ ಭವಿಷ್ಯದಲ್ಲಿ ಇದೇ ರೀತಿ ಕೆಲಸದಿಂದ ತೆಗೆದುಹಾಕುವುದನ್ನು ತಡೆಯುವಂತೆ ಅವರೆಲ್ಲರೂ ಕೋರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ಫೋಸಿಸ್​​ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವುದು ಯುವ ಟೆಕ್ಕಿಗಳಿಗೆ ಹೆಮ್ಮೆಯ ಕ್ಷಣ. ಆದರೆ ಕೆಲವೇ ತಿಂಗಳುಗಳ ಬಳಿಕ ಆಂತರಿಕ ಮೌಲ್ಯಮಾಪನಗಳಲ್ಲಿ ವಿಫಲ ಎಂಬ ಕಾರಣ ನೀಡಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ದೂರುಗಳ ಸ್ವೀಕರಿಸಿದ ನಂತರ, ಕೇಂದ್ರ ಕಾರ್ಮಿಕ ಸಚಿವಾಲಯವು ಕರ್ನಾಟಕದ ಕಾರ್ಮಿಕ ಆಯುಕ್ತರಿಗೆ ಎರಡನೇ ನೋಟಿಸ್ ಕಳುಹಿಸಿದೆ. ಸಾಮೂಹಿಕ ವಜಾ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಫೆಬ್ರವರಿ 25ರಂದು ಪತ್ರ ಬರೆದಿದ್ದು ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇರುವುದರಿಂದ ಈ ಬಗ್ಗೆ ತನಿಖೆ ನಡೆಸುವಂತೆ ಕೋರಿದೆ.

ವಿಷಯವನ್ನು ಪರಿಶೀಲನೆ ನಡೆಸುವಂತೆ ಮತ್ತು ಪೀಡಿತ ಉದ್ಯೋಗಿಗಳು ಮತ್ತು ಕೇಂದ್ರ ಕಚೇರಿಗೆ ಮಾಹಿತಿ ನೀಡುವಂತೆ ಸಚಿವಾಲಯವು ರಾಜ್ಯ ಅಧಿಕಾರಿಗಳಿಗೆ ಹೇಳಿದೆ.

ಐಟಿ ಉದ್ಯೋಗಿಗಳ ಕಲ್ಯಾಣಕ್ಕಾಗಿ ಇರುವ ಸಂಘವಾದ, ಮಾಹಿತಿ ತಂತ್ರಜ್ಞಾನ ನೌಕರರ ಸೆನೆಟ್ (ಎನ್ಐಟಿಇಎಸ್) ಅಧ್ಯಕ್ಷ ಮತ್ತು ವಕೀಲ ಹರ್ಪ್ರೀತ್ ಸಿಂಗ್ ಸಲೂಜಾ ಅವರಿಗೂ ನೋಟಿಸ್ ಕಳುಹಿಸಲಾಗಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಸೆಲೆಕ್ಷನ್​ ಮೂಲಕ ನೇಮಕಗೊಂಡ ಸುಮಾರು 700 ನೌಕರರನ್ನು ಇನ್ಫೋಸಿಸ್ ಫೆಬ್ರವರಿ 7 ರಂದು ವಜಾಗೊಳಿಸಿದ್ದರು. ಅಲ್ಲಿಂದ ಸಮಸ್ಯೆ ಶುರುವಾಗಿತ್ತು.

ಇನ್ಫೋಸಿಸ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಉದ್ಯೋಗಿಗಳು ಆಂತರಿಕ ಮೌಲ್ಯಮಾಪನ ಕಾರ್ಯಕ್ರಮದಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದೆ. ಆದಾಗ್ಯೂ, ಕಾರ್ಯಕ್ಷಮತೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ 350 ಉದ್ಯೋಗಿಗಳನ್ನು ಮಾತ್ರ ಕಳುಹಿಸಲಾಗಿದೆ ಎಂದು ಹೇಳಿಕೊಂಡಿದೆ.

ವಜಾಗೊಂಡ ನೌಕರರು ಆಂತರಿಕ ಮೌಲ್ಯಮಾಪನಗಳ ನ್ಯಾಯಸಮ್ಮತತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗಳ ಮಟ್ಟವನ್ನು ಅನಿರೀಕ್ಷಿತವಾಗಿ ಹೆಚ್ಚಿಸಲಾಯಿತು ಎಂದು ಆರೋಪಿಸಿದ್ದಾರೆ.

"ನಮ್ಮ ಪರೀಕ್ಷಾ ಪ್ರಕ್ರಿಯೆಗಳನ್ನು ದಾಖಲೆಯಲ್ಲಿ ನಿರೂಪಿಸಲಾಗಿದೆ ಮತ್ತು ಎಲ್ಲಾ ತರಬೇತಿದಾರರಿಗೆ ಮೊದಲೇ ತಿಳಿಸಲಾಗಿದೆ" ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. .

"ಇನ್ಫೋಸಿಸ್​ಗೆ ಸೇರುವ ಪ್ರತಿಯೊಬ್ಬ ತರಬೇತಿದಾರ, ತಮ್ಮ ಅಪ್ರೆಂಟಿಸ್​ಶಿಪ್​ ಸ್ವೀಕರಿಸಿ ಅಪ್ರೆಂಟಿಸ್ಶಿಪ್ ನೋಂದಣಿ ಫಾರ್ಮ್ ಭರ್ತಿ ಮಾಡುತ್ತಾರೆ. ಆ ಬಗ್ಗೆ ತರಬೇತಿದಾರರಿಗೆ ಪೂರ್ವಭಾವಿಯಾಗಿ ತಿಳಿಸಲಾಗಿದೆ" ಎಂದು ಅದು ಹೇಳಿದೆ. 

Tags:    

Similar News