ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಭೀಕರ ಅಗ್ನಿ ದುರಂತ: ಟ್ಯಾಂಕರ್‌ಗೆ ಲಾರಿ ಡಿಕ್ಕಿ, ಸಿಲಿಂಡರ್‌ಗಳ ಸರಣಿ ಸ್ಫೋಟ

ಮಂಗಳವಾರ ರಾತ್ರಿ, ರಸ್ತೆ ಬದಿಯ ಹೋಟೆಲ್ ಬಳಿ ನಿಲ್ಲಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗಳ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಒಂದರ ನಂತರ ಒಂದರಂತೆ ಸಿಲಿಂಡರ್‌ಗಳು ಸ್ಫೋಟಗೊಳ್ಳಲು ಆರಂಭಿಸಿವೆ.

Update: 2025-10-08 03:56 GMT

ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸರಣಿ ಸ್ಫೋಟಗಳು ಸಂಭವಿಸಿವೆ. ದೂದು ಪ್ರದೇಶದ ಬಳಿ ನಡೆದ ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಹಲವು ಗಂಟೆಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಮಂಗಳವಾರ ರಾತ್ರಿ, ರಸ್ತೆ ಬದಿಯ ಹೋಟೆಲ್ ಬಳಿ ನಿಲ್ಲಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗಳ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಒಂದರ ನಂತರ ಒಂದರಂತೆ ಸಿಲಿಂಡರ್‌ಗಳು ಸ್ಫೋಟಗೊಳ್ಳಲು ಆರಂಭಿಸಿವೆ. ಸ್ಫೋಟದ ತೀವ್ರತೆಗೆ ಸಿಲಿಂಡರ್‌ಗಳು ಹಲವು ಮೀಟರ್‌ಗಳ ದೂರಕ್ಕೆ ಚಿಮ್ಮಿ ಬಿದ್ದಿವೆ. ಕಿಲೋಮೀಟರ್‌ಗಟ್ಟಲೆ ದೂರದವರೆಗೂ ಬೆಂಕಿಯ ಜ್ವಾಲೆ ಮತ್ತು ಸ್ಫೋಟದ ಸದ್ದು ಕೇಳಿಸಿದೆ. ಘಟನೆಯಲ್ಲಿ ಸುಮಾರು ಏಳು ವಾಹನಗಳು ಬೆಂಕಿಗಾಹುತಿಯಾಗಿವೆ.

ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರ ನಿರ್ದೇಶನದ ಮೇರೆಗೆ ಉಪಮುಖ್ಯಮಂತ್ರಿ ಪ್ರೇಮ್ ಚಂದ್ ಬೈರವಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. "ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ, ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಆದರೆ, ಎರಡೂ ವಾಹನಗಳ ಚಾಲಕರು ಮತ್ತು ಕ್ಲೀನರ್‌ಗಳು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ," ಎಂದು ಅವರು ತಿಳಿಸಿದ್ದಾರೆ.

ಜೈಪುರ ಐಜಿ ರಾಹುಲ್ ಪ್ರಕಾಶ್ ಅವರ ಪ್ರಕಾರ, ಟ್ಯಾಂಕರ್ ಚಾಲಕ ಸೇರಿದಂತೆ ಎರಡರಿಂದ ಮೂರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದೇ ಹೆದ್ದಾರಿಯ ಭಾಂಕ್ರೋಟಾ ಬಳಿ ಎಲ್‌ಪಿಜಿ ಟ್ಯಾಂಕರ್ ಮತ್ತು ಟ್ರಕ್ ನಡುವೆ ನಡೆದಿದ್ದ ಭೀಕರ ಅಪಘಾತದಲ್ಲಿ 19 ಜನರು ಮೃತಪಟ್ಟಿದ್ದರು ಎಂಬುದು ಕಾಕತಾಳೀಯ 

Tags:    

Similar News