ಹಿಮಾಚಲ ಪ್ರದೇಶದಲ್ಲಿ ಭೂಕುಸಿತ : 15 ಮಂದಿ ಸಾವು
ಕುಲ್ಲು ದಸರಾ ಉತ್ಸವದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ, ತಡರಾತ್ರಿ ಬಿಲಾಸ್ ಪುರ ತಲುಪಿ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದರು.
ಹಿಮಾಚಲ ಪ್ರದೇಶದ ಬಿಲಾಸ್ ಪುರ ಜಿಲ್ಲೆಯಲ್ಲಿ ಖಾಸಗಿ ಬಸ್ ಮೇಲೆ ಗುಡ್ಡದ ಒಂದು ಭಾಗ ಕುಸಿದು ಕನಿಷ್ಠ 15 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಬಸ್ಸಿನಲ್ಲಿದ್ದ ಇನ್ನೂ ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಬರ್ಥಿನ್ ಸಮೀಪದ ಭಾಲುಘಾಟ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮಾರುಟನ್‌ನಿಂದ ಫುಮಾರ್ವಿನ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಸುಮಾರು 25 ಪ್ರಯಾಣಿಕರಿದ್ದರು.
ಗುಡ್ಡ ಕುಸಿದು ಬಸ್ ಸಂಪೂರ್ಣವಾಗಿ ಮಣ್ಣಿನಡಿ ಹೂತು ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಲ್ಲಿಯವರೆಗೆ ನಕ್, ಆರವ್, ಸಂಜೀವ್, ವಿಮ್ಲಾ, ಕಮಲೇಶ್, ಕಾಂತಾ ದೇವಿ, ಅಂಜನಾ, ಬಕ್ಷಿ ರಾಮ್, ನರೇಂದ್ರ ಶರ್ಮಾ, ಕ್ರಿಶನ್ ಲಾಲ್, ಚುನಿ ಲಾಲ್, ರಜನೀಶ್, ಸೋನು, ಷರೀಫ್ ಖಾನ್ ಮತ್ತು ಪ್ರವೀಣ್ ಕುಮಾರ್ ಸೇರಿದಂತೆ 15 ಮಂದಿಯ ಶವಗಳನ್ನು ಹೊರತೆಗೆಯಲಾಗಿದೆ. ಒಂದು ಮಗು ಸೇರಿದಂತೆ ಇನ್ನೂ ಕೆಲವು ಮಂದಿ ಅವಶೇಷಗಳ ಅಡಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಗಾಯಾಳುಗಳನ್ನು ಬಿಲಾಸ್ಪುರದ ಎಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಲ್ಲು ದಸರಾ ಉತ್ಸವದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ, ತಡರಾತ್ರಿ ಬಿಲಾಸ್ ಪುರ ತಲುಪಿ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದರು.
“ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಪರಿಣಾಮ ಬೆಟ್ಟ ಕುಸಿದಿದೆ ಎನ್ನಲಾಗಿದೆ.ಘಟನೆ ಕುರಿತಂತೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ,” ಎಂದು ಡಿಸಿಎಂ ತಿಳಿಸಿದ್ದಾರೆ.
“ಹಿಮಾಚಲ ಪ್ರದೇಶವು ಗುಡ್ಡಗಾಡು ರಾಜ್ಯವಾಗಿದ್ದು, ಅನೇಕ ರಸ್ತೆಗಳು, ಸೇತುವೆಗಳು ಮತ್ತು ಸುರಂಗಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಅಭಿವೃದ್ಧಿ ಮಾದರಿ ಪರಿಸರ ಸುಸ್ಥಿರವಾಗಿದೆಯೇ ಎಂಬುದನ್ನು ಮರುಪರಿಶೀಲಿಸುವ ಅಗತ್ಯವಿದೆ,” ಎಂದು ಹೇಳಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆಹೆಚ್ಚಾಗುವ ಸಾಧ್ಯತೆ ಇದೆ.