ಸುಲ್ತಾನ್‌ಪುರ (ಯುಪಿ)- ಮಾನನಷ್ಟ ಮೊಕದ್ದಮೆಯೊಂದರ ವಿಚಾರಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಇಲ್ಲಿಯ ಸಂಸದ-ಶಾಸಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಅರ್ಜಿದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 12ಕ್ಕೆ ನಿಗದಿಪಡಿಸಿದೆ. ಅಂದು ರಾಹುಲ್ ನ್ಯಾಯಾಲಯಕ್ಕೆ ಹಾಜರಾಗುವ ಅಗತ್ಯವಿಲ್ಲ ಎಂದು ಕೋರ್ಟ್ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಭಿಷೇಕ್ ಸಿಂಗ್ ರಾಣಾ ಖಚಿತಪಡಿಸಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ಆಗಸ್ಟ್ 4, 2018 ರಂದು ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಫೆಬ್ರವರಿ 20 ರಂದು ಪ್ರಕರಣದಲ್ಲಿ ನ್ಯಾಯಾಲಯ ರಾಹುಲ್ ಅವರಿಗೆ ಜಾಮೀನು ನೀಡಿತು.