ಹತ್ರಾಸ್ ಕಾಲ್ತುಳಿತ: ನ್ಯಾಯಾಂಗ ತನಿಖೆಗೆ ಆದೇಶ; ತನಿಖೆಗೆ ಸಿದ್ಧ ಎಂದ ಭೋಲೆ ಬಾಬಾ

ಪುಲ್ಹಾರಿ ಗ್ರಾಮದ ಬಳಿ ಮಂಗಳವಾರ ಸತ್ಸಂಗ ಆಯೋಜಿಸಿದ್ದವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕೇವಲ 80,000 ಜನರ ಸಭೆ ನಡೆಸಲು ಅನುಮತಿ ಪಡೆದು, 2.5 ಲಕ್ಷ ಜನರನ್ನು ಸ್ಥಳದಲ್ಲಿ ಸೇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.;

Update: 2024-07-04 06:44 GMT
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹತ್ರಾಸ್ ಕಾಲ್ತುಳಿತದಲ್ಲಿ ಗಾಯಗೊಂಡ ಮಹಿಳೆಯನ್ನು ಭೇಟಿಯಾದರು.

ಉತ್ತರ ಪ್ರದೇಶದ ಹತ್ರಾಸ್ ಕಾಲ್ತುಳಿತ ದುರಂತದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.

121 ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ಹಿಂದೆ `ಪಿತೂರಿ' ಇರುವ ಸಾಧ್ಯತೆಯನ್ನು ತನಿಖೆ ಪರಿಶೀಲಿಸಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. 

ಭೋಲೆ ಬಾಬಾ ತನಿಖೆಗೆ ಸಿದ್ಧ: ಪುಲ್ಹಾರಿ ಗ್ರಾಮದ ಬಳಿ ಮಂಗಳವಾರ ಸತ್ಸಂಗ ಆಯೋಜಿಸಿದ್ದವರ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಕೇವಲ 80,000 ಜನರ ಸಭೆ ನಡೆಸಲು ಅನುಮತಿ ಪಡೆದು, 2.5 ಲಕ್ಷ ಜನರನ್ನು ಸ್ಥಳಕ್ಕೆ ಸೇರಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಕಾಲ್ತುಳಿತದ ಕುರಿತು ತನಿಖೆ ನಡೆಸುತ್ತಿರುವ ರಾಜ್ಯ ಸರ್ಕಾರ ಮತ್ತು ಪೊಲೀಸರೊಂದಿಗೆ ಸಹಕರಿಸಲು ಅಬಾ ಸಿದ್ಧರಿದ್ದಾರೆ ಎಂದು ಸತ್ಸಂಗ ಬೋಧಕ ಭೋಲೆ ಬಾಬಾ ಅವರ ವಕೀಲ ಎ.ಪಿ. ಸಿಂಗ್ ಹೇಳಿದ್ದಾರೆ. ʻಕೆಲವು ಸಮಾಜ ವಿರೋಧಿ ಶಕ್ತಿಗಳು ಸಂಚು ರೂಪಿಸಿವೆ,ʼ ಎಂದು ಅವರು ಹೇಳಿದರು. 

ಮಂಗಳವಾರ ತಡರಾತ್ರಿ ಸಿಕಂದ್ರಾ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಮುಖ್ಯ ಸೇವಾದಾರ ದೇವಪ್ರಕಾಶ್ ಮಧುಕರ್ ಮತ್ತು ಇತರ ಸಂಘಟಕರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಜಗತ್ ಗುರು ಸಾಕಾರ್ ವಿಶ್ವಹರಿ ಭೋಲೆ ಬಾಬಾ ಅವರ ಹೆಸರು ಪಟ್ಟಿಯಲ್ಲಿಲ್ಲ. 

ನ್ಯಾಯಾಂಗ ತನಿಖಾ ತಂಡದಲ್ಲಿ ನಿವೃತ್ತ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಇರುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು. ʻಘಟನೆ ಅಪಘಾತವಲ್ಲದಿದ್ದರೆ, ಯಾರ ಪಿತೂರಿ? ಈ ಎಲ್ಲವನ್ನೂ ತನಿಖೆ ಮಾಡಲಾಗುವುದು, ʼಎಂದು ಅವರು ಹತ್ರಾಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನ್ಯಾಯಾಲಯದಲ್ಲಿ 2 ಅರ್ಜಿ ಸಲ್ಲಿಕೆ: ದುರಂತ ಕುರಿತು ಬುಧವಾರ ನ್ಯಾಯಾಲಯದಲ್ಲಿ ಕನಿಷ್ಠ ಎರಡು ಅರ್ಜಿ ಸಲ್ಲಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಐವರು ಸದಸ್ಯರ ತಜ್ಞರ ಸಮಿತಿಯನ್ನು ನೇಮಿಸುವಂತೆ ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ಮತ್ತೊಂದು ಪಿಐಎಲ್ ಸಲ್ಲಿಕೆಯಾಗಿದ್ದು, ಕೇಂದ್ರೀಯ ತನಿಖಾ ದಳ(ಸಿಬಿಐ)ದೀಮದ ತನಿಖೆಗೆ ಕೋರಿದೆ. 

ಆದರೆ, ಮುಖ್ಯಮಂತ್ರಿ ಹೇಳಿಕೆ ಮತ್ತು ಎಫ್‌ಐಆರ್ ಸ್ಥಳೀಯ ಆಡಳಿತಕ್ಕೆ ಕ್ಲೀನ್ ಚಿಟ್ ನೀಡುವಂತಿದೆ. ಸತ್ಸಂಗದ ವ್ಯವಸ್ಥೆ ನೋಡಿಕೊಳ್ಳುವ ಸೇವಾದಾರರ ಮೇಲೆ ಆರೋಪ ಹೊರಿಸಿದೆ. 

ಆಯೋಜಕರು ಕಾರ್ಯಕ್ರಮಕ್ಕೆ ಬಂದವರ ನೈಜ ಸಂಖ್ಯೆಯನ್ನು ಮರೆಮಾಚಲು ಸಾಕ್ಷ್ಯಗಳನ್ನು ಮರೆಮಾಚಿದ್ದಾರೆ ಮತ್ತು ಭಕ್ತರ ಚಪ್ಪಲಿ ಹಾಗೂ ಇತರ ವಸ್ತುಗಳನ್ನು ಹತ್ತಿರದ ಹೊಲಗಳಲ್ಲಿ ಎಸೆದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. 

ಪೊಲೀಸರು ಮತ್ತು ಸ್ಥಳೀಯ ಆಡಳಿತ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ; ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕಳುಹಿಸಿದರು. ಆದರೆ, ಸಂಘಟಕರು ಮತ್ತು ಸೇವಾದಾರರು ಸಹಕರಿಸಲಿಲ್ಲ ಎಂದು ಎಫ್‌ಐಆರ್ ನಲ್ಲಿದೆ. 

ಎಫ್‌ಐಆರ್ ಮತ್ತು ಸಿಕಂದ್ರಾ ರಾವ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರ ಪ್ರಾಥಮಿಕ ವರದಿ ಪ್ರಕಾರ, ಭೋಲೆ ಬಾಬಾ ಸ್ಥಳದಿಂದ ತೆರಳಿದ ಬಳಿಕ ಕಾಲ್ತುಳಿತ ಸಂಭವಿಸಿದೆ.

ಬಾಬಾ ದರ್ಶನಕ್ಕೆ ಮತ್ತು ಅವರು ನಡೆದ ಸ್ಥಳದಿಂದ ಸ್ವಲ್ಪ ಮಣ್ಣು ಸಂಗ್ರಹಿಸಲು ಜನರು ನುಗ್ಗಿದರು. ಅವರನ್ನು ಸೇವಾದಾರರು ತಳ್ಳಿದರು. ಹೆದ್ದಾರಿ ಪಕ್ಕದ ಇಳಿಜಾರಿನಲ್ಲಿ ಹಲವರು ಜಾರಿ ಬಿದ್ದರು ಎಂದು ಎಸ್‌ಡಿಎಂ ವರದಿ ತಿಳಿಸಿದೆ.

ಎಫ್‌ಐಆರ್‌ನಲ್ಲಿ ಬಾಬಾ ಹೆಸರೇಕೆ ಇಲ್ಲ?: ಸೇವಾದಾರರು ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು ಎಂದು ಸಿಎಂ ಹೇಳಿದರು. ಜನ ಸಾಯುತ್ತಿದ್ದರೂ, ಸೇವಾದಾರರು ಓಡಿಹೋದರು ಎಂದು ಹೇಳಿದರು.

ʻಎಫ್‌ಐಆರ್‌ನಲ್ಲಿ ಬಾಬಾ ಹೆಸರು ಏಕೆ ಇಲ್ಲʼ ಎಂಬ ಪ್ರಶ್ನೆಗೆ ಉತ್ತರಿಸಿದ ಆದಿತ್ಯನಾಥ್, ʻಕಾರ್ಯಕ್ರಮಕ್ಕೆ ಅನುಮತಿಗೆ ಅರ್ಜಿ ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಕಾರಣರಾದವ ಎಲ್ಲರೂ ಅದರ ವ್ಯಾಪ್ತಿಗೆ ಬರುತ್ತಾರೆ,ʼ ಎಂದರು.

ಆಗ್ರಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅನುಪಮ್ ಕುಲಶ್ರೇಷ್ಠ ನೇತೃತ್ವದಲ್ಲಿ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ.

ಉಸಿರುಕಟ್ಟುವಿಕೆಯಿಂದ ಸಾವು ಸಂಭವಿಸಿದೆ ಎಂದು ಇಟಾಹ್ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 (ಅಪರಾಧೀಯ ನರಹತ್ಯೆ) 110 (ನರಹತ್ಯೆ ಯತ್ನ), 223 ( ಸಾರ್ವಜನಿಕ ಸೇವಕರ ಆದೇಶಕ್ಕೆ ಅವಿಧೇಯತೆ) ಮತ್ತು 238 (ಸಾಕ್ಷ್ಯ ನಾಶ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

Tags:    

Similar News