ಹತ್ರಾಸ್ ಕಾಲ್ತುಳಿತ: 6 ಅಧಿಕಾರಿಗಳು ಅಮಾನತು

ಕಾಲ್ತುಳಿತಕ್ಕೆ ಸತ್ಸಂಗದ ಸಂಘಟಕರೇ ಹೊಣೆ. ಸ್ಥಳೀಯ ಪೊಲೀಸರು ಮತ್ತು ಆಡಳಿತ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಎಸ್‌ಐಟಿ ವರದಿ ಹೇಳಿದೆ.

Update: 2024-07-09 08:43 GMT
ಹತ್ರಾಸ್ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಸದಸ್ಯರ ಅಂತಿಮ ವಿಧಿಯನ್ನು ಕುಟುಂಬದವರು ನೆರವೇರಿಸಿದರು

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಸತ್ಸಂಗದಲ್ಲಿ 121 ಮಂದಿ ಸಾವಿಗೀಡಾಗಲು ಜನದಟ್ಟಣೆ ಮತ್ತು ಜನಸಂದಣಿ ನಿರ್ವಹಣೆಯಲ್ಲಿನ ಲೋಪವೇ ಮುಖ್ಯ ಕಾರಣ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. 

ಕಾಲ್ತುಳಿತಕ್ಕೆ ಸತ್ಸಂಗದ ಸಂಘಟಕರನ್ನು ಹೊಣೆಗಾರರನ್ನಾಗಿಸಿದೆ. ಸ್ಥಳೀಯ ಪೊಲೀಸರು ಮತ್ತು ಆಡಳಿತ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ಹಿರಿಯ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಲು ವಿಫಲವಾಗಿದೆ ಎಂದು ಎಸ್‌ಐಟಿ ವರದಿ ಹೇಳಿದೆ. 

ವರದಿ ಆಧರಿಸಿ ಉಪವಿಭಾಗಾಧಿಕಾರಿ (ಎಸ್‌ಡಿಎಂ), ವೃತ್ತಾಧಿಕಾರಿ, ತಹಸೀಲ್ದಾರ್ ಮತ್ತು ಇತರ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 

ವರದಿ ಸಲ್ಲಿಕೆ: ಉತ್ತರ ಪ್ರದೇಶ ಗೃಹ ಇಲಾಖೆಗೆ ಎಸ್‌ಐಟಿ ವರದಿಯನ್ನು ಮಂಗಳವಾರ (ಜುಲೈ 9) ಸಲ್ಲಿಸಲಾಗಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಗ್ರಾ) ಅನುಪಮ್ ಕುಲಶ್ರೇಷ್ಠ ಮತ್ತು ಅಲಿಗಢ ವಿಭಾಗೀಯ ಆಯುಕ್ತರಾದ ವಿ.ಚೈತ್ರಾ ಅವರು ಪೊಲೀಸರು ಸೇರಿದಂತೆ 128 ಸಾಕ್ಷಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಈ ತೀರ್ಮಾನಕ್ಕೆ  ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ವರದಿಯು ಕಾಲ್ತುಳಿತದ ಹಿಂದಿನ ʻದೊಡ್ಡ ಪಿತೂರಿʼ ಯನ್ನು ತಳ್ಳಿಹಾಕಿಲ್ಲ ಮತ್ತು ಸಂಪೂರ್ಣ ತನಿಖೆಗೆ ಶಿಫಾರಸು ಮಾಡಿದೆ. 

ಒಂಬತ್ತು ಮಂದಿ ಬಂಧನ: ಜುಲೈ 2 ರಂದು ಫುಲ್ರೈ ಗ್ರಾಮದಲ್ಲಿ ಭೋಲೆ ಬಾಬಾ ಎಂದು ಜನಪ್ರಿಯವಾಗಿರುವ ನಾರಾಯಣ್ ಸಾಕಾರ್ ಹರಿ ಅವರ ಸತ್ಸಂಗಕ್ಕೆ ಅಂದಾಜು 2.5 ಲಕ್ಷ ಜನರು ಆಗಮಿಸಿದ್ದು, ಕಾಲ್ತುಳಿತ ದುರಂತ ಸಂಭವಿಸಿತು. ಕಾರ್ಯಕ್ರಮದ ಆಯೋಜಕರು 80,000 ಮಂದಿಯನ್ನು ಸೇರಿಸಲು ಅನುಮತಿ ಪಡೆದಿದ್ದರು. ಆದರೆ, ಭಾರೀ ಸಂಖ್ಯೆಯಲ್ಲಿ ಜನ ಸೇರಿದರು. 

ಕಾರ್ಯಕ್ರಮದ ಮುಖ್ಯ ಸಂಘಟಕ ದೇವಪ್ರಕಾಶ್ ಮಧುಕರ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ಭೋಲೆ ಬಾಬಾ ನಾಪತ್ತೆಯಾಗಿದ್ದಾರೆ. 

ಪಿತೂರಿ ಶಂಕೆ?: ಆದರೆ, ಘಟನೆಗೆ ಸಂಬಂಧಿಸಿದಂತೆ ಸಲ್ಲಿಸಿದ ಎಫ್‌ಐಆರ್‌ ನಲ್ಲಿ ಭೋಲೆ ಬಾಬಾ ಹೆಸರು ಇರಲಿಲ್ಲ. ಅವರು ಅಧಿಕಾರಿಗಳೊಂದಿಗೆ ಸಹಕರಿಸಲು ಸಿದ್ಧ ಎಂದು ವಕೀಲ ಎ.ಪಿ. ಸಿಂಗ್ ಹೇಳಿದರು. ಪಿತೂರಿ ನಡೆದಿದೆ. ಅಪರಿಚಿತರು ಕಾರ್ಯಕ್ರಮದಲ್ಲಿ ವಿಷ ಎರಚಿದರು; ಕಾಲ್ತುಳಿತವನ್ನು ಪ್ರಚೋದಿಸಿದರು ಎಂದು ದೂರಿದ್ದರು.

ಭೋಲೆ ಬಾಬಾ ನಿರ್ಗಮಿಸುತ್ತಿದ್ದಾಗ ಕಾಲ್ತುಳಿತ ಸಂಭವಿಸಿದೆ; ಅವರ ಅನುಯಾಯಿಗಳು ಪಾದದ ಧೂಳು ಸಂಗ್ರಹಿಸಲು ಧಾವಿಸಿದರು ಎಂದು ವರದಿಯಾಗಿತ್ತು.

ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಹೇಮಂತ್ ರಾವ್ ನೇತೃತ್ವದ ಪ್ರತ್ಯೇಕ ನ್ಯಾಯಾಂಗ ಆಯೋಗ ಪ್ರಕರಣ ಕುರಿತು ತನಿಖೆ ನಡೆಸುತ್ತಿದೆ.

Tags:    

Similar News