ದ್ವಿದಳ ಧಾನ್ಯಗಳ ಮೇಲಿನ ಲಾಭದ ಪ್ರಮಾಣ ಕಡಿತಗೊಳಿಸುವಂತೆ ಸೂಚನೆ

Update: 2024-07-16 13:58 GMT

ಕಳೆದ ಒಂದು ತಿಂಗಳಲ್ಲಿ ಪ್ರಮುಖ ಸಗಟು ಮಾರುಕಟ್ಟೆಗಳಲ್ಲಿ ತೊಗರಿ, ಉದ್ದು ಬೆಲೆ ಶೇ. 4 ರಷ್ಟು ಕುಸಿತದಿದ್ದರೂ, ಚಿಲ್ಲರೆ ಬೆಲೆ ಇಳಿಕೆ ಯಾಗಿಲ್ಲ ಎಂದಿರುವ ಸರ್ಕಾರ, ಚಿಲ್ಲರೆ ವ್ಯಾಪಾರಿಗಳು ಬೆಲೆ ಇಳಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಬೇಕೆಂದು ಹೇಳಿದೆ. ವದಂತಿ ಹರಡುವಿಕೆ ಮತ್ತು ಲಾಭಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಚಿಲ್ಲರೆ ವ್ಯಾಪಾರಿಗಳ ಸಂಘದೊಂದಿಗೆ ಸಭೆ: ನವದೆಹಲಿಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯು ದೇಶದ ಚಿಲ್ಲರೆ ವ್ಯಾಪಾರಿಗಳ ಸಂಘ(ಆರ್‌ಎಐ) ದೊಂದಿಗೆ ಬೇಳೆಕಾಳುಗಳ ಬೆಲೆ ಸನ್ನಿವೇಶವನ್ನು ಚರ್ಚಿಸಲು ಜುಲೈ 16ರಂದು ಸಭೆಯನ್ನು ಆಯೋಜಿಸಿತ್ತು. ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ನಿಧಿ ಖರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೊಗರಿ ಮತ್ತು ಕಡಲೆ ದಾಸ್ತಾನು ಮಿತಿ ಅನುಸರಣೆಯನ್ನು ಪರಿಶೀಲಿಸಲಾಯಿತು.

ಸಭೆಯಲ್ಲಿ ರಿಲಯನ್ಸ್‌ ರಿಟೇಲ್, ಡಿಮಾ‌ರ್ಟ್‌, ಟಾಟಾ ಸ್ಟೋರ್ಸ್‌, ಸ್ಪೆನ್ಸರ್ಸ್‌, ಆರ್‌ ಎಸ್‌ ಪಿಜಿ, ಮತ್ತು ವಿ ಮಾರ್ಟ್‌ ಪ್ರತಿನಿಧಿಗಳು ಭಾಗವಹಿಸಿದ್ದರು. ಆರ್‌ಎಐ 2,300 ಕ್ಕೂ ಹೆಚ್ಚು ಸದಸ್ಯರನ್ನು ಹಾಗೂ ದೇಶಾದ್ಯಂತ 6,00,000 ಚಿಲ್ಲರೆ ಮಳಿಗೆಗಳನ್ನು ಹೊಂದಿದೆ. 

ʻಕಳೆದ ಒಂದು ತಿಂಗಳಲ್ಲಿ ಪ್ರಮುಖ ಮಂಡಿಗಳಲ್ಲಿ ತೊಗರಿ, ಉದ್ದಿನ ಬೆಲೆ ಶೇ.4 ರಷ್ಟು ಕಡಿಮೆಯಾಗಿದೆ. ಆದರೆ, ಚಿಲ್ಲರೆ ಬೆಲೆ ಅಷ್ಟು ಕಡಿಮೆಯಾಗಿಲ್ಲ,ʼ ಖರೆ ತಿಳಿಸಿದರು. ʻಸಗಟು ಮಂಡಿ ಬೆಲೆ ಮತ್ತು ಚಿಲ್ಲರೆ ಅಂಗಡಿ ಬೆಲೆ ನಡುವಿನ ವ್ಯತ್ಯಾಸವನ್ನು ಗಮನಿಸಿದರೆ, ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಲಾಭಾಂಶ ಪಡೆಯುತ್ತಿದ್ದಾರೆ ಎಂದು ತೋರುತ್ತದೆ,ʼ ಎಂದು ಹೇಳಿದ್ದಾರೆ. 

ಗ್ರಾಹಕರಿಗೆ ಬೇಳೆಕಾಳು ಬೆಲೆ ಕೈಗೆಟಕುವಂತೆ ಮಾಡುವ ಪ್ರಯತ್ನಗಳಲ್ಲಿ ಸರ್ಕಾರಕ್ಕೆ ಎಲ್ಲ ಬೆಂಬಲವನ್ನು ನೀಡುವಂತೆ ಖರೆ ಚಿಲ್ಲರೆ ಉದ್ಯಮವನ್ನು ಕೇಳಿಕೊಂಡರು.

ʻಚಿಲ್ಲರೆ ವ್ಯಾಪಾರಿಗಳು ತಮ್ಮ ಲಾಭಾಂಶದಲ್ಲಿ ಅಗತ್ಯ ಹೊಂದಾಣಿಕೆ ಮಾಡಿಕೊಂಡು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಬೇಳೆಕಾಳು ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದಾಗಿ ಭರವಸೆ ನೀಡಿದರು,ʼ ಎಂದು ಹೇಳಿಕೆ ತಿಳಿಸಿದೆ.

ಸಂಗ್ರಹದ ಮೇಲ್ವಿಚಾರಣೆ: ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಎಲ್ಲಾ ಸ್ಟಾಕ್ ಹೋಲ್ಡಿಂಗ್ ಘಟಕಗಳ ಸಂಗ್ರಹವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಹಾಲಿ ಋತುವಿನಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯ ಸದೃಢವಾಗಿದೆ ಎಂದು ಖರೆ ಹೇಳಿದರು. 

Tags:    

Similar News