ಮುಂಬಯಿ ಏರ್‌ಪೋರ್ಟಲ್ಲಿ ಆತ್ಮೀಯರನ್ನು ಬಿಟ್ಟು ಹೋಗುವ ಪ್ರಯಾಣಿಕರಿಗೆ ಸಮಾಧಾನ ಮಾಡುತ್ತವೆ ಶ್ವಾನಗಳು
ಯೋಜನೆ ಹೆಸರು 'ಫಾಫೆಕ್ಟ್. ಟರ್ಮಿನಲ್ 2 ರಲ್ಲಿ ಇದನ್ನು ಪರಿಚಯಿಸಲಾಗಿದೆ. ಅಂದ ಹಾಗೆ ಈ ರೀತಿಯ ಉಪಕ್ರಮವನ್ನು ಆರಂಭಿಸಿದ ಏಕೈಕ ನಿಲ್ದಾಣ ಎಂಬ ಖ್ಯಾತಿಗೆ ಮುಂಬಯಿ ನಿಲ್ದಾಣ ಪಾತ್ರವಾಗಿದೆ.
ಅಪ್ಪಾ, ಜೋಪಾನ, ತಲೆಕೆಡಿಸಿಕೊಳ್ಳಬೇಡ, ಅಮ್ಮಾ ಅಳಬೇಡ, ಏನೇ ಸಮಸ್ಯೆಯಾದರೂ ತಕ್ಷಣ ಕರೆ ಮಾಡಿ. ಪ್ರತಿದಿನ ರಾತ್ರಿ 10 ಗಂಟೆಗೆ ನಾನು ವೀಡಿಯೊ ಕಾಲ್ ಮಾಡುತ್ತೇನೆ" ಎಂದು ಸುಂದರ್ ಮತ್ತು ಅನಸೂಯಾ ಅವರ ಏಕೈಕ ಪುತ್ರ ಸಂಜೀವ್ ಕಣ್ಣೀರು ಸುರಿಸುತ್ತಾ ಹೇಳುತ್ತಾನೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೊರಟಿರುವ ತಮ್ಮ ಮಗನಿಗೆ ವಿದಾಯ ಹೇಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಮಗ ಏರ್‌ಪೋರ್ಟ್ ಒಳಗೆ ಹೋಗಿ ಕಣ್ಣಿನಿಂದ ದೂರ ಆಗುವ ತನಕವೂ ಅವರು ಸಮಾಧಾನ ಮಾಡಿಕೊಳ್ಳುತ್ತಲೇ ಇದ್ದರು. ಹೆತ್ತವರನ್ನು ಬಿಟ್ಟು ಹೋಗುತ್ತಿರುವ ಸಂಜೀವ್‌ಗೆ ಅಳು ತಡೆಯಲು ಸಾಧ್ಯವಾಗುತ್ತಿಲ್ಲ. ಆದರೂ ಲಗೇಜ್ ಜತೆ ಸೆಕ್ಯುರಿಟಿ ಚೆಕಿಂಗ್ ಪಾಯಿಂಟ್ ಕಡೆಗೆ ಹೊರಡುತ್ತಾನೆ. ಎಲ್ಲವೂ ಮುಗಿಸಿ ಕುಳಿತುಕೊಂಡ ಸಂಜೀವ್ ಹತ್ತಿರಕ್ಕೆಕ ನಾಯಿಯೊಂದು ಬರುತ್ತದೆ. ಆತನನ್ನು ಮೂಸಿ ನೋಡುತ್ತದೆ. ಬೇಸರದಲ್ಲಿರುವುದು ಅದಕ್ಕೆ ಗೊತ್ತಾಗುತ್ತದೆ. ತಕ್ಷಣವೇ ನಾನಾ ಆಟಗಳನ್ನು ಆಡಿ ಸಂಜೀವ್‌ನನ್ನು ಸಮಾಧಾನ ಮಾಡಲು ಅದು ಯತ್ನಿಸುತ್ತದೆ. ಅಪ್ಪ, ಅಮ್ಮನಿಂದ ದೂರ ಹೋಗುತ್ತಿರುವ ಬೇಸರದಲ್ಲಿದ್ದ ಸಂಜೀವ್‌ಗೆ ಸಣ್ಣ ಖುಷಿ ಆಗುತ್ತದೆ. ಮೆಲ್ಲನೆ ನಾಯಿಯನ್ನು ಮುದ್ದಾಡುತ್ತಾನೆ. ಸಾಕಷ್ಟು ಹೊತ್ತು ಅದರ ಜತೆ ಕಾಲ ಕಳೆಯುತ್ತಾನೆ.
ಈ ನಾಯಿ ಯಾರದ್ದೋ ಅಲ್ಲ. ವಿಮಾನ ನಿಲ್ದಾಣಕ್ಕೆ ಸೇರಿದ್ದು. ಈ ನಾಯಿಗಳಿಗೆ ಅದೇ ಕೆಲಸ. ಬೇಸರದಲ್ಲಿ ಇರುವವರನ್ನು ಸಮಾಧಾನ ಮಾಡುವುದು. ಅಂದ ಹಾಗೆ ಇದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎಎಲ್) ಅಧಿಕಾರಿಗಳು ಉಪಾಯ. ಮುದ್ದಿನ ನಾಯಿಗಳ ಜತೆ ಆಡುವ ಅವಕಾಶವನ್ನು ಪ್ರಯಾಣಿಕರಿಗೆ ಕಲ್ಪಿಸುವುದು. ಆ ಯೋಜನೆ ಹೆಸರು 'ಫಾಫೆಕ್ಟ್. ಟರ್ಮಿನಲ್ 2ರಲ್ಲಿ ಇದನ್ನು ಪರಿಚಯಿಸಲಾಗಿದೆ. ಈ ರೀತಿಯ ಉಪಕ್ರಮವನ್ನು ಆರಂಭಿಸಿದ ಏಕೈಕ ನಿಲ್ದಾಣ ಎಂಬ ಖ್ಯಾತಿಯೂ ಮುಂಬಯಿ ನಿಲ್ದಾಣಕ್ಕೆ ಇದೆ.
ಮನೆಯವರನ್ನು ಬಿಟ್ಟು ಪ್ರಯಾಣ ಮಾಡುವ ವೇಳೆ ನಾನಾ ಒತ್ತಡದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇಂಥ ಎಲ್ಲ ಸಮಸ್ಯೆಗಳಿಗೆ ʼಫಾಫೆಕ್ಟ್ʼ ಸಿದ್ದ ಔಷ. ಪ್ರಯಾಣಿಕರು ಈ ಮುದ್ದಿನ ನಾಯಿಗಳೊಂದಿಗೆ ಸಮಯ ಕಳೆಯುವ ಮೂಲಕ ನೋವು ಮರೆಯಬಹುದು.
ಫಾಫೆಕ್ಟ್‌ನಲ್ಲಿ ಯಾವ ನಾಯಿಗಳಿವೆ
ಏರ್‌ಪೋರ್ಟ್‌ನಲ್ಲಿ 9 ತಳಿಯ ನಾಯಿಗಳನ್ನು ತರಬೇತಿ ನೀಡಿ ನಿಯೋಜಿಸಲಾಗಿದೆ. . ಗೋಲ್ಡನ್ ರಿಟ್ರೀವರ್, ಮಾಲ್ಟೀಸ್, ಹಸ್ಕಿ, ಶಿಹ್ ತ್ಸು, ಲಾಸಾ ಅಪ್ಸೊ ಮತ್ತು ಲ್ಯಾಬ್ರಡಾರ್ ಇಲ್ಲಿದೆ. ಪ್ರತಿ ನಾಯಿಗೆ ವಿಭಿನ್ನ ಹೆಸರು ಇರುತ್ತದೆ. ಈ ಸಾಕುಪ್ರಾಣಿಗಳು ಟರ್ಮಿನಲ್ -2 ರಲ್ಲಿ ಲಭ್ಯವಿದೆ. ಟರ್ಮಿನಲ್ -2 ಅಂತರರಾಷ್ಟ್ರೀಯ ಪ್ರಯಾಣದ ಪ್ರದೇಶವಾಗಿದ್ದು, ಟರ್ಮಿನಲ್-3. ದೇಶೀಯ ವಿಮಾನಗಳ ಪ್ರದೇಶವಾಗಿದೆ.
ಈ ನಾಯಿಗಳನ್ನು ಇಮಿಗ್ರೇಷನ್ ಏರಿಯಾದಲ್ಲಿ ಬಿಡಲಾಗಿದೆ. ಸಾಕುಪ್ರಾಣಿಗಳನ್ನು ಇಷ್ಟಪಡದವರು ಯಾರೂ ಇಲ್ಲ. ಮನಸ್ಸಿನ ನೋವನ್ನು ಮರೆಯಲು ಸಾಕುಪ್ರಾಣಿಗಳು ಸಹಾಯ ಮಾಡುತ್ತವೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಹೀಗಾಗಿ ಪ್ರಯಾಣಿಕರ ಬೇಸರ ಕಳೆಯಲೆಂದು ಈ ಶ್ವಾನಗಳನ್ನು ಬಿಡಲಾಗಿದೆ. ಶುಕ್ರವಾರದಿಂದ ಭಾನುವಾರದವರೆಗೆ ಶ್ವಾನಗಳ ತಂಡ ವಿಮಾನ ನಿಲ್ದಾಣದಲ್ಲಿ ಇರುತ್ತದೆ.
ಇದು ಹೊಸ ಯೋಜನೆ ಅಲ್ಲ. ಹಿಂದೆಯೂ ಇತ್ತು. ಇದು ಬಹಳ ಜನಪ್ರಿಯವಾಗಿತ್ತು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಯೋಜನೆಯನ್ನು ಹಿಂತೆಗೆದುಕೊಳ್ಳಲಾಯಿತು. ಈಗ ಅದು ಮತ್ತೆ ಪ್ರಾರಂಭವಾಗಿದೆ.
ಪ್ರಯಾಣಿಕರಲ್ಲಿ ಆತಂಕವನ್ನು ಕಡಿಮೆ ಮಾಡುವುದು ಮತ್ತು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಖುಷಿಯಾಗಿ ಇರುವುದನ್ನು ಖಚಿತಪಡಿಸಿಕೊಳ್ಳುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಸಾಕು ನಾಯಿಗಳಲ್ಲಿ, ಬೆಲ್ಲಾ (ಗೋಲ್ಡನ್ ರಿಟ್ರೀವರ್) ವಿಶೇಷವಾಗಿ ತರಬೇತಿ ಪಡೆದ ನಾಯಿಯಾಗಿದೆ. ಅದು ಸಾಮಾನ್ಯ ಪ್ರಯಾಣಿಕರಿಂದ ಹಿಡಿದು ವಿಶೇಷ ಚೇತನರವರೆಗೆ ಎಲ್ಲರೊಂದಿಗೆ ಚೆನ್ನಾಗಿ ಆಡಲು ತರಬೇತಿ ನೀಡಲಾಗಿದೆ.
ತರಬೇತಿ ಪಡೆದ ಶ್ವಾನಗಳು
ಅನೇಕರು ತಮ್ಮ ಪ್ರಯಾಣದ ಅವಧಿಯಲ್ಲಿ ಆತಂಕ ಮತ್ತು ಕಾಣದ ಉದ್ವೇಗ ಹೊಂದಿರುತ್ತಾರೆ . ಅದನ್ನು ಕಡಿಮೆ ಮಾಡಲು ಈ ಯೋಜನೆ ಉಪಯುಕ್ತವಾಗಿದೆ. ಮುಂಬೈ ವಿಮಾನ ನಿಲ್ದಾಣವನ್ನು ಈಗ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ (ಎಎಎಚ್ಎಲ್) ನಿರ್ವಹಿಸುತ್ತಿದೆ. ಈ ಶ್ವಾನ ದಳದ ನಿರ್ವಹಣೆಗೆ ಏರ್ ಪೋರ್ಟ್ ಅಧಿಕಾರಿಗಳು ಸಹ ಜವಾಬ್ದಾರರಾಗಿರುತ್ತಾರೆ.
ಇಲ್ಲಿಯವರೆಗೆ, ಕಳ್ಳರು, ಶಂಕಿತರು ಮತ್ತು ಅಪರಾಧದ ಕುರುಹುಗಳನ್ನು ಪತ್ತೆಹಚ್ಚಲು ನಾಯಿಗಳನ್ನು ಬಿಡಲಾಗುತ್ತಿತ್ತು. ಈಗ ಈ ನಾಯಿಗಳನ್ನು ಮಾನವರ ಮನಸ್ಥಿತಿಯನ್ನು ಪತ್ತೆಹಚ್ಚಲು ವಿಮಾನ ನಿಲ್ದಾಣದಲ್ಲಿ ಬಿಡಲಾಗಿದೆ. ನಾಯಿಗಲೂ ಪ್ರಯಾಣಿಕರು ಕುಳಿತಿರುವ ಸ್ಥಳಕ್ಕೆ ಹೋಗಿ ವಾಸನೆ ನೋಡುತ್ತದೆ. ಸಾಕುಪ್ರಾಣಿಗಳನ್ನು ನೋಡಿದಾಗ ಪ್ರತಿಕ್ರಿಯಿಸುವುದು ಮಾನವ ಸ್ವಭಾವ. ಈ ನಾಯಿಗಳು ಹತ್ತಿರ ಬಂದಾಗ, ಅವುಗಳನ್ನು ಚುಂಬಿಸುವುದು ಮತ್ತು ಸ್ವಲ್ಪ ಸಮಯ ಆಡುವುದು ಒತ್ತಡ ಮತ್ತು ಮನಸ್ಸಿನ ನೋವನ್ನು ಕಡಿಮೆ ಮಾಡುತ್ತದೆ.
ಅಂತರರಾಷ್ಟ್ರೀಯ ವಿಮಾನಗಳ ನಿರ್ಗಮನದ ನಂತರ ಈ ನಾಯಿಗಳನ್ನು ದೇಶೀಯ ವಿಮಾನ ಸೇವೆಗಳಿಗಾಗಿ ಪ್ರಯಾಣಿಕರು ಕಾಯುತ್ತಿರುವ ಪ್ರದೇಶದಲ್ಲಿ ಬಿಡಲಾಗುತ್ತದೆ. ಈ ಶ್ವಾನದಳಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರ ಚಲಿಸುತ್ತವೆ. ನಾಯಿಗಳು ನೀಡುವ ಈ ಸೇವೆಗೆ ಯಾವುದೇ ಶುಲ್ಕವಿಲ್ಲ.