ಹತ್ರಾಸ್ ಕಾಲ್ತುಳಿತ: ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಯಾರು?

ಪೊಲೀಸ್ ಪೇದೆ ಆಗಿದ್ದ ಸೂರಜ್‌ಪಾಲ್, ಜನಪ್ರಿಯ ಧಾರ್ಮಿಕ ಬೋಧಕ ನಾರಾಯಣ್ ಸಾಕಾರ್ ಹರಿ ಅಥವಾ ಭೋಲೆ ಬಾಬಾ ಆಗಿ ಪರಿವರ್ತಿತರಾದರು. ಬಿಳಿ ಸೂಟ್ ಅಥವಾ ಬಿಳಿ ಕುರ್ತಾ ಧರಿಸುತ್ತಿದ್ದರು. ಅವರ ಸತ್ಸಂಗದಲ್ಲಿ ಪಾಲ್ಗೊಂಡಿದ್ದ 121 ಮಂದಿ ಕಾಲ್ತುಳಿತದಿಂದ ಪ್ರಾಣ ಕಳೆದುಕೊಂಡರು.;

Update: 2024-07-03 13:09 GMT

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ನಾರಾಯಣ್ ಸಾಕಾರ್ ಹರಿ ಅಥವಾ ಭೋಲೆ ಬಾಬಾ ಮಂಗಳವಾರ ನಡೆಸಿದ ಸತ್ಸಂಗದಲ್ಲಿ ಪಾಲ್ಗೊಂಡಿದ್ದ 121 ಮಂದಿ ಕಾಲ್ತುಳಿತದಿಂದ ಪ್ರಾಣ ಕಳೆದುಕೊಂಡರು. ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡಿದೆ. ಇಷ್ಟಕ್ಕೂ ಇಡೀ ಪ್ರಕರಣಕ್ಕೆ ಕಾರಣನಾದ ಹಾಗೂ ಈಗ ತಲೆಮರೆಸಿಕೊಂಡಿರುವ ಭೋಲೆ ಬಾಬಾ ಯಾರು? ಒಬ್ಬ ಮಾಜಿ ಪೊಲೀಸ್‌ ಪೇದೆ!!

ಪ್ರಸ್ತುತ ತಲೆಮರೆಸಿಕೊಂಡಿರುವ ನಾರಾಯಣ್ ಸಾಕಾರ್ ಹರಿ ಅಥವಾ ಭೋಲೆ ಬಾಬಾ, ಹತ್ರಾಸ್‌ನಲ್ಲಿ ಧಾರ್ಮಿಕ ಸಭೆಯ ನೇತೃತ್ವ ವಹಿಸಿದ್ದ ಸ್ವಯಂ ಘೋಷಿತ ದೇವಮಾನವ. ಅಧ್ಯಾತ್ಮಿಕತೆಗೆ ತಿರುಗಿದ ಮಾಜಿ ಪೊಲೀಸ್.

ತನ್ನ ಸಭೆಗೆ ಹಿರಿಯ ರಾಜಕೀಯ ನಾಯಕರನ್ನೂ ಆಕರ್ಷಿಸುವ ಅವರು, ಕೇಸರಿ ವಸ್ತ್ರ ತೊಡುವುದಿಲ್ಲ. ಪ್ರಚಾರ ಬಯಸದ, ಸಾಮಾಜಿಕ ಮಾಧ್ಯಮಗಳಲ್ಲಿಯೂ ಇರಲಿಲ್ಲ. ಭಕ್ತರ ದೊಡ್ಡ ವೃಂದ ಹೊಂದಿದ್ದರೂ, ಅವರ ಜೀವನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ಮತ್ತು ಮುಚ್ಚಿಡಲಾಗಿದೆ ಎಂದು ತೋರುತ್ತದೆ. 

ಬಿಳಿ ಸೂಟ್ ಅಥವಾ ಬಿಳಿ ಕುರ್ತಾವನ್ನು ಧರಿಸುವ ಅವರು ಮಾಧ್ಯಮಗಳಿಂದ ದೂರವಿದ್ದು, ಕಾರ್ಯನಿರ್ವಹಿಸುತ್ತಿದ್ದರು. ಹಾಗಾದರೆ, ಇಷ್ಟು ಜನರ ಜೀವಕ್ಕೆ ಕುತ್ತು ತಂದ ಈ ಛಾಯಾರೂಪಿ ಯಾರು? 

ಬಾಬಾ ಹಿನ್ನೆಲೆ

ಭೋಲೆ ಬಾಬಾ ಅವರ ನಿಜ ನಾಮಧೇಯ ಸೂರಜ್‌ಪಾಲ್. ಕಸ್ಗಂಜ್ ಜಿಲ್ಲೆಯ ಬಹದ್ದೂರ್ ನಗರದವರಾಗಿದ್ದು,ರೈತನ ಮಗ. ಯುಪಿ ಪೊಲೀಸ್‌ಗೆ ಸೇರಿದ ಅವರು ಎರಡು ದಶಕಗಳ ಕಾಲ ಗುಪ್ತಚರ ಘಟಕದಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದರು ಎಂದು ವರದಿಗಳು ತಿಳಿಸಿವೆ. 

1999 ರಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಅವರು, ತಮ್ಮ ಹೆಸರನ್ನು ನಾರಾಯಣ್ ಸಾಕಾರ್ ಹರಿ ಎಂದು ಬದಲಾಯಿಸಿಕೊಂಡು, ಸತ್ಸಂಗ (ಧಾರ್ಮಿಕ ಧರ್ಮೋಪದೇಶ)ಗಳನ್ನು ನಡೆಸಲು ಪ್ರಾರಂಭಿಸಿದರು. ಅಧ್ಯಾತ್ಮಿಕತೆ ಮತ್ತು ವಿಶ್ವಶಾಂತಿಯತ್ತ ಒಲವು ತೋರಿದರು ಮತ್ತು ಅಧ್ಯಾತ್ಮಿಕ ಮಾರ್ಗದಲ್ಲಿ ನಡೆಯಲು ಕೆಲಸವನ್ನು ತ್ಯಜಿಸಿದೆ ಎಂದು ಭಕ್ತರಿಗೆ ತಿಳಿಸಿದರು.

ಅವರಿಗೆ ಮಕ್ಕಳಿಲ್ಲ. ಪತ್ನಿ ಪ್ರೇಮ್ ಬತಿ ಅವರನ್ನು ಎಲ್ಲ ಕಾರ್ಯಕ್ರಮಕ್ಕೂ ಕರೆದುಕೊಂಡು ಹೋಗುತ್ತಾರೆ; ಆಕೆ ಸತ್ಸಂಗದಲ್ಲಿ ಬಾಬಾ ಪಕ್ಕದಲ್ಲಿ ಕುಳಿತ ಚಿತ್ರಗಳಿವೆ. ಸೂರಜ್‌ಪಾಲ್ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು.

ಸೂರಜ್‌ಪಾಲ್ ಅವರ ಮೂವರು ಸಹೋದರರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಟ್ರಸ್ಟ್ ಸ್ಥಾಪಿಸಿ, ಅವರ ಆಶ್ರಮವಿರುವ ಬಹದ್ದೂರ್‌ಗಢದ ಲ್ಲಿರುವ ಆಸ್ತಿಗೆ ಕೇರ್‌ಟೇಕರ್ ನ್ನು ನೇಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸತ್ಸಂಗಗಳಲ್ಲಿ ಅನುಯಾಯಿಗಳು ನೀಡುವ ಹಣವನ್ನು ಹಂಚುತ್ತೇನೆ ಎಂದು ಹೇಳಿಕೊಳ್ಳುತ್ತಾರೆ.

ಅನುಯಾಯಿಗಳು ಯಾರು?

ಉತ್ತರ ಪ್ರದೇಶ, ರಾಜಸ್ಥಾನದ ಬ್ರಜ್ ‌ಪ್ರಾಂತ್ಯದ ಆಗ್ರಾ ಮತ್ತು ಅಲಿಗಢ ಪ್ರದೇಶಗಳಲ್ಲಿ ಗಣನೀಯ ಅನುಯಾಯಿಗಳನ್ನು ಹೊಂದಿದ್ದಾರೆ. ಹೆಚ್ಚಿನವರು ಬಡವರು. ಸಾಮಾಜಿಕ ಮಾಧ್ಯಮದಲ್ಲಿ ಉಪಸ್ಥಿತಿಯನ್ನು ಹೊಂದಿರದಿದ್ದರೂ, ಫೇಸ್‌ಬುಕ್ ಮತ್ತು ಯುಟ್ಯೂಬ್ ನಲ್ಲಿ ಉಪದೇಶಗಳ ವಿಡಿಯೋ ಇದೆ ಮತ್ತು ಮುಂಬರುವ ಸತ್ಸಂಗ ಕುರಿತು ವಿವರಗಳಿವೆ. ಮಾನವ ಸಂಕಟವನ್ನು ನಿವಾರಿಸುವ ಅವರ ಆರೋಪಿತ ದೈವಿಕ ಶಕ್ತಿಯ ಉಲ್ಲೇಖಗಳು ಇವೆ. ಉದ್ಯಮವನ್ನು ಪ್ರಾರಂಭಿಸಲು ಪಡೆದ 4 ಲಕ್ಷ ರೂ.ಸಾಲ ಪಾವತಿಸಲು ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಲಾಗಿದೆ. 

ಬಹದ್ದೂರ್ ನಗರದಲ್ಲಿ ಆಶ್ರಮವನ್ನು ಸ್ಥಾಪಿಸಿದ ನಂತರ, ಭೋಲೆ ಬಾಬಾ ಖ್ಯಾತಿ ಬಡವರು ಮತ್ತು ವಂಚಿತ ವರ್ಗಗಳಲ್ಲಿ ವೇಗವಾಗಿ ಬೆಳೆಯಿತು. ಲಕ್ಷಾಂತರ ಜನರು ಅವರ ಅನುಯಾಯಿಗಳಾದರು.

ಮಂಗಳವಾರದಂದು ನಡೆಯುವ ಅವರ ಸತ್ಸಂಗದಲ್ಲಿ ಸಂಸದರು ಮತ್ತು ಶಾಸಕರು ಭಾಗವಹಿಸುತ್ತಾರೆ ಎನ್ನಲಾಗಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ ಅವರಿಂದ ಹಿಡಿದು ರಾಜಸ್ಥಾನದ ಉಪಮುಖ್ಯಮಂತ್ರಿ ಪ್ರೇಮ್ ಚಂದ್ ಬೈರ್ವಾ, ಅವರ ಸಭೆಗಳಿಗೆ ಹಾಜರಾಗುತ್ತಾರೆ. ಅವರ ಬೆಂಗಾವಲು ಪಡೆಯನ್ನು ಸ್ಥಳಕ್ಕೆ ಕರೆದೊಯ್ಯಲು ಪೊಲೀಸ್ ವಾಹನಗಳಿವೆ. 

ಬೋಧನೆಗಳು

ಅವರ ಸತ್ಸಂಗಕ್ಕೆ ಬರುವ ಜನಸಮೂಹವನ್ನು ನಿಯಂತ್ರಿಸಲು ʻನಾರಾಯಣಿ ಸೇನಾʼ ಎಂಬ ಹೆಸರಿನ ಭದ್ರತಾ ತಂಡವಿದೆ. ಪುರುಷರು ಮತ್ತು ಮಹಿಳಾ ಸಿಬ್ಬಂದಿಗಳಿರುವ ಈ ತಂಡ, ಆಶ್ರಮದಿಂದ ಸತ್ಸಂಗದ ಸ್ಥಳಗಳಿಗೆ ಅವರನ್ನು ಕರೆದೊಯ್ಯುತ್ತದೆ. ಹತ್ರಾಸ್‌ನ ವ್ಯಕ್ತಿಯೊಬ್ಬರು ಹೇಳಿದರು, ʻಬಾಬಾ ಅವರು ಸತ್ಸಂಗ ನಡೆಸುತ್ತಾರೆ. ಭದ್ರತೆಗೆ ತಮ್ಮದೇ ಸ್ವಯಂಸೇವಕರನ್ನು ಇರಿಸುತ್ತಾರೆ,ʼ

ತಾನು ಯಾವುದೇ 'ಗುರು'ಗಳ ಅನುಯಾಯಿ ಅಲ್ಲ. ನೇರವಾಗಿ ದೇವರಿಂದ ಉಪದೇಶ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಅವರ ಮಾತುಕತೆ ಮಾನವೀಯತೆ, ಭ್ರಾತೃತ್ವ, ಎಲ್ಲಾ ಜೀವಿಗಳಿಗೆ ಗೌರವ ಮತ್ತು ಅಹಿಂಸೆ ಬಗ್ಗೆ ಇರುತ್ತದೆ.

ಅವರ ಅನುಯಾಯಿಗಳ ಪ್ರಕಾರ, ಬಾಬಾ ಕೇವಲ ದೇವಮಾನವ ಅಥವಾ ಗುರು ಅಲ್ಲ; ಸ್ವತಃ ದೇವರು.

ವಿವಾದ

ಹಲವು ಚಾನಲ್‌ಗಳು ಮುಂಬರುವ ಕಾರ್ಯಕ್ರಮಗಳ ಬಗ್ಗೆ ಮತ್ತು ಅವರ ಸತ್ಸಂಗಗಳಿಗೆ ಪ್ರವೇಶ ಪಡೆಯಲು ಸ್ಲಾಟ್ ಅನ್ನು ಹೇಗೆ ಕಾಯ್ದಿರಿಸಬೇಕು ಎಂಬ ಮಾಹಿತಿ ನೀಡುತ್ತಿವೆ. ಈ ಸ್ವಯಂ ಘೋಷಿತ ದೇವಮಾನವ ಕೋವಿಡ್ ಉತ್ತುಂಗದಲ್ಲಿದ್ದಾಗ ದೊಡ್ಡ ವಿವಾದಕ್ಕೆ ಸಿಲುಕಿಕೊಂಡಿದ್ದರು. 2022 ರಲ್ಲಿ ಯುಪಿಯ ಫರೂಕಾಬಾದ್‌ನ ಹತ್ರಾಸ್‌ನಲ್ಲಿ ಸತ್ಸಂಗ ನಡೆಸಿದರು. ಜಿಲ್ಲಾಡಳಿತ ಕೇವಲ 50 ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಿದ್ದರೂ, 50,000 ಕ್ಕೂ ಹೆಚ್ಚು ಜನ ಕಾರ್ಯಕ್ರಮ ಕ್ಕೆ ಆಗಮಿಸಿದ್ದರು. ಜನಸಂದಣಿಯಿಂದ ವಾಹನದಟ್ಟಣೆ ಉಂಟಾಯಿತು ಮತ್ತು ಕೋವಿಡ್ ಹರಡುವಿಕೆಯ ಕಳವಳ ಮೂಡಿಸಿತು.

Tags:    

Similar News