ಬಿಹಾರ ಚುನಾವಣೆ | ಚುನಾವಣಾ ಕಣಕ್ಕೆ ಗಾಯಕಿ ಮೈಥಿಲಿ ಠಾಕೂರ್?

ತಮ್ಮ ಗಾಯನದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡುವ ಮೈಥಿಲಿ ಠಾಕೂರ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿವೆ.

Update: 2025-10-08 08:22 GMT

ಮೈಥಿಲಿ ಠಾಕೂರ್

Click the Play button to listen to article

ಬಿಹಾರದ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗದ ದಿನಾಂಕ ಘೋಷಣೆ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿಯ ಚುನಾವಣಾ ಅಖಾಡಕ್ಕೆ ಖ್ಯಾತ ಜಾನಪದ ಗಾಯಕಿ ಮೈಥಿಲಿ ಠಾಕೂರ್  ಇಳಿಯಲಿದ್ದಾರೆ ಎಂಬ ಸುದ್ದಿ ಸಂಚಲನ ಮೂಡಿಸಿದೆ.  ಈಚೆಗೆ ಕೇಂದ್ರ ಸಚಿವ ನಿತ್ಯಾನಂದ್ ರಾಯ್ ಅವರ ಭೇಟಿ ಹಾಗೂ ಬಿಹಾರ ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೆ ಅವರೊಂದಿಗೆ ಸಭೆ ನಡೆಸಿದ ಬಳಿಕ ಮೈಥಿಲಿ ಠಾಕೂರ್‌ ಸ್ಪರ್ಧೆಯ ವಿಚಾರ ಹರಿದಾಡುತ್ತಿದೆ.  ತಮ್ಮ ಗಾಯನದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡುವ ಮೈಥಿಲಿ ಠಾಕೂರ್ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿದೆ.  

ಯಾರು ಈ ಮೈಥಿಲಿ ಠಾಕೂರ್‌?

ಮೈಥಿಲಿ ಠಾಕೂರ್ ಬಿಹಾರದ ಪ್ರಸಿದ್ಧ ಜಾನಪದ ಗಾಯಕಿ. ಕೇವಲ 25 ವರ್ಷ ವಯಸ್ಸಿನ ಇವರು, ಚಿಕ್ಕ ವಯಸ್ಸಿಗೆ ಕೋಟಿ ರೂ.ಗಳ ಒಡತಿ. ಮೈಥಿಲಿ ಠಾಕೂರ್ ಬಿಹಾರದ ಮಧುಬನಿ ಜಿಲ್ಲೆಯ ಬೆನಿಪಟ್ಟಿ ಗ್ರಾಮದಲ್ಲಿ ಜನಿಸಿದರು. ದೆಹಲಿಯಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದರು. ಬಾಲ್ಯದಿಂದಲೇ ಹಾಡುವ ಹವ್ಯಾಸ ಹೊಂದಿದ್ದ ಮೈಥಿಲಿ ಇಂದು ಪ್ರಸಿದ್ಧ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. 

ಯೂಟ್ಯೂಬ್‌ನಲ್ಲಿ ವೃತ್ತಿ ಜೀವನದ ಆರಂಭ 

ಗಾಯಕಿ ಮೈಥಿಲಿ ಠಾಕೂರ್ ಅವರು "ದಿ ರೈಸಿಂಗ್ ಸ್ಟಾರ್" ಕಾರ್ಯಕ್ರಮದ ಮೂಲಕ ಜನಮನ್ನಣೆ ಪಡೆದಿದ್ದಾರೆ.  ಯೂಟ್ಯೂಬ್‌ಗೆ ತಾವು ಹಾಡುವ ವಿಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದರು, ಇದರಿಂದ ಅತಿ ಕಡಿಮೆ ಸಮಯದಲ್ಲೇ ಪ್ರಸಿದ್ಧ ಜಾನಪದ ಗಾಯಕರಾಗಿ ಹೊರಹೊಮ್ಮಿದರು.  ಅವರ ಹಾಡಿನ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸುತ್ತಿವೆ.

ಪ್ರತಿ ಕಾರ್ಯಕ್ರಮಕ್ಕೆ ಲಕ್ಷಗಟ್ಟಲೇ ಸಂಭಾವನೆ ಪಡೆಯುತ್ತಾರೆ. ತಿಂಗಳಿಗೆ ಕನಿಷ್ಠ 12-15 ಕಾರ್ಯಕ್ರಮ ನೀಡುತ್ತಾರೆ. ಇದಲ್ಲದೆ, ಅವರು ಪ್ರತಿ ಕಾರ್ಯಕ್ರಮಕ್ಕೆ 5 ರಿಂದ 7 ಲಕ್ಷ ರೂಪಾಯಿ ಪಡೆಯುತ್ತಾರೆ. ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಮೈಥಿಲಿ ಠಾಕೂರ್, ನಾನು ನನ್ನ ಹಳ್ಳಿಯಿಂದ ಸ್ಪರ್ಧಿಸಲು ಬಯಸುತ್ತೇನೆ. ನನಗೆ ಅಲ್ಲಿ ವಿಶೇಷ ಸಂಪರ್ಕವಿದೆ. ಅಲ್ಲಿಂದ ಪ್ರಾರಂಭಿಸುವುದು ನನಗೆ ಕಲಿಕೆಯ ಅನುಭವ ನೀಡುತ್ತದೆ ಎಂದು ತಿಳಿಸಿದ್ದರು. ಆದರೂ ಈವರೆಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.

ಮೈಥಿಲಿ ಠಾಕೂರ್ ಯಾವ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ? ಎನ್ನುವ ಪ್ರಶ್ನೆಗೆ ಹಲವರು ಬಿಜೆಪಿಯತ್ತ ಬೊಟ್ಟು ಮಾಡುತ್ತಿದ್ದಾರೆ. ತನ್ನ ಸಿದ್ಧಾಂತವು ಒಂದು ಪಕ್ಷದೊಂದಿಗೆ ಹೊಂದಿಕೆಯಾಗುತ್ತದೆ. ನೀವು ನನ್ನ ಚಿತ್ರಗಳನ್ನು ನೋಡಿರಬೇಕು. ನೀವು ನನ್ನ ಹಾಡುಗಳನ್ನು ಕೇಳಿರಬೇಕು. ನನಗೆ ಸನಾತನ ಧರ್ಮದ ಬಗ್ಗೆ ಬಲವಾದ ಒಲವಿದೆ. ಆದ್ದರಿಂದ, ನೀವು ಅರ್ಥಮಾಡಿಕೊಳ್ಳಬಹುದು. ಎರಡು ದಿನಗಳಲ್ಲಿ ನನ್ನ ನಿರ್ಧಾರ ತಿಳಿಸಲಾಗುವುದು ಎಂದು ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರಿಂದ ತಾನು ಆಳವಾಗಿ ಪ್ರಭಾವಿತಳಾಗಿದ್ದೇನೆ ಎಂದು ಮೈಥಿಲಿ ಈ ಹಿಂದೆ ತಿಳಿಸಿದ್ದರಿಂದ ಬಿಜೆಪಿಯಿಂದಲೇ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ . 

ಎರಡು ಹಂತದಲ್ಲಿ ಚುನಾವಣೆ 

ಬಿಹಾರದ ರಾಜಕೀಯ ಅಖಾಡಕ್ಕೆ ವೇದಿಕೆ ಸಜ್ಜಾಗಿದ್ದು, ಚುನಾವಣಾ ಆಯೋಗವು ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದೆ. 243 ಸದಸ್ಯ ಬಲದ ವಿಧಾನಸಭೆಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತವು ನವೆಂಬರ್ 6 ರಂದು ಮತ್ತು ಎರಡನೇ ಹಂತವು ನವೆಂಬರ್ 11 ರಂದು ನಡೆಯಲಿದೆ. ಎಲ್ಲಾ ಮತಗಳ ಎಣಿಕೆಯು ನವೆಂಬರ್ 14 ರಂದು ನಡೆಯಲಿದೆ.

Tags:    

Similar News