ಹತ್ರಾಸ್ ಕಾಲ್ತುಳಿತ: ಸಂಘಟಕರ ವಿರುದ್ಧ ಎಫ್ಐಆರ್; ಯುಪಿ ಸಿಎಂ ಇಂದು ಭೇಟಿ ಸಾಧ್ಯತೆ

ಹತ್ರಾಸ್ ಜಿಲ್ಲೆಯಲ್ಲಿ ನಾರಾಯಣ ಸಾಕಾರ್ ವಿಶ್ವ ಹರಿ ಎಂದೇ ಖ್ಯಾತರಾಗಿರುವ ಭೋಲೆ ಬಾಬಾರವರ ಸತ್ಸಂಗ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರು.;

Update: 2024-07-03 06:27 GMT

ಹತ್ರಾಸ್‌ ಕಾಲ್ತುಳಿತ ಘಟನೆಯಲ್ಲಿ ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಬುಧವಾರ (ಜುಲೈ 3) ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕಾಲ್ತುಳಿತದಿಂದ 116 ಜನರು ಸಾವನ್ನಪ್ಪಿದ್ದಾರೆ. 

ಮಂಗಳವಾರ ತಡರಾತ್ರಿ (ಜುಲೈ 2) ಸಿಕಂದರ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ʻಮುಖ್ಯ ಸೇವಾದಾರʼ ದೇವಪ್ರಕಾಶ್ ಮಧುಕರ್ ಮತ್ತು ಇತರ ಸಂಘಟಕರನ್ನು ಹೆಸರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 105 (ಅಪರಾಧೀಯ ನರಹತ್ಯೆ), 110 (ನರಹತ್ಯೆ ಯತ್ನ), 126 (2) (ನಿರ್ಬಂಧದಲ್ಲಿ ಲೋಪ), 223 (ಸಾರ್ವಜನಿಕ ಅಧಿಕಾರಿಯ ಆದೇಶಕ್ಕೆ ಅವಿಧೇಯತೆ), 238 (ಸಾಕ್ಷ್ಯ ಕಣ್ಮರೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು. 

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ (ಜುಲೈ 3) ಹತ್ರಾಸ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

24 ಗಂಟೆಗಳ ಒಳಗೆ ವರದಿ ಸಲ್ಲಿಕೆ: ಘಟನೆಗೆ ಕಾರಣದ ಬಗ್ಗೆ ತನಿಖೆ ನಡೆಸಲು ಎಡಿಜಿ ಆಗ್ರಾ ಮತ್ತು ಅಲಿಗಢ ವಿಭಾಗೀಯ ಆಯುಕ್ತರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. 24 ಗಂಟೆಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಸರ್ಕಾರ ಮಂಗಳವಾರ (ಜುಲೈ 2) ಹೇಳಿಕೆಯಲ್ಲಿ ತಿಳಿಸಿದೆ. 

ಮಂಗಳವಾರ (ಜುಲೈ 2) ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್, ಸರ್ಕಾರ ಘಟನೆಯ ಆಳಕ್ಕೆ ಇಳಿದು ಸಂಚುಕೋರರು ಮತ್ತು ಹೊಣೆಗಾರರಿಗೆ ಸೂಕ್ತ ಶಿಕ್ಷೆ ನೀಡುತ್ತದೆ. ರಾಜ್ಯ ಸರ್ಕಾರ ಘಟನೆಯ ತನಿಖೆ ನಡೆಸುತ್ತಿದೆ. ಘಟನೆ ಅಪಘಾತ ವೋ ಅಥವಾ ಪಿತೂರಿಯೋ ಎಂದು ಪರಿಶೀಲಿಸುತ್ತೇವೆ,ʼ ಎಂದರು.

ದುರಂತದಲ್ಲೂ ರಾಜಕೀಯ ಮಾಡುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ʻಇಂತಹ ಘಟನೆಯಲ್ಲಿ ರಾಜಕೀಯ ಮಾಡುವುದು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಸಂತ್ರಸ್ತರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಬೇಕಿದೆ. ಸರ್ಕಾರ ಪ್ರಕರಣದಲ್ಲಿ ಭಾಗಿಯಾದ ಯಾವುದೇ ಅಪರಾಧಿಗಳನ್ನು ಬಿಡುವುದಿಲ್ಲ,ʼ ಎಂದರು.

ಹತ್ರಾಸ್ ಜಿಲ್ಲೆಯಲ್ಲಿ ನಾರಾಯಣ ಸಾಕಾರ್ ವಿಶ್ವ ಹರಿ ಎಂದು ಪ್ರಸಿದ್ಧರಾದ ಭೋಲೆ ಬಾಬಾ ಅವರ ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ನೀಡಿದ ಅನುಮತಿಗಿಂತ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ದುರಂತ ಇದಾಗಿದ್ದು, 116 ಮಂದಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಮೃತದೇಹಗಳು ರಾಶಿಯಾಗಿ ಬಿದ್ದಿವೆ.

Tags:    

Similar News