ಮುಂದಿನ 1,000 ವರ್ಷಗಳ ಅಭಿವೃದ್ಧಿಗೆ ಬುನಾದಿ: ಪ್ರಧಾನಿ
21 ನೇ ಶತಮಾನದ ಇತಿಹಾಸದಲ್ಲಿ ಭಾರತದ ಸೌರ ಕ್ರಾಂತಿಯ ಅಧ್ಯಾಯವು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ ಎಂದು ಪ್ರಧಾನಿ ಹೇಳಿದರು.;
ಗಾಂಧಿನಗರ: ಭಾರತವು ವೈವಿಧ್ಯತೆ, ಗಾತ್ರ, ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ವಿಷಯದಲ್ಲಿ ವಿಶಿಷ್ಟವಾಗಿದೆ; ದೇಶವು 21 ನೇ ಶತಮಾನಕ್ಕೆ ಅತ್ಯುತ್ತಮ ಆಯ್ಕೆಯೆಂದು ಜಗತ್ತು ಭಾವಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.
ಗಾಂಧಿ ನಗರದಲ್ಲಿ ನಡೆದ 4 ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಮೇಳ ಮತ್ತು ಎಕ್ಸ್ ಪೋ(ರಿಇನ್ವೆಸ್ಟ್ 2024) ದಲ್ಲಿ ಮಾತನಾಡಿ, ʻ21 ನೇ ಶತಮಾನದ ಇತಿಹಾಸದಲ್ಲಿ ಭಾರತದ ಸೌರ ಕ್ರಾಂತಿಯ ಅಧ್ಯಾಯವು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ,ʼ ಎಂದು ಹೇಳಿದರು.
ʻಎನ್‌ಡಿಎ ತನ್ನ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ದೇಶದ ತ್ವರಿತ ಪ್ರಗತಿಗೆ ಪ್ರತಿಯೊಂದು ಕ್ಷೇತ್ರ ಮತ್ತು ಅಂಶಗಳನ್ನು ಬಗೆಹರಿಸಲು ಪ್ರಯತ್ನಿಸಿದೆ,ʼ ಎಂದು ಹೇಳಿದರು.
ʻಭಾರತ ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ಬುನಾದಿಯನ್ನು ಸಿದ್ಧಪಡಿಸುತ್ತಿದೆ. ಉನ್ನತ ಸ್ಥಾನ ತಲುಪುವುದು ಮಾತ್ರವಲ್ಲದೆ ಶ್ರೇಯಾಂಕವನ್ನು ಉಳಿಸಿಕೊಳ್ಳಲು ಗಮನವಹಿಸುತ್ತದೆ. ಮೊದಲ 100 ದಿನಗಳಲ್ಲಿ ನಮ್ಮ ಆದ್ಯತೆ, ವೇಗ ಮತ್ತು ಪ್ರಮಾಣವನ್ನು ನೀವು ಸಾಕ್ಷಿಯಾಗಬಹುದು,ʼ ಎಂದು ಹೇಳಿದರು.
ʻ2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಬೇಕಿರುವ ಇಂಧನ ಅಗತ್ಯಗಳ ಬಗ್ಗೆ ಅರಿವಿದೆ. ತನ್ನದೇ ಆದ ತೈಲ ಮತ್ತು ಅನಿಲ ಸಂಪನ್ಮೂಲ ಇಲ್ಲದೆ ಇರುವುದರಿಂದ, ಸೌರ, ಪವನ, ಪರಮಾಣು ಮತ್ತು ಜಲಶಕ್ತಿಯಿಂದ ತನ್ನ ಭವಿಷ್ಯವನ್ನು ರೂಪಿಸಲು ನಿರ್ಧರಿಸಿದೆ,ʼ ಎಂದು ಹೇಳಿದರು.
ʻಹಸಿರು ಭವಿಷ್ಯ ಮತ್ತು ಶೂನ್ಯ ಇಂಗಾಲ ಎನ್ನುವುದು ಅಲಂಕಾರಿಕ ಪದಗಳಲ್ಲ. ಇವು ದೇಶದ ಅವಶ್ಯಕತೆಗಳು ಮತ್ತು ಅದನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ. ಅಯೋಧ್ಯೆ ಮತ್ತು ಇತರ 16 ನಗರಗಳನ್ನು ಮಾದರಿ ಸೌರ ನಗರಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ,ʼ ಎಂದು ಹೇಳಿದರು.
ʻಕಡಲಾಚೆಯ ಹಸಿರು ಇಂಧನ ಯೋಜನೆಗಳಿಗೆ 7,000 ಕೋಟಿ ರೂ. ನಿಧಿ, 31,000 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆಗೆ 12,000 ಕೋಟಿ ರೂ. ಸೇರಿದಂತೆ ಹಸಿರು ಇಂಧನ ವಲಯದಲ್ಲಿ ಸರ್ಕಾರ ಹಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. 140 ಕೋಟಿ ಜನ ದೇಶವನ್ನು ಜಗತ್ತಿನ ಅತಿ ದೊಡ್ಡ ಆರ್ಥಿಕತೆಯಾಗಿಸಲು ಕೆಲಸ ಮಾಡುತ್ತಿದ್ದಾರೆ. ರಿಇನ್ವೆಸ್ಟ್ ಮೇಳ ದೊಡ್ಡ ದೃಷ್ಟಿ ಮತ್ತು ಧ್ಯೇಯದ ಭಾಗವಾಗಿದೆ. 2047ರೊಳಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಕ್ರಿಯಾಯೋಜನೆಯ ಭಾಗ,ʼ ಎಂದು ಪ್ರಧಾನಿ ಹೇಳಿದರು.
ʻಮೂರನೇ ಅವಧಿಯಲ್ಲಿ ಇನ್ನೂ ಮೂರು ಕೋಟಿ ಮನೆ ನಿರ್ಮಾಣ, 12 ಕೈಗಾರಿಕಾ ನಗರ, ಎಂಟು ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆ ಮತ್ತು 15 ಕ್ಕೂ ಹೆಚ್ಚು ಮೇಡ್-ಇನ್-ಇಂಡಿಯಾ ಸೆಮಿ-ಹೈ ಸ್ಪೀಡ್ ವಂದೇ ಭಾರತ್ ರೈಲಿಗೆ ಅನುಮೋದನೆ ನೀಡಲಾಗಿದೆ. ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಜೈವಿಕ ಉತ್ಪಾದನೆಗೆ ಹಲವು ಉಪಕ್ರಮಗಳಲ್ಲದೆ, 1 ಟ್ರಿಲಿಯನ್ ರೂ. ಸಂಶೋಧನೆ ನಿಧಿಯನ್ನು ಮೀಸಲಿಡಲಾಗಿದೆ,ʼ ಎಂದು ಹೇಳಿದರು.
ʻಗಡುವಿಗೆ ಒಂಬತ್ತು ವರ್ಷ ಮೊದಲೇ ಪ್ಯಾರಿಸ್‌ನ ಹವಾಮಾನ ಬದ್ಧತೆಗಳನ್ನು ಪೂರೈಸಿದ ಮೊದಲ ಜಿ 20 ದೇಶ ಭಾರತ.500 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿ ಸಾಧಿಸಲು ಕೆಲಸ ಮಾಡುತ್ತಿದೆ. ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆ ಮೂಲಕ 13 ದಶಲಕ್ಷ ಕುಟುಂಬಗಳು ಸೌರ ವಿದ್ಯುತ್ ಉತ್ಪಾದಿಸಲಿವೆ. ಅಯೋಧ್ಯೆ ಸೇರಿದಂತೆ 17 ನಗರಗಳನ್ನು ಸೌರ ನಗರಗಳಾಗಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ,ʼ ಎಂದು ಹೇಳಿದರು.
ನರೇಂದ್ರ ಮೋದಿ, ಭಾರತ 1000 ವರ್ಷಗಳ ತಯಾರಿ, ಗುಜರಾತ್, ಗಾಂಧಿನಗರನರೇಂದ್ರ ಮೋದಿ, ಭಾರತ 1000 ವರ್ಷಗಳ ತಯಾರಿ, ಗುಜರಾತ್, ಗಾಂಧಿನಗರ