ಶಿಲ್ಪಾಶೆಟ್ಟಿ ಪತಿ ರಾಜ್‌ಕುಂದ್ರಾಗೆ ಸೇರಿದ ಸ್ಥಳಗಳಲ್ಲಿ ಇಡಿ ಶೋಧ

49 ವರ್ಷದ ಕುಂದ್ರಾ ಮತ್ತು ಇತರ ಕೆಲವು ವ್ಯಕ್ತಿಗಳ ಮನೆ ಮತ್ತು ಕಚೇರಿ ಸೇರಿದಂತೆ ಮುಂಬೈ ಮತ್ತು ಉತ್ತರ ಪ್ರದೇಶದ ಕೆಲವು ನಗರಗಳಲ್ಲಿ ಸುಮಾರು 15 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Update: 2024-11-29 13:21 GMT
Raj Kundra

ಅಶ್ಲೀಲ ಮತ್ತು ವಯಸ್ಕರ ಚಲನಚಿತ್ರಗಳ ವಿತರಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಸೇರಿದ ಸ್ಥಳಗಳು ಹಾಗೂ ಇತರ ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಲಯ (ED) ಶುಕ್ರವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

49 ವರ್ಷದ ಕುಂದ್ರಾ ಮತ್ತು ಇತರ ಕೆಲವು ವ್ಯಕ್ತಿಗಳ ಮನೆ ಮತ್ತು ಕಚೇರಿ ಸೇರಿದಂತೆ ಮುಂಬೈ ಮತ್ತು ಉತ್ತರ ಪ್ರದೇಶದ ಕೆಲವು ನಗರಗಳಲ್ಲಿ ಸುಮಾರು 15 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಆವರಣಗಳಲ್ಲಿ ಒಂದರಲ್ಲಿ ಕುಂದ್ರಾ ಅವರನ್ನು ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೇ 2022ರಲ್ಲಿ ನಡೆದ ಈ ಅಕ್ರಮ ಹಣ ವರ್ಗಾವಣೆ ಪ್ರಕರಣವು ಕುಂದ್ರಾ ಮತ್ತು ಇತರರ ವಿರುದ್ಧ ಮುಂಬೈ ಪೊಲೀಸರು ಕನಿಷ್ಠ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಉದ್ಯಮಿ ಮತ್ತು ಇತರ ಕೆಲವರನ್ನು ಪೊಲೀಸರು ಬಂಧಿಸಿ ನಂತರ ಜಾಮೀನು ನೀಡಿದರು.

ಕುಂದ್ರಾ ವಿರುದ್ಧದ ಅಕ್ರಮ ವರ್ಗಾವಣೆ ಎರಡನೇ ಪ್ರಕರಣ ಇದಾಗಿದೆ. ಈ ವರ್ಷದ ಆರಂಭದಲ್ಲಿ, ಕ್ರಿಪ್ಟೋ ಕರೆನ್ಸಿ ಪ್ರಕರಣದಲ್ಲಿ ಕುಂದ್ರಾ ಮತ್ತು ಶೆಟ್ಟಿ ಅವರ 98 ಕೋಟಿ ರೂ.ಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು. ಅದರ ವಿರುದ್ಧ ದಂಪತಿ ಹೈಕೋರ್ಟ್‌ ಮೇಟ್ಟಿಲೇರಿ ತಡೆ ತಂದಿದ್ದರು.

ಅಶ್ಲೀಲ ಚಿತ್ರಗಳ ದಂಧೆಯಲ್ಲಿ ಬಳಸಲಾದ 'ಹಾಟ್‌ಶಾಟ್ಸ್‌ʼ ಅಪ್ಲಿಕೇಶನ್ ನಮ್ಮದೆನ್ನುವುದಕ್ಕೆ ಒಂದು ಸಣ್ಣ ಪುರಾವೆಯೂ ಮುಂಬೈ ಪೊಲೀಸರ ಬಳಿ ಇಲ್ಲ ಎಂದು ಕುಂದ್ರಾ 2021 ರಲ್ಲಿ ಸ್ಥಳೀಯ ಮುಂಬೈ ನ್ಯಾಯಾಲಯಕ್ಕೆ ತಿಳಿಸಿದ್ದರು.

ತನಿಖಾ ಸಂಸ್ಥೆಯ ಪ್ರಕಾರ, ಅಶ್ಲೀಲ ಚಿತ್ರಗಳನ್ನು ಅಪ್ಲೋಡ್ ಮಾಡಲು ಮತ್ತು ಸ್ಟ್ರೀಮಿಂಗ್ ಮಾಡಲು ಆರೋಪಿಗಳು 'ಹಾಟ್‌ಶಾಟ್‌' ಅಪ್ಲಿಕೇಶನ್ ಬಳಸುತ್ತಿದ್ದರು.

ಸುಳ್ಳು ಆರೋಪ ಎಂದು ಕುಂದ್ರಾ

ತನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ ಮತ್ತು ಎಫ್ಐಆರ್‌ನಲ್ಲಿ ಅದನ್ನು ಹೆಸರಿಸಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಅನಗತ್ಯ ಎಳೆದೊಯ್ದಿದ್ದಾರೆ ಎಂದು ಕುಂದ್ರಾ ಕೋರ್ಟ್‌ ಮುಂದೆ ವಾದಿಸಿದ್ದರು.

ಇಬ್ಬರು ಮಹಿಳೆಯರಿಂದ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರೆ. ಇನ್ನೊಬ್ಬ ಮಹಿಳೆ ಮುಂಬೈನಿಂದ 120 ಕಿ.ಮೀ ದೂರದಲ್ಲಿರುವ ಲೋನಾವ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೆಲವು ವೆಬ್ ಸರಣಿಗಳು ಅಥವಾ ಶಾರ್ಟ್‌ ಸ್ಟೋರಿಗಳ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶ ಕೊಡುವುದಾಗಿ ಕಲಾವಿದರಿಗೆ ಆಮಿಷ ಒಡ್ಡಲಾಗಿದೆ ಎಂದು ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿತ್ತು.

ನಮ್ಮನ್ನು ಆಡಿಷನ್‌ಗೆ ಕರೆದಿದ್ದರು. ನಂತರ ಅಶ್ಲೀಲ ಚಿತ್ರಗಳಲ್ಲಿ ನಟಿಸಲು ಒತ್ತಾಯಿಸಿದರು. ಹೀಗಾಗಿ ಅರೆನಗ್ನ ಅಥವಾ ನಗ್ನ ದೃಶ್ಯಗಳಲ್ಲಿ ಅನಿವಾರ್ಯವಾಗಿ ನಟನೆ ಮಾಡುವಂತಾಯಿತು ಎಂದು ತನಿಖಾಧಿಕಾರಿಗಳ ಮುಂದೆ ಕೆಲವರು ಹೇಳಿಕೊಂಡಿದ್ದರು.

ಕುಂದ್ರಾ ಆರ್ಮ್‌ಸ್ಪ್ರೈಮ್‌ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಸ್ಥಾಪಿಸಿದ್ದರು. ಅದು ಲಂಡನ್ ಮೂಲದ ಕೆನ್ರಿನ್ ಪ್ರೈವೇಟ್ ಲಿಮಿಟೆಡ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ವೀಡಿಯೊಗಳನ್ನು ಅಪ್ಲೋಡ್ ಮಾಡಲು ಹಾಟ್ ಶಾಟ್ಸ್ ಅಪ್ಲಿಕೇಶನ್ ಅನ್ನು ಖರೀದಿಸಿತ್ತು ಎಂದು ಪೊಲೀಸರು ತಮ್ಮ ಚಾರ್ಜ್‌ಶೀಟ್‌ನಲ್ಲಿ ಬರೆದುಕೊಂಡಿದ್ದರು.,

ಕುಂದ್ರಾ ಅವರ ಫೋನ್‌ನಲ್ಲಿ ಕೆನ್ರಿನ್ ಮತ್ತು ಅದರ ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿದ ವಾಟ್ಸ್‌ಆಪ್‌ ಚಾಟ್‌ಗಳಿವೆ. 119 ವಯಸ್ಕರ ಚಲನಚಿತ್ರಗಳನ್ನು ಒಬ್ಬ ವ್ಯಕ್ತಿಗೆ 1.2 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡುವ ಬಗ್ಗೆ ಚರ್ಚಿಸಿದ ಸಂಭಾಷಣೆಯೂ ಸಿಕ್ಕಿದೆ ಎಂದು ಪೊಲೀಸರು ಆರೋಪಿಸಿದ್ದರು. 

Tags:    

Similar News