ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಕೆ

ಅರವಿಂದ ಕೇಜ್ರಿವಾಲ್‌ ಅವರು ಇಡಿ ದಾಖಲಿಸಿದ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ, ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಬಂಧಿಸಿದ್ದರಿಂದ ಇನ್ನೂ ತಿಹಾರ್‌ ಸೆರೆಮನೆಯಲ್ಲಿದ್ದಾರೆ;

Update: 2024-07-29 08:54 GMT

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಸೋಮವಾರ (ಜುಲೈ 29) ತಿಳಿಸಿದ್ದಾರೆ. 

ರೌಸ್ ಅವೆನ್ಯೂದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ, ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಅವರನ್ನು ಬಂಧಿಸಿರುವುದರಿಂದ ಅವರು ಇನ್ನೂ ಜೈಲಿನಲ್ಲಿದ್ದಾರೆ. 

ಎಸ್‌ಸಿ ಏನು ಹೇಳಿದೆ?: ಇಡಿ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ, ಸಿಬಿಐ ಪ್ರಕರಣದಲ್ಲಿ ಜೈಲುವಾಸಕ್ಕೆ ಸರ್ಕಾರದ ಆಕ್ಷೇಪಣೆಯಲ್ಲಿ ಯಾವುದೇ ಅರ್ಹತೆಯಿಲ್ಲ ಎಂದು ನ್ಯಾಯಾಲಯ ತಳ್ಳಿಹಾಕಿದೆ. ಮುಖ್ಯಮಂತ್ರಿ ತಮ್ಮ ವಿರುದ್ಧ ವಿವಿಧ ರಾಜ್ಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. 

ʻಅವರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಸುಮಾರು 30-40 ಪ್ರಕರಣಗಳಿವೆ; ಅವರು ಸಿಬಿಐ ಪ್ರಕರಣದಲ್ಲಿ ಬಂಧನದಲ್ಲಿದ್ದಾರೆ. ಈ ಮೂಲಭೂತ ಹಕ್ಕನ್ನು ನಿರ್ದಿಷ್ಟ ಪ್ರಕರಣವೊಂದಕ್ಕೆ ಸೀಮಿತಗೊಳಿಸುವುದು ಮತ್ತು ಪ್ರತಿ ಪ್ರಕರಣದಲ್ಲೂ ಸ್ವತಂತ್ರ ಅರ್ಜಿಗೆ ಒತ್ತಾಯಿಸುವುದು ಸಮೀಪದೃಷ್ಟಿಯ ನಿಲುವು ಆಗಲಿದೆ,ʼ ಎಂದು ನ್ಯಾಯಾಲಯ ಹೇಳಿದೆ. 

ʻಪ್ರತಿ ಪ್ರಕರಣದಲ್ಲೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕೆಂದು ಕೇಳುವುದರಿಂದ ನ್ಯಾಯ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಮತ್ತು ಅವರಿಗೆ ಕಾನೂನು ಸಹಾಯದ ಹಕ್ಕನ್ನು ಪರೋಕ್ಷವಾಗಿ ನಿರಾಕರಿಸುತ್ತದೆ,ʼ ಎಂದು ನ್ಯಾಯಾಲಯ ಹೇಳಿದೆ.

ವಕೀಲರ ಜೊತೆ ಸಭೆ ನಡೆಸಲು ಅನುಮತಿ: ದೆಹಲಿ ಹೈಕೋರ್ಟ್ ಜುಲೈ 25 ರಂದು ಕೇಜ್ರಿವಾಲ್‌ ಅವರಿಗೆ ಜೈಲಿನಲ್ಲಿ ವಕೀಲರೊಡನೆ ಪ್ರತಿ ವಾರ ಎರಡು ಹೆಚ್ಚುವರಿ ವರ್ಚುವಲ್ ಸಭೆ ನಡೆಸಲು ಅನುಮತಿ ನೀಡಿತು. ಈವರೆಗೆ ಅವರು ಜೈಲು ನಿಯಮಗಳಿಗೆ ಅನುಸಾರವಾಗಿ ವಾರಕ್ಕೆ ಎರಡು ಸಭೆ ಮಾತ್ರ ನಡೆಸಬಹುದಿತ್ತು. ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ನ್ಯಾಯಯುತ ವಿಚಾರಣೆ ಮತ್ತು ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯದ ಮೂಲಭೂತ ಹಕ್ಕನ್ನು ಗುರುತಿಸಿ ಈ ಪರಿಹಾರ ನೀಡಿದರು.

ಕೇಜ್ರಿವಾಲ್‌ ದೇಶಾದ್ಯಂತ ಸುಮಾರು 35 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನ್ಯಾಯಯುತ ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ವಕೀಲರೊಂದಿಗೆ ಎರಡು ಹೆಚ್ಚುವರಿ ಸಭೆ ಅಗತ್ಯವಿದೆ ಎಂದು ಅವರ ಪರ ವಕೀಲರು ಮನವಿ ಸಲ್ಲಿಸಿದರು. 

ಇಡಿ, ತಿಹಾರ್ ಜೈಲು ಅಧಿಕಾರಿಗಳಿಂದ ವಿರೋಧ: ಮನವಿಗೆ ಇಡಿ ಮತ್ತು ತಿಹಾರ್ ಜೈಲು ಅಧಿಕಾರಿಗಳ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. 100 ಪ್ರಕರಣಗಳು ಬಾಕಿ ಉಳಿದಿರುವ ಅನೇಕ ಕೈದಿಗಳಿದ್ದಾರೆ ಮತ್ತು ಅವರಿಗೆ ಪ್ರತಿ ವಾರ ವಕೀಲರೊಂದಿಗೆ ಎರಡು ಸಭೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ತಿಹಾರ್ ಜೈಲು ಅಧಿಕಾರಿಗಳು ಹೇಳಿದರು. 

ಕೇಜ್ರಿವಾಲ್ ಅವರು ವಕೀಲರೊಂದಿಗಿನ ಸಭೆಗಳನ್ನು ದೆಹಲಿ ಸರ್ಕಾರದ ಮಂತ್ರಿಗಳಿಗೆ ಸೂಚನೆಗಳನ್ನು ಕಳುಹಿಸಲು ಬಳಸುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ.

Tags:    

Similar News