ಹಿಂದೂಗಳ ಸುರಕ್ಷತೆಗೆ 'ಕಠಿಣ' ಕ್ರಮ ಕೈಗೊಳ್ಳುವಂತೆ ಬಾಂಗ್ಲಾದೇಶಕ್ಕೆ ಭಾರತ ಆಗ್ರಹ

ಹಿಂದೂಗಳ ವಿರುದ್ಧದ ದುಷ್ಕೃತ್ಯದ ಹಿಂದೆ 'ಉಗ್ರಗಾಮಿ ಶಕ್ತಿಗಳು' ಇವೆ. ಅಂತಹ ವಿಷಯಗಳು ಕೋಮು ಉದ್ವಿಗ್ನತೆಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ;

Update: 2024-11-08 09:41 GMT
ರಣಧೀರ್ ಜೈಸ್ವಾಲ್ ಮಾಧ್ಯಮ ಗೋಷ್ಠಿ.

ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಒತ್ತು ನೀಡುವಂತೆ ಅಲ್ಲಿನ ಸರ್ಕಾರವನ್ನು ಭಾರತ ಒತ್ತಾಯಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂಗಳ ವಿರುದ್ಧ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಡುತ್ತಿರುವ ಹಿನ್ನೆಲೆಯಲ್ಲಿ ಚಿತ್ತಗಾಂಗ್‌ನಲ್ಲಿ ಉಂಟಾದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಲ್ಲಿನ ಹಿಂದೂಗಳ ಸುರಕ್ಷತೆಯ ವಿಚಾರವನ್ನು ಭಾರತ ಸ್ಮರಿಸಿದೆ. ಅಲ್ಲದೆ, ಸಮಸ್ಯೆ ಉಂಟು ಮಾಡುತ್ತಿರುವ "ಉಗ್ರಗಾಮಿ" ಕೃತ್ಯಗಳ ವಿರುದ್ಧ ʼಕಠಿಣʼ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಚಿತ್ತಗಾಂಗ್‌ನಲ್ಲಿ ಹಿಂದೂ ಸಮುದಾಯದ ಸದಸ್ಯರ ಮೇಲೆ ನಡೆದ ದಾಳಿಯನ್ನು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾಗುತ್ತಿರುವ "ಪ್ರಚೋದನಕಾರಿ ಪೋಸ್ಟ್‌ಗಳ " ಹಿನ್ನೆಲೆಯಲ್ಲಿ ಅಲ್ಲಿನ ಹಿಂದೂಗಳ ಜೀವನ ಸಮಸ್ಯಾತ್ಮಕವಾಗಿದೆ ಎಂದು ಅವರು ಹೇಳಿದ್ದಾರೆ.

"ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವೀಡಿಯೊಗಳು ಪ್ರಸಾರವಾಗುತ್ತಿರುವುದನ್ನು ನಾವು ನೋಡಿದ್ದೇವೆ. ಇದು ಖಂಡನೀಯ" ಎಂದು ಹೇಳಿದ ಜೈಸ್ವಾಲ್‌, ಆ ದೇಶದ ಅಲ್ಪಸಂಖ್ಯಾತರಿಗೆ ಭದ್ರತೆ ನೀಡುವುದು ಬಾಂಗ್ಲಾ ಆಡಳಿತದ ವಿಶೇಷ ಜವಾಬ್ದಾರಿ ಎಂದರು.

"ಚಿತ್ತಗಾಂಗ್‌ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಡಲಾಗುತ್ತಿದೆ. ಆ ಪ್ರಚೋದನಕಾರಿ ವಿಷಯಗಳು ಹಿಂದೂ ಸಮುದಾಯಕ್ಕೆ ಸಂಬಂಧಿಸಿದವು ಅದರಿಂದಾಗಿ. ಗಲಭೆ ಸಂಭವಿಸಿದ್ದು ಹಿಂದೂ ಸಮುದಾಯದ ಕೆಲವು ಸದಸ್ಯರನ್ನು ಬೆದರಿಸಲಾಗಿದೆ. ಅವರ ಆಸ್ತಿಗಳನ್ನು ಲೂಟಿ ಮಾಡಲಾಗಿದೆ" ಎಂದು ಜೈಸ್ವಾಲ್‌ ಆರೋಪಿಸಿದ್ದಾರೆ.

ಈ ದುಷ್ಕೃತ್ಯದ ಹಿಂದೆ 'ಉಗ್ರಗಾಮಿ ಶಕ್ತಿಗಳು' ಇವೆ. ಅಂತಹ ವಿಷಯಗಳು ಕೋಮು ಉದ್ವಿಗ್ನತೆಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಜೈಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ .

"ಉಗ್ರಗಾಮಿ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಕ್ರಮ ತೆಗೆದುಕೊಳ್ಳಲು ಮತ್ತು ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಜನರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಅಲ್ಲಿನ ಸರ್ಕಾರಕ್ಕೆ ನಮ್ಮ ವಿನಂತಿ" ಎಂದು ಅವರು ಹೇಳಿದರು.

ಕಾಳಿ ಮಂಟಪದ ಮೇಲೆ ದಾಳಿ

ಅಕ್ಟೋಬರ್ 12ರಂದು ಬಾಂಗ್ಲಾದೇಶದಲ್ಲಿ ಕಾಳಿ ದೇವಾಲಯದಲ್ಲಿ ಪೂಜಾ ಮಂಟಪದ ಮೇಲಿನ ದಾಳಿ ಮತ್ತು ಕಳ್ಳತನದ ವರದಿಯನ್ನು "ಗಂಭೀರ ಕಳವಳ" ಎಂದು ಭಾರತ ಹೇಳಿದೆ. ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದೆ.

ಅವಾಮಿ ಲೀಗ್‌ನ ವೆರಿಫೈಡ್ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡಲಾದ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್, ಶೇಖ್ ಹಸೀನಾ ಅವರು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ. ಅವರ ಹೆಸರಿನ ಮುಂದೆ 'ಪ್ರಧಾನಿ' ಎಂಬ ಪದ ಬಳಸಲಾಗಿದೆ.

ಸರ್ಕಾರ ವಿರೋಧಿ ಪ್ರತಿಭಟನೆಗಳ ನಂತರ ಅಧಿಕಾರ ಕಳೆದುಕೊಂಡ ಶೇಖ್‌ ಹಸೀನಾ ಆಗಸ್ಟ್ 5 ರಂದು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ನೆಲೆಸಿದ್ದರು.

ದೆಹಲಿ ಮೂಲದ ಥಿಂಕ್ ಟ್ಯಾಂಕ್ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ (ಐಸಿಡಬ್ಲ್ಯೂಎ) ಆಯೋಜಿಸಿರುವ ಕಾರ್ಯಾಗಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಕ್ರಮದ ವಿವರಗಳು ಮತ್ತು ಸಂದರ್ಭವನ್ನು ಹಂಚಿಕೊಂಡರು.

"ಭಾರತದ ಪ್ರಮುಖ ನೆರೆಯ ದೇಶವಾಗಿರುವ ಮ್ಯಾನ್ಮಾರ್‌ನ ಬೆಳವಣಿಗೆಗಳು ಶೈಕ್ಷಣಿಕ ಸಮುದಾಯ, ಚಿಂತಕರ ಚಾವಡಿಗಳು ಮತ್ತು ನಮ್ಮ ವ್ಯಾಪಾರ ಸಮುದಾಯ ಸೇರಿದಂತೆ ಇತರ ಪಾಲುದಾರರಿಗೆ ಆಸಕ್ತಿದಾಯಕ" ಎಂದು ಜೈಸ್ವಾಲ್ ಹೇಳಿದರು.

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ, ಶಾಂತಿ ಮತ್ತು ಸ್ಥಾಪನೆಗೆ ಭಾರತ ಬೆಂಬಲವಾಗುತ್ತಿದೆ ಎಂದು ಜೈಸ್ವಾಲ್‌ ಹೇಳಿದರು.

ಲಡಾಖ್‌ನಲ್ಲಿ ಎಲ್ಲವೂ ಸರಿಯಾಗಿದೆ

ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಇತ್ತೀಚೆಗೆ ಭಾರತ ಮತ್ತು ಚೀನಾದ ಪಡೆಗಳನ್ನು ಹಿಂತೆಗೆದುಕೊಂಡ ಕುರಿತು ಕೇಳಿದ ಪ್ರಶ್ನೆಗೆ ಜೈಸ್ವಾಲ್ ಅವರು, "ತಟಸ್ಥ ಧೋರಣೆ ಮುಂದುವರಿದಿದೆ. ಡೆಪ್ಸಾಂಗ್ ಮತ್ತು ಡೆಮ್ಚೋಕ್ ಎರಡರಲ್ಲೂ ಗಸ್ತು ಪ್ರಾರಂಭವಾಗಿದೆ. ಒಪ್ಪಂದದ ಪ್ರಕಾರ ಸ್ಥಳಗಳಲ್ಲಿ ಗಸ್ತು ಪ್ರಾರಂಭಿಸಲಾಗಿದೆ. ಅಲ್ಲೂ ಕೆಲವು ಅಡೆತಡೆಗಳಿವೆ ಎಂದು ಕೆಲವು ವರದಿಗಳು ಬಂದಿವೆ. ಆದರೆ ಆ ವರದಿಗಳು ಸರಿಯಾಗಿಲ್ಲ. ಭಾರತೀಯ ಸೇನೆಯು ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಭಾರತ-ಅಮೆರಿಕ ಆರ್ಥಿಕ ಸಂಬಂಧಗಳು ಮತ್ತು ಅದರಲ್ಲಿ ಅಸ್ತಿತ್ವದಲ್ಲಿರುವ ವಿಷಯಗಳ ಬಗ್ಗೆ ಮಾತನಾಡಿದ ಜೈಸ್ವಾಲ್, "ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ ಮತ್ತು ಆರ್ಥಿಕ ಸಂಬಂಧಗಳಲ್ಲಿ ಯಾವುದೇ ಸಮಸ್ಯೆಗಳು ಇದ್ದರೂ ಎರಡೂ ದೇಶಗಳು ಆಳವಾಗಿ ಚಿಂತಿಸಬೇಕು. ಪರಿಹಾರ ಕಂಡುಹಿಡಿಯಬೇಕು ಮತ್ತು ಅದರ ಮೇಲೆ ಕೆಲಸ ಮಾಡಲಾಗುವುದು" ಎಂದು ಹೇಳಿದರು.

ನಾವು ವಿಷಯಗಳ ಬಗ್ಗೆ ಮಾತುಕತೆ ನಡೆಸಲು ಬಯಸುತ್ತೇವೆ, ಆದ್ದರಿಂದ ನಮ್ಮ ಸಂಬಂಧಗಳು ಬಲಗೊಳ್ಳುತ್ತವೆ ಎಂದು ಜೈಸ್ವಾಲ್ ಹೇಳಿದರು.  

Tags:    

Similar News