Viral video: ಟಾರ್ಗೆಟ್ ರೀಚ್ ಆಗದ ಉದ್ಯೋಗಿಗಳ ಕುತ್ತಿಗೆಗೆ ಬೆಲ್ಟ್ ಹಾಕಿ ನಾಯಿಯಂತೆ ನಡೆಸಿದ ಕಂಪನಿ!: ವಿಡಿಯೋ ವೈರಲ್

ಉದ್ಯೋಗಿಯ ಕುತ್ತಿಗೆಗೆ ಬೆಲ್ಟ್ ಕಟ್ಟಿ ಮೊಣಕಾಲುಗಳ ಮೇಲೆ ತೆವಳಿಸುತ್ತಿರುವುದು, ಗುರಿ ತಲುಪದ ಉದ್ಯೋಗಿಗಳನ್ನು ನಾಯಿಗಳಂತೆ ನಡೆಸುವುದು, ನೆಲದ ಮೇಲಿರುವ ನಾಣ್ಯಗಳನ್ನು ನೆಕ್ಕಿಸುವುದು, ಬಟ್ಟೆ ಬಿಚ್ಚಿಸುವುದು ಮತ್ತು ಇತರ ಅವಮಾನಕರ ಶಿಕ್ಷೆಗಳನ್ನು ನೀಡಲಾಗುತ್ತಿದೆ.;

Update: 2025-04-06 07:59 GMT

ಕೇರಳದ ಕೊಚ್ಚಿಯ ಖಾಸಗಿ ಮಾರ್ಕೆಟಿಂಗ್ ಕಂಪನಿಯೊಂದು ಉದ್ದೇಶಿದ ಗುರಿ ತಲುಪದ ಉದ್ಯೋಗಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋವೊಂದು ಬಹಿರಂಗಗೊಂಡಿದೆ. ಈ ವಿಡಿಯೋ(Viral video) ವೈರಲ್ ಆಗಿದ್ದು, ಕಂಪನಿ ಮೇಲೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಉದ್ಯೋಗಿಗಳ ಕುತ್ತಿಗೆಗೆ ಬೆಲ್ಟ್ ಹಾಕಿ, ಚೈನ್‌ಗೆ ಕಟ್ಟಿದ ನಾಯಿಗಳಂತೆ ಮೊಣಕಾಲುಗಳ ಮೇಲೆ ನಡೆಸುತ್ತಿರುವ ದೃಶ್ಯವಿದೆ. ರಾಜ್ಯ ಕಾರ್ಮಿಕ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಈ ಕುರಿತು ತನಿಖೆಗೆ ಮುಂದಾಗಿವೆ.

ಕೊಚ್ಚಿಯ ಕಾಲೂರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರ್ಕೆಟಿಂಗ್ ಕಂಪನಿಯಲ್ಲಿ ಈ ಕೃತ್ಯ ನಡೆದಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ, ಪೊಲೀಸರ ಪ್ರಕಾರ, ಈ ಘಟನೆಯು ಸಮೀಪದ ಪೆರುಂಬಾವೂರ್‌ನಲ್ಲಿ ನಡೆದಿರುವ ಸಾಧ್ಯತೆ ಇದೆ. ಉದ್ಯೋಗಿಯ ಕುತ್ತಿಗೆಗೆ ಬೆಲ್ಟ್ ಕಟ್ಟಿ ಮೊಣಕಾಲುಗಳ ಮೇಲೆ ತೆವಳಿಸುತ್ತಿರುವುದು, ಗುರಿ ತಲುಪದ ಉದ್ಯೋಗಿಗಳನ್ನು ನಾಯಿಗಳಂತೆ ನಡೆಸುವುದು, ನೆಲದ ಮೇಲಿರುವ ನಾಣ್ಯಗಳನ್ನು ನೆಕ್ಕಿಸುವುದು, ಬಟ್ಟೆ ಬಿಚ್ಚಿಸುವುದು ಮತ್ತು ಇತರ ಅವಮಾನಕರ ಶಿಕ್ಷೆಗಳನ್ನು ನೀಡಲಾಗುತ್ತಿದೆ ಎಂದು ಕೆಲವು ಮಾಜಿ ಉದ್ಯೋಗಿಗಳು ಆರೋಪಿಸಿದ್ದಾರೆ.

ಈ ವೀಡಿಯೊ ಸುಮಾರು ಆರು ತಿಂಗಳ ಹಿಂದೆ ಮಾಡಿದ್ದು , ಕಂಪನಿಯ ಮಾಜಿ ಮ್ಯಾನೇಜರ್ ಒಬ್ಬರು ಇದನ್ನು ರೆಕಾರ್ಡ್ ಮಾಡಿದ್ದರು ಎಂದೂ ಹೇಳಲಾಗಿದೆ. ಆ ಮ್ಯಾನೇಜರ್ ಈಗ ಕಂಪನಿಯನ್ನು ತೊರೆದಿದ್ದು, ಈ ವೀಡಿಯೊವನ್ನು ಕಂಪನಿಯ ವಿರುದ್ಧ ಪ್ರತೀಕಾರವಾಗಿ ಬಿಡುಗಡೆ ಮಾಡಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ 

ಈ ಘಟನೆ ಬೆಳಕಿಗೆ ಬಂದ ತಕ್ಷಣ, ಕೇರಳದ ಕಾರ್ಮಿಕ ಸಚಿವ ವಿ. ಶಿವಂಕುಟ್ಟಿ ಅವರು ತಕ್ಷಣದ ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಈ ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸಚಿವರು ಈ ವೀಡಿಯೊವನ್ನು "ಆಘಾತಕಾರಿ" ಎಂದು ಕರೆದಿದ್ದು, "ಕೇರಳದಂತಹ ರಾಜ್ಯದಲ್ಲಿ ಇಂತಹ ಘಟನೆಗಳನ್ನು ಸಹಿಸಲಾಗದು" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ತನಿಖೆ ಆರಂಭವಾಗಿದ್ದು, ಕಂಪನಿಯ ಮಾಲೀಕರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಹೈಕೋರ್ಟ್ ವಕೀಲ ಕುಲತ್ತೂರ್ ಜೈಸಿಂಗ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಉದ್ಯೋಗಿ ಉಲ್ಟಾ ಹೇಳಿಕೆ

ಆಶ್ಚರ್ಯಕರ ಸಂಗತಿಯೆಂದರೆ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಉದ್ಯೋಗಿಯು ಈಗ ಉಲ್ಟಾ ಹೊಡೆದಿದ್ದು, ತಾವು ಯಾವುದೇ ಕಿರುಕುಳಕ್ಕೆ ಒಳಗಾಗಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. "ನಾನು ಇನ್ನೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ವೀಡಿಯೊ ತಿಂಗಳುಗಳ ಹಿಂದೆ ಮಾಜಿ ಮ್ಯಾನೇಜರ್ ಒಬ್ಬರು ಬಲವಂತವಾಗಿ ತೆಗೆದಿದ್ದರು. ಅವರು ಈಗ ಕಂಪನಿಯನ್ನು ತೊರೆದಿದ್ದಾರೆ ಮತ್ತು ಈ ವೀಡಿಯೊವನ್ನು ಕಂಪನಿಯನ್ನು ಅಪಮಾನಿಸಲು ಬಳಸುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.

Tags:    

Similar News