ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಯತ್ನ: "ವಿಚಲಿತನಾಗುವುದಿಲ್ಲ" ಎಂದ ನ್ಯಾಯಮೂರ್ತಿ
ಮಧ್ಯಪ್ರದೇಶದ ಖಜುರಾಹೊದಲ್ಲಿರುವ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ವಿಗ್ರಹವನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಇತ್ತೀಚೆಗೆ ಸಿಜೆಐ ಗವಾಯಿ ನೇತೃತ್ವದ ಪೀಠ ವಜಾಗೊಳಿಸಿತ್ತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ
ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಆಘಾತಕಾರಿ ಘಟನೆಯೊಂದು ನಡೆದಿದೆ. ವಿಚಾರಣೆ ನಡೆಯುತ್ತಿದ್ದ ವೇಳೆ, ಹಿರಿಯ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ತಮ್ಮ ಶೂ ಎಸೆಯಲು ಯತ್ನಿಸಿದ್ದು, ನ್ಯಾಯಾಂಗದ ಪಾವಿತ್ರ್ಯತೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸೋಮವಾರ ಬೆಳಗ್ಗೆ, ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಸಾಂವಿಧಾನಿಕ ಪೀಠವು ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು. ಈ ವೇಳೆ, 71 ವರ್ಷದ ಹಿರಿಯ ವಕೀಲ ರಾಕೇಶ್ ಕಿಶೋರ್ ಎಂಬುವವರು ನ್ಯಾಯಾಧೀಶರ ವೇದಿಕೆಯ ಬಳಿ ಬಂದು, ತಮ್ಮ ಕಾಲಿನ ಶೂ ಕಳಚಿ, ಸಿಜೆಐ ಗವಾಯಿ ಅವರನ್ನು ಗುರಿಯಾಗಿಸಿ ಎಸೆಯಲು ಮುಂದಾದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ, ವಕೀಲನನ್ನು ತಡೆದು ವಶಕ್ಕೆ ಪಡೆದರು. ಈ ವೇಳೆ, "ಸನಾತನ ಧರ್ಮಕ್ಕೆ ಆದ ಅವಮಾನವನ್ನು ಸಹಿಸುವುದಿಲ್ಲ" ಎಂದು ವಕೀಲರು ಕೂಗಾಡಿದರು ಎಂದು ವರದಿಯಾಗಿದೆ.
ಈ ಅನಿರೀಕ್ಷಿತ ಘಟನೆಯಿಂದ ಸ್ವಲ್ಪವೂ ವಿಚಲಿತರಾಗದ ಸಿಜೆಐ ಗವಾಯಿ ಅವರು, ತಮ್ಮ ಆಸನದಲ್ಲಿ ಶಾಂತವಾಗಿ ಕುಳಿತು, "ಇಂತಹ ಘಟನೆಗಳಿಂದ ನೀವು ವಿಚಲಿತರಾಗಬೇಡಿ. ನಾನು ವಿಚಲಿತಗೊಳ್ಳುವುದಿಲ್ಲ. ಇದ್ಯಾವುದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ," ಎಂದು ಅಲ್ಲಿದ್ದ ಇತರ ವಕೀಲರಿಗೆ ತಿಳಿಸಿ, ಕಲಾಪವನ್ನು ಮುಂದುವರೆಸಿದರು.
ಘಟನೆಗೆ ಕಾರಣವೇನು?
ಮಧ್ಯಪ್ರದೇಶದ ಖಜುರಾಹೊದಲ್ಲಿರುವ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ವಿಗ್ರಹವನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಇತ್ತೀಚೆಗೆ ಸಿಜೆಐ ಗವಾಯಿ ನೇತೃತ್ವದ ಪೀಠ ವಜಾಗೊಳಿಸಿತ್ತು. ಈ ವೇಳೆ, "ಹೋಗಿ ದೇವರನ್ನೇ ಏನಾದರೂ ಮಾಡಲು ಕೇಳಿ" ಎಂದು ಸಿಜೆಐ ಹೇಳಿದ್ದರು ಎನ್ನಲಾದ ಮಾತು, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಹೇಳಿಕೆಯೇ ವಕೀಲರ ಆಕ್ರೋಶಕ್ಕೆ ಕಾರಣವಾಗಿರಬಹುದು ಎಂದು 'ಬಾರ್ ಆ್ಯಂಡ್ ಬೆಂಚ್' ವರದಿ ಮಾಡಿದೆ. ಆದರೆ, ನಂತರ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದ ಸಿಜೆಐ, "ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ" ಎಂದು ಹೇಳಿದ್ದರು.
ತೀವ್ರ ಖಂಡನೆ ಮತ್ತು ಶಿಸ್ತು ಕ್ರಮ
ಈ ಘಟನೆಯನ್ನು ಭಾರತೀಯ ಬಾರ್ ಕೌನ್ಸಿಲ್ ತೀವ್ರವಾಗಿ ಖಂಡಿಸಿದ್ದು, ವಕೀಲ ರಾಕೇಶ್ ಕಿಶೋರ್ ಅವರನ್ನು ವಕೀಲಿ ವೃತ್ತಿಯಿಂದ ವಜಾಗೊಳಿಸಿ, ಶಿಸ್ತು ಕ್ರಮ ಕೈಗೊಂಡಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಘಟನೆಯನ್ನು ಖಂಡಿಸಿ, "ಪ್ರತಿಯೊಂದು ಘಟನೆಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅತಿರೇಕದ ಪ್ರತಿಕ್ರಿಯೆಗಳು ಬರುತ್ತಿವೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು, ಈ ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸುವಂತೆ ಮತ್ತು ಎಲ್ಲಾ ನ್ಯಾಯಾಧೀಶರು ಒಗ್ಗಟ್ಟಿನಿಂದ ಇದನ್ನು ಖಂಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, "ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲಿನ ಈ ಕೃತ್ಯವು, ಮನುವಾದಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಕಿಡಿಗೇಡಿ ವಕೀಲನನ್ನು ತಕ್ಷಣ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು," ಎಂದು ಒತ್ತಾಯಿಸಿದ್ದಾರೆ.