ಗುಜರಾತ್: ಮಹಾಮಳೆಗೆ ಒಂದು ವಾರದಲ್ಲಿ 49 ಜೀವ ಹಾನಿ

Update: 2024-09-04 13:20 GMT

ಅಹಮದಾಬಾದ್: ಗುಜರಾತ್‌ನಲ್ಲಿ ಸುರಿದ ಭಾರಿ ಮಳೆಯಿಂದ ಕಳೆದ ಒಂದು ವಾರದಲ್ಲಿ 49 ಜನರು ಸಾವನ್ನಪ್ಪಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಸೇನೆ ಸೇರಿದಂತೆ ಹಲವು ಏಜೆನ್ಸಿಗಳು 37,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಗುಜರಾತ್‌ನ ಹಲವಾರು ಪ್ರದೇಶಗಳಲ್ಲಿ ಆಗಸ್ಟ್ 25 ರಿಂದ 30 ರ ನಡುವೆ ಅತಿ ಹೆಚ್ಚು ಮಳೆ ಸುರಿದಿದೆ. ಗುಜರಾತ್-ರಾಜಸ್ಥಾನದ ಗಡಿಯಲ್ಲಿ ಸೃಷ್ಟಿಯಾದ ಹವಾಮಾನ ಕುಸಿತವು ಕ್ರಮೇಣ ಚಂಡಮಾರುತ ಅಸ್ನಾ ಆಗಿ ಮಾರ್ಪಟ್ಟಿತು ಎಂದು ರಾಜ್ಯ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ಹೇಳಿದ್ದಾರೆ. 

ಈ ಅವಧಿಯಲ್ಲಿ ಸಿಡಿಲು, ಗೋಡೆ ಕುಸಿತ ಮತ್ತು ನೀರಿನಲ್ಲಿ ಮುಳುಗಿ 49 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ(ಎಸ್‌ಇಒಸಿ)ದಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

ʻಮೃತ 22 ಮಂದಿ ಸಂಬಂಧಿಕರಿಗೆ 4 ಲಕ್ಷ ರೂ. ಪರಿಹಾರ ನೀಡಲಾಗಿದೆ. 2,618 ಜಾನುವಾರುಗಳ ಮಾಲೀಕರಿಗೆ 1.78 ಕೋಟಿ ರೂ. ವಿತರಿಸಲಾಗಿದೆ,ʼ ಎಂದು ಹೇಳಿದರು. 

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) 17 ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) 27 ತಂಡಗಳು, ಸೇನೆಯ ಒಂಬತ್ತು ಕಾಲಂಗಳು ಮತ್ತು ಐಎಎಫ್ ಮತ್ತು ಕೋಸ್ಟ್ ಗಾರ್ಡ್‌ನ ಹೆಚ್ಚುವರಿ ತಂಡಗಳು ಕಾರ್ಯ ನಿರ್ವಹಿಸಿವೆ. 

4,673 ಮನೆಗಳು ಮತ್ತು ಗುಡಿಸಲುಗಳ ಮಾಲೀಕರಿಗೆ 3.67 ಕೋಟಿ ರೂ. ವಿತರಿಸಲಾಗಿದೆ. ವಡೋದರಾ, ಸೂರತ್, ರಾಜ್‌ಕೋಟ್, ಆನಂದ್, ಕಚ್, ಖೇಡಾ, ಗಾಂಧಿನಗರ, ಜಾಮ್‌ನಗರ, ದೇವಭೂಮಿ ದ್ವಾರಕಾ, ನರ್ಮದಾ, ನವಸಾರಿ, ಪೋರಬಂದರ್, ಮೋರ್ಬಿ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ 1,120 ತಂಡಗಳು ಸಮೀಕ್ಷೆ ನಡೆಸುತ್ತಿವೆ. ಈ ಜಿಲ್ಲೆಗಳ 1.69 ಲಕ್ಷ ಜನರಿಗೆ 8.04 ಕೋಟಿ ರೂ. ಹಾಗೂ 50,111 ಸಂತ್ರಸ್ತ ಕುಟುಂಬಗಳಿಗೆ 20.07 ಕೋಟಿ ರೂ. ಮನೆ ಮತ್ತು ಬಟ್ಟೆ ವಿತರಿಸಲಾಗಿದೆ ಎಂದು ಹೇಳಿದರು. 

ಮುಂದಿನ ವಾರ ಗುಜರಾತಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಚ್ ಪ್ರದೇಶದಲ್ಲಿ ಶೇ.179, ಸೌರಾಷ್ಟ್ರ ಶೇ. 125 ಮತ್ತು ದಕ್ಷಿಣ ಗುಜರಾತ್ ಶೇ.117 ಮಳೆ ಆಗಿದೆ.

Tags:    

Similar News